22,006 ಕೋಟಿ ರೂ. ಸಾಲದಿಂದ ಬಿಗ್ ರಿಲೀಫ್ ಬೆನ್ನಲ್ಲೇ ಸುಭಾಷ್ ಚಂದ್ರ ಶಪಥ
- ಬರೋಬ್ಬರಿ 22,000 ಕೋಟಿ ರೂ. ಸಾಲ ಮನ್ನಾ?
- 6.5 ಕೋಟಿ ರೂ. ಸಾಲ ತೀರ್ಮಾನದ ಬಳಿಕ ಸುಭಾಷ್ ಚಂದ್ರ ಶಪಥ
- NCLT ಆದೇಶ ಬೆನ್ನಲ್ಲೇ ಸ್ವಿಟ್ಜರ್ಲೆಂಡ್‌ಗೆ ಹಾರಲು ಸಜ್ಜಾದ ಮಾಧ್ಯಮ ದೈತ್ಯ
ನವದೆಹಲಿ: ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಹಾಗೂ ಮಾಧ್ಯಮ ಲೋಕದ ದೈತ್ಯ ಉದ್ಯಮಿ ಸುಭಾಷ್ ಚಂದ್ರ (Subhash Chandra) ಅವರಿಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಭಾರಿ ರಿಲೀಫ್ ನೀಡಿದೆ. ಅವರ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಬರೋಬ್ಬರಿ 22,006.57 ಕೋಟಿ ರೂ. ಸಾಲದ ಪೈಕಿ ಕೇವಲ 6.5 ಕೋಟಿ ಪಾವತಿಸುವ ಮರುಪಾವತಿ ಯೋಜನೆಗೆ ಅಂಕಿತ ಹಾಕಲಾಗಿದೆ.
ಈ ಮೂಲಕ ಚಂದ್ರ ಅವರಿಗೆ ಸಾಲ ನೀಡಿದ್ದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಶೇ.99.97ರಷ್ಟು ನಷ್ಟವನ್ನು ಭರಿಸಬೇಕಾಗಿ ಬಂದಿದ್ದು, ಕೇವಲ 0.03% ನಷ್ಟು ಮೊತ್ತ ಮಾತ್ರ ವಸೂಲಿಯಾದಂತಾಗಿದೆ. ಇನ್ನು, ಎನ್ಸಿಎಲ್ಟಿ ಆದೇಶದ ಬಳಿಕ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಸುಭಾಷ್ ಚಂದ್ರ, ನನ್ನ ಬಳಿಯಿದ್ದ ಉಳಿದಿದ್ದ 6.5 ಕೋಟಿ ರೂ. ಹಣವನ್ನು ಬಾಕಿಯಾಗಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಬಾಡಿಗೆ ಮನೆಯಿಂದಲೇ ಬದುಕು
"ನಾನಿಂದು ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಯಾಗಿ ಮಾತನಾಡುತ್ತಿಲ್ಲ. ನನ್ನ ಬಳಿ ಉಳಿದಿದ್ದ ಕಡೆಯ 6.5 ಕೋಟಿ ಹಣವನ್ನು ಸಾಲಗಾರರ ಪಾವತಿಗೆ ಮೀಸಲಿಟ್ಟಿದ್ದೇನೆ. ನನ್ನ ಬಳಿ ಸದ್ಯಕ್ಕೆ ಒಂದು ಚಿಕ್ಕ ಮನೆಯಿದ್ದು, ಅದನ್ನು ಬಾಡಿಗೆಗೆ ಕೊಟ್ಟಿದ್ದೇನೆ. ಇದರಿಂದ ಪ್ರತಿ ತಿಂಗಳು ಬರುತ್ತಿರುವ ಬಾಡಿಗೆ ಹಣದಿಂದಲೇ ನನ್ನ ದೈನಂದಿನ ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಮತ್ತೆ ಜೀರೋದಿಂದ ಬದುಕು
"ನನಗೆ ಯಾವುದೇ ಬೇಸರವಿಲ್ಲ. ನಾನು ಮತ್ತೆ ಹಣವನ್ನು ಸಂಪಾದಿಸುತ್ತೇನೆ. ನಾನು ಹೊಸ ಹಾದಿ ಸೃಷ್ಟಿಸುವವನು. ಒಳ್ಳೆಯ ಮತ್ತು ಹೊಸ ಕಾರ್ಯಗಳನ್ನು ಮಾಡುವುದು ಹೇಗೆಂದು ನನಗೆ ಗೊತ್ತಿದೆ. ಅದನ್ನು ಮುಂದುವರಿಸುತ್ತೇನೆ. ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿರುವ ಸ್ವಿಟ್ಜರ್ಲೆಂಡ್‌ನ ತಮ್ಮ ಸ್ನೇಹಿತರೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ, ಮುಂದಿನ ಒಂದೆರೆಡು ವಾರಗಳಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವೆ ಎಂದರು.
ಯಾರೀ ಸುಭಾಷ್ ಚಂದ್ರ?
ಸುಭಾಷ್ ಚಂದ್ರ ಅವರು ಓರ್ವ ಭಾರತದ ಹೆಸರಾಂತ ಮಾಧ್ಯಮ ರಂಗದ ಉದ್ಯಮಿ. ‘ಎಸ್ಸೆಲ್ ಗ್ರೂಪ್’ ಸಂಸ್ಥೆಯ ಸಂಸ್ಥಾಪಕ ಹಾಗೂ ನೆಟ್‌ವರ್ಕ್‌ನ ಸೃಷ್ಟಿಕರ್ತ. ಇವರನ್ನು ಭಾರತೀಯ ಕಿರುತೆರೆಯ ಪಿತಾಮಹ ಎಂದೂ ಗುರುತಿಸಲಾಗಿದೆ. ತಮ್ಮ ಕ್ಷೇತ್ರಗಳಿಗೆ ಅಗತ್ಯ ಮೀರಿ ಸಾಲ ಪಡೆದು ಹೂಡಿಕೆ ಮಾಡಿದ್ದರಿಂದ ಭಾರಿ ನಷ್ಟ ಅನುಭವಿಸಿದ್ದ ಅವರು, ಕಂಪನಿಗಳ ಸಾಲ ಹೆಚ್ಚಾಗಿ, ಸುಮಾರು 22,000 ಕೋಟಿಗೂ ಅಧಿಕ ಸಾಲದ ಸುಳಿಗೆ ಸಿಲುಕಿದರು. ಇತ್ತೀಚೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಇವರ ವೈಯಕ್ತಿಕ ದಿವಾಳಿತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 6.5 ಕೋಟಿ ರೂ. ಪಾವತಿಗೆ ಅಂಕಿತ ಹಾಕುವ ಮೂಲಕ ಸಾಲ ಪ್ರಕರಣವನ್ನು ಇತ್ಯರ್ಥ ಮಾಡಿದೆ. ಈ ಖುಷಿಯಲ್ಲೇ ಅವರು ಮತ್ತೆ ಶೂನ್ಯದಿಂದ ಹೊಸ ಉದ್ಯಮ ಆರಂಭಿಸುವತ್ತ ಮುಖಮಾಡಿದ್ದಾರೆ,(ಏಜೆನ್ಸೀಸ್).