ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭದ್ರತಾ ಪಡೆಗಳು, ಮಾವೋವಾದಿ ನಾಯಕ ಅನಲ್​ ದಾ 
ದೇಶ

ಜಾರ್ಖಂಡ್​ನಲ್ಲಿ ಮುಂದುವರಿದ ನಕ್ಸಲ್​ ಬೇಟೆ: ಭದ್ರತಾ ಪಡೆಗಳ ಗುಂಡಿಗೆ ಮಾವೋವಾದಿ ನಾಯಕ ಅನಲ್ ದಾ ಸೇರಿ 15 ಜನ ಬಲಿ | Naxal

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್​ನಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳಿಂದ ನಡೆದ ಎನ್‌ಕೌಂಟರ್‌
  • ಭದ್ರತಾ ಪಡೆಗಳ ಗುಂಡಿಗೆ ಮಾವೋವಾದಿ ನಾಯಕ ಅನಲ್​ ದಾ ಬಲಿ
  • ಅನಲ್​ ದಾ ತಲೆಗೆ ಒಂದು ಕೋಟಿ ಬಹುಮಾನ ಘೋಷಿಸಿದ್ದ ಭಾರತ ಸರ್ಕಾರ
ಜಾರ್ಖಂಡ್: ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿವೆ. ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 15 ನಕ್ಸಲ (Naxal) ರನ್ನು ಹೊಡೆದುರುಳಿಸಿದ್ದು, ಅವರಲ್ಲಿ ಪ್ರಮುಖ ನಕ್ಸಲ್​ ನಾಯಕ ಅನಲ್ ದಾ (Anal Da) ಕೂಡ ಸೇರಿದ್ದಾನೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಭದ್ರತಾ ಪಡೆಗಳ ಗುಂಡಿಗೆ ಸಾವನ್ನಪ್ಪಿದ ಅನಲ್ ದಾ ಇವನ ತಲೆಗೆ ಭಾರತ ಸರ್ಕಾರವು ಸುಮಾರು ಒಂದು ಕೋಟಿ ಬಹುಮಾನವನ್ನು ಘೋಷಿಸಿತ್ತು. ನಕ್ಸಲರ ಉಪಸ್ಥಿತಿಯ ಬಗ್ಗೆ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು. ಚೈಬಾಸಾದ ದಟ್ಟ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಭದ್ರತಾ ಪಡೆಗಳ ಮೇಲೆ ನಕ್ಸಲರು ಗುಂಡು ಹಾರಿಸಿದಾಗ ಭದ್ರತಾ ಪಡೆಗಳಿಂದ ಪ್ರತಿದಾಳಿ ನಡೆಯಿತು.

ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶ

ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆಗಳು ನಡೆಯುತ್ತಿದ್ದು, ನಕ್ಸಲರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ. ಎನ್​ಕೌಂಟರ್​ನಲ್ಲಿ ಸತ್ತ ನಕ್ಸಲರಿಂದ ಎರಡು ಎಕೆ 47 ರೈಫಲ್​, ಎರಡು .303 ರೈಫಲ್, ಎರಡು ಗ್ರೇನೆಡ್​ ಲಾಂಚರ್​ ಹಾಗೂ ಒಂದು ನಾಸಾ ರೈಫಲ್​ನ್ನು ವಶ ಪಡಿಸಿಕೊಳ್ಳಲಾಗಿದೆ.

ಬಿಜಾಪುರದಲ್ಲಿ 52 ನಕ್ಸಲರು ಶರಣಾಗತಿ

ಇದರ ನಡುವೆ, ಗುರುವಾರ (ಜ.15) ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 21 ಮಹಿಳೆಯರು ಸೇರಿದಂತೆ 52 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸ್​ ಆಧಿಕಾರಿಗಳು ತಿಳಿಸಿದ್ದಾರೆ. ಶರಣಾದ 49 ನಕ್ಸಲರ ತಲೆಗೆ ಸರ್ಕಾರ ಒಟ್ಟು 1.41 ಕೋಟಿ ರೂ.ಗಳಿಗೂ ಹೆಚ್ಚಿನ ಬಹುಮಾನವನ್ನು ಘೋಷಿಸಿತ್ತು.
ಶರಣಾದ ಕಾರ್ಯಕರ್ತರು ದಂಡಕಾರಣ್ಯ ವಿಶೇಷ ವಲಯ ಸಮಿತಿ ಆಂಧ್ರ-ಒಡಿಶಾ ಗಡಿ ವಿಭಾಗ ಮತ್ತು ಮಹಾರಾಷ್ಟ್ರದ ಮಾವೋವಾದಿಗಳ ಭಮ್ರಾಗಢ ಪ್ರದೇಶ ಸಮಿತಿಯಲ್ಲಿ ಸಕ್ರಿಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).