ದೇಶ

ನವರಾತ್ರಿ ನವಶಕ್ತಿಗಳ ಸಂಭ್ರಮಾಚರಣೆ

ಭಾರತದಲ್ಲಿ ದೇವತಾ ಪದ್ಧತಿ ಎಂಬುದು ಆರು ಬಗೆಯಾಗಿ ಹೊರಹೊಮ್ಮಿದೆ. ಅದನ್ನು ಷಣ್​ಮತಗಳು ಎಂದು ಕರೆಯುತ್ತಾರೆ. ವೈಷ್ಣವ, ಶೈವ, ಶಾಕ್ತೇಯ, ಗಾಣಪತ್ಯ, ಸ್ಕಂದ ಹಾಗೂ ಸೌರ. ಈ ಷಣ್​ಮತಗಳಿಗೆ ಒಂದು ರೂಪವನ್ನು ಕೊಟ್ಟು, ವಿಧಿವಿಧಾನಗಳನ್ನು ನಿರ್ಣಯಿಸಿ, ರೀತಿರಿವಾಜುಗಳನ್ನು ಶುದ್ಧಗೊಳಿಸಿ ಸಮಾಜಕ್ಕೆ ಧಾರೆಯೆರೆದಿದ್ದಾರೆ.

(ಲೇಖಕರು ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರು)

ಭಾರತದಲ್ಲಿ ದೇವತಾ ಪದ್ಧತಿ ಎಂಬುದು ಆರು ಬಗೆಯಾಗಿ ಹೊರಹೊಮ್ಮಿದೆ. ಅದನ್ನು ಷಣ್​ಮತಗಳು ಎಂದು ಕರೆಯುತ್ತಾರೆ. ವೈಷ್ಣವ, ಶೈವ, ಶಾಕ್ತೇಯ, ಗಾಣಪತ್ಯ, ಸ್ಕಂದ ಹಾಗೂ ಸೌರ. ಈ ಷಣ್​ಮತಗಳಿಗೆ ಒಂದು ರೂಪವನ್ನು ಕೊಟ್ಟು, ವಿಧಿವಿಧಾನಗಳನ್ನು ನಿರ್ಣಯಿಸಿ, ರೀತಿರಿವಾಜುಗಳನ್ನು ಶುದ್ಧಗೊಳಿಸಿ ಸಮಾಜಕ್ಕೆ ಧಾರೆಯೆರೆದಿದ್ದಾರೆ. ವೈಷ್ಣವ ಎಂದರೆ ಶ್ರೀವಿಷ್ಣುವನ್ನು ಆರಾಧಿಸುವುದು, ಶೈವ ಎಂದರೆ ಶಿವನನ್ನು ಆರಾಧಿಸುವುದು, ಗಾಣಪತ್ಯ ಎಂದರೆ ಗಣಪತಿ ಪ್ರಧಾನ ದೇವತೆ, ಸ್ಕಂದ ಎಂದರೆ ಸುಬ್ರಹ್ಮಣ್ಯ ದೇವತಾ ಪೂಜೆ, ಸೌರ ಎಂದರೆ ಸೂರ್ಯನನ್ನು ಪ್ರಧಾನ ದೇವತೆಯಾಗಿ ಪೂಜಿಸುವುದು. ಈ ಐದಕ್ಕೂ ಮೂಲ ಹಾಗೂ ಮಾತೃಸ್ಥಾನವಾಗಿರುವಂತೆ ಶಾಕ್ತೇಯ ಎಂಬ ಒಂದು ಗಣವುಂಟು. ಶಾಕ್ತೇಯ ಎಂದರೆ ಶಕ್ತಿಯ ಮೂಲವನ್ನು ಆರಾಧಿಸುವುದು. ಶಾಕ್ತೇಯರು ಎಂದರೆ ಶಕ್ತಿಯ ಆರಾಧಕರು. ತ್ರಿಮೂರ್ತಿಗಳ ಅಸ್ತಿತ್ವವನ್ನು ಒಪ್ಪಿದ್ದರೂ ಆ ತ್ರಿಮೂರ್ತಿಗಳಿಗೆ ಯಾವುದಾದರೂ ಮೂಲ ಇದೆಯೆಂದರೆ ಅದುವೇ ಶಕ್ತಿ. ಯಾವುದೇ ಪ್ರಾಣಿಯ ಮೂಲ ತಾಯಿಯಲ್ಲಿ ಅಡಗಿದೆ, ಮಾತೃವಿನಲ್ಲಿ ಉದ್ಭವವಾಗುತ್ತದೆ. ಹೀಗಾಗಿ ಮಾತೃಪೂಜೆ ಎಂಬುದು ಶಕ್ತಿಯ ಆರಾಧನೆ. ವೇದೋಕ್ತವಾಗಿಯೂ ಶಾಕ್ತೇಯ ಆರಾಧನೆ ಭಾರತದ ಅನೇಕ ಭಾಗಗಳಲ್ಲಿ ಆಚರಣೆಯಲ್ಲಿದೆ.

ನಮ್ಮ ಪೂರ್ವಿಕರು ಅನೇಕ ಶಕ್ತಿಪೀಠಗಳಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿ ಶಕ್ತಿಯ ತರಂಗಗಳು ಭೂಮಂಡಲದ ದಶದಿಕ್ಕುಗಳಲ್ಲಿ ಹರಡುವಂತೆ ಮಾಡಿದ್ದಾರೆ. ಮದುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಕಾಶಿ ವಿಶಾಲಾಕ್ಷಿ- ಎಲ್ಲವೂ ಶ್ರೀಚಕ್ರದ ಆರಾಧನಾ ಕೇಂದ್ರಬಿಂದು. ಶ್ರೀಚಕ್ರದ ಭೂವಿಸ್ತಾರ ಎಂಬ ಚಕ್ರವನ್ನು ಬೆಂಗಳೂರಿನ ಹಲಸೂರಿನಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಕಾಮಾಕ್ಷಿ ಅಮ್ಮನವರು ನಿಂತ ಪಾದದಡಿಯಲ್ಲಿ ಶಕ್ತಿದಾಯಕ ಬೀಜಮಂತ್ರಗಳೊಂದಿಗೆ ಪ್ರತಿಷ್ಠಾಪಿಸಲಾಗಿದೆ. ನವರಾತ್ರಿಯಲ್ಲಿ ಪ್ರತಿದಿನ ಶ್ರೀ ಸೋಮೇಶ್ವರನ ದರ್ಶನ ಪಡೆದು, ಅಮ್ಮನವರಿಗೆ ಹೂವನ್ನು ನೀಡಿ, ಭೂವಿಸ್ತಾರ ಚಕ್ರಕ್ಕೆ ಕುಂಕುಮಾರ್ಚನೆ ಮಾಡಿಸಿ, ಮಹಿಳೆಯರು ಈ ಕುಂಕುಮವನ್ನು ಹಣೆಯಲ್ಲಿ ಇರಿಸಿಕೊಳ್ಳುತ್ತಾರೆ. ಇದರಿಂದ ಗೃಹದಲ್ಲಿ ಸರ್ವದೋಷಗಳು ನಿವಾರಣೆಯಾಗಿ ಕುಟುಂಬದ ಸದಸ್ಯರೆಲ್ಲರೂ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ವಿದ್ಯೆ, ಬುದ್ಧಿ, ಜ್ಞಾನಾರ್ಜನೆ ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಮಾನವನ ದೇಹದ ಪ್ರತಿ ಅಂಗಗಳಿಗೆ ಶಕ್ತಿ ನೀಡುವ ಶಾಕ್ತೇಯ ವಿಚಾರವನ್ನು ಕಾಳಿ ರೂಪದಲ್ಲಿ ಅಡಕ ಮಾಡಲಾಗಿದೆ. ಅಂಗಗಳ ಶಕ್ತಿ ಅಂಗಾಳಿಯಾಗಿ; ಶಕ್ತಿ ದೇವತೆಯನ್ನು ಅಂಗಾಳ ಪರಮೇಶ್ವರಿ ಎನ್ನುತ್ತಾರೆ. ಈ ಶಕ್ತಿದೇವತೆಯನ್ನು ಆರಾಧಿಸಿದರೆ ನಮ್ಮ ದೇಹದ ಎಲ್ಲ ಅಂಗಗಳಿಗೆ ಶಕ್ತಿ ತರಂಗಗಳು ಪ್ರವಹಿಸಿ ದೇಹವನ್ನು ಬಲಪಡಿಸುತ್ತವೆ.

ನವರಾತ್ರಿಗಳಲ್ಲಿ ಮೂರು ನವರಾತ್ರಿಗಳು ಪ್ರಮುಖವಾಗಿ ಆಚರಣೆಯಲ್ಲಿವೆ. ವಸಂತ ನವರಾತ್ರಿ- ಯುಗಾದಿ ಹಬ್ಬದ ಚೈತ್ರಶುಕ್ಲದಿಂದ 9 ದಿನಗಳು, ಇದನ್ನು ರಾಮ ನವರಾತ್ರಿ ಎಂದೂ ಹೇಳುವುದುಂಟು. ವಸಂತ ನವರಾತ್ರಿಯಲ್ಲಿ ಪ್ರಕೃತಿ ಅರಳುವುದರಿಂದ ಅದನ್ನು ಕಾಪಾಡುವ ಹಾಗೂ ಅದರ ಸೌಂದರ್ಯವನ್ನು ಅನುಭವಿಸುವ ಜವಾಬ್ದಾರಿ ಜನಸಾಮಾನ್ಯರದು ಎಂದರ್ಥ. ಶರದ್​ ಋತುವಿನಲ್ಲಿ ಅಂದರೆ ಅಶ್ವಯುಜ ಶುಕ್ಲ ಪ್ರತಿಪದೆಯಿಂದ ಆಚರಿಸುವ ಶರನ್ನವರಾತ್ಯಾರಂಭ, ಇದನ್ನು ಶರನ್ನವರಾತ್ರಿ ಎಂದು ಕರೆಯುತ್ತಾರೆ. ಈ 9 ದಿನಗಳು ವ್ರತವನ್ನಾಚರಿಸುವ ವಿಷಯಗಳು ಅತ್ಯಂತ ಮುಖ್ಯ. ದೇವಿ ಮಹಾತ್ಮೆಯ ನವರಾತ್ರಿ- ಮಾರ್ಕಂಡೇಯ ಪುರಾಣ, ದೇವಿ ಭಾಗವತ ಹೇಳಿದ ನವರಾತ್ರಿ- ಅತ್ಯಂತ ಮುಖ್ಯ. ಈಗ ನಡೆಯುವುದು, ಆಷಾಢ ಗುಪ್ತ ನವರಾತ್ರಿ- ಮಾ ಗುಪ್ತ ನವರಾತ್ರಿ, ತಂತ್ರ ಸಾಧಕರಿಗೆ- ಕಾಳಿಕಾ ಪುರಾಣ- ದಶ ಮಹಾವಿದ್ಯಾಗ್ರಂಥದ ಉಲ್ಲೇಖ. ಈಗ ನಾವು ಆಚರಿಸುವುದು ಶರನ್ನವರಾತ್ರಿ- ದುರ್ಗಾಪೂಜೆ- ಶಕ್ತಿ ಉತ್ಸವ. ನವರಾತ್ರಿಗಳಲ್ಲಿ, ಅಂದರೆ ರಾತ್ರಿ-ವಿಶ್ರಾಂತಿ, ಅಂತರಂಗ ಸಾಧನೆ, ಹಗಲಲ್ಲಿ ಕೆಲಸ- ರಾತ್ರಿಯಲ್ಲಿ ದೇವಿ ಉಪಾಸನೆ, ನವರಾತ್ರಿ- 9 ಹಂತದ ಮನಸ್ಸಿನ ಶುದ್ಧಿ ಎಂದರ್ಥ.

ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ, ನವರಾತ್ರಿಯ ನವದುರ್ಗೆಯರ 9 ರೂಪಗಳನ್ನು ನವಗ್ರಹಗಳ ಆರಾಧನೆಗೆ ಹಾಗೂ ಗ್ರಹಗಳ ಪರಿಹಾರಕ್ಕಾಗಿ ಸಹ ಪೂಜಿಸಬಹುದು.

ದುರ್ಗಾರೂಪಗಳಲ್ಲಿ ಮೊದಲನೇ ರೂಪ ಶೈಲಪುತ್ರಿ. ಅಂದರೆ ಬೆಟ್ಟದ ಮಗಳು- ಇದಕ್ಕೆ ಗ್ರಹ ಚಂದ್ರ- ಮನಸ್ಸಿಗೆ ಕಾರಕ, ಚಂದ್ರ ಶಾಂತಿ, ಈ ವ್ರತದಿಂದ ಮೂಲಾಧಾರ ಚಕ್ರದಲ್ಲಿ ಶಕ್ತಿ ಉದ್ಭವವಾಗುತ್ತದೆ. ಬ್ರಹ್ಮಚಾರಿಣಿ ಅಂದರೆ ತಪಸ್ವಿನಿ- ಕುಜಗ್ರಹ ಅಧಿಪತಿ, ಧೈರ್ಯ ತುಂಬುವ ಶಕ್ತಿ, ಸ್ವಾದಿಷ್ಠಾನ ಚಕ್ರದಲ್ಲಿ ಶಕ್ತಿ ಉದ್ಭವವಾಗುತ್ತದೆ. ಕುಜ ಶಾಂತಿಗೆ ಈ ವ್ರತ ಬಹಳ ಮುಖ್ಯ. ಮಹಿಳೆಯರು ಈ ವ್ರತವನ್ನು ಆಚರಿಸಿದರೆ ಸರ್ವರೋಗದಿಂದ ಮುಕ್ತರಾಗುತ್ತಾರೆ. ಚಂದ್ರಘಂಟಾ- ಚಂದ್ರನ ಸ್ವರೂಪ- ಶುಕ್ರಗ್ರಹ, ಈ ವ್ರತದಿಂದ ಸೌಂದರ್ಯ, ಸಂಪತ್ತು ಹಾಗೂ ಶುಕ್ರಗ್ರಹದ ಶಾಂತಿ ದೊರೆಯುತ್ತದೆ, ಮಣಿಪುರ ಚಕ್ರ ಶಕ್ತಿಯುತವಾಗುತ್ತದೆ. ಕೂಷ್ಮಾಂಡಾ- ಬಿಳಿ ಕುಂಬಳಕಾಯಿ- ಇಡೀ ಬ್ರಹ್ಮಾಂಡವನ್ನು ಸೂಚಿಸುತ್ತದೆ, ಸೂರ್ಯ ಅಧಿಪತಿ, ಕಾಲಭೈರವನ ಪೂಜೆಯಲ್ಲಿ ಕೂಷ್ಮಾಂಡ ದೀಪ ಪರಿಹಾರ ಸಕಲ ಗ್ರಹ ದೋಷ ನಿವಾರಣೆಗಾಗಿ ಹೇಳಿದ್ದಾರೆ. ಸೂರ್ಯನಿಂದ ಆತ್ಮಶುದ್ಧಿ ಮತ್ತು ಆರೋಗ್ಯವನ್ನು ಪಡೆಯಲು ಸಾಧ್ಯ.

ಈ ವ್ರತದಿಂದ ನಮ್ಮಲ್ಲಿರುವ ಅನಾಹತ ಚಕ್ರ ಬಲಪಡುತ್ತದೆ. ಸ್ಕಂದಮಾತಾ - ಬುಧ ಗ್ರಹವನ್ನು ಸೂಚಿಸುತ್ತದೆ. ಬುದ್ಧಿ, ವ್ಯಾಪಾರ, ಶಿಕ್ಷಣ, ದೇಹದ ನರನಾಡಿಗಳನ್ನು ಸೂಚಿಸುತ್ತದೆ. ಸ್ಕಂದ ಎಂದರೆ ಸುಬ್ರಹ್ಮಣ್ಯ, ಮಂಗಳ ಗ್ರಹದ ಶಾಂತಿಗೂ ಸ್ಕಂದಮಾತಾ ಪೂಜೆ ವಿಶೇಷ. ದೇಹದಲ್ಲಿ ವಿಶುದ್ಧಿ ಚಕ್ರವನ್ನು ಬಲಪಡಿಸುತ್ತದೆ. ಕಾತ್ಯಾಯಿನಿ, ಕಾತ್ಯಾಯನ ಋಷಿ ಪುತ್ರಿ- ಗುರುಗ್ರಹವನ್ನು ಸೂಚಿಸುತ್ತದೆ. ಜ್ಞಾನ, ಧನ, ಸಂತಾನಭಾಗ್ಯ ಪರಿಹಾರ- ಈ ವರ್ಷ ಗುರು ಕರ್ಕಾಟಕರಾಶಿ ಉಚ್ಚನಾಗಿರುವುದರಿಂದ, ಇದು 12 ವರ್ಷಕ್ಕೊಮ್ಮೆ ಸಿಗುವುದರಿಂದ ಪ್ರಸಕ್ತ ನವರಾತ್ರಿಯಲ್ಲಿ ಕಾತ್ಯಾಯಿನಿ ದೇವಿ ಆರಾಧನೆ ಬಹಳ ಮುಖ್ಯ. ಸಕಲ ಭಾಗ್ಯಗಳನ್ನು ಪಡೆಯುವ ಸಮಯ. ಈ ವ್ರತದಿಂದ ಆಜ್ಞಾಚಕ್ರ ಶಕ್ತಗೊಳ್ಳುತ್ತದೆ. ಕಾಳರಾತ್ರಿ- ಕಾಲವನ್ನು ನಾಶ ಮಾಡುವವಳು. ಕಾಲಭೈರವನ ಅಂಶ, ಕರ್ಮ ಮತ್ತು ನ್ಯಾಯದೇವತೆಯಾಗಿ, ಕರ್ಮಕ್ಕನುಸಾರವಾಗಿ ಶುಭ-ಅಶುಭ ಫಲಗಳನ್ನು ನೀಡುವವಳು, ಶನೇಶ್ಚರನು ಆಯಸ್ಸಿಗೆ ಕಾರಕನಾದುದರಿಂದ ಭಕ್ತರ ಆಯಸ್ಸಿಗೆ ಭಂಗ ಬಾರದಂತೆ ಅನುಗ್ರಹಿಸುವವಳು. ದೇಹದ ಸಹಸ್ರಾರ ಚಕ್ರಕ್ಕೆ ಅಧಿದೇವತೆಯಾಗಿ ಸಹಸ್ರಾರ ಚಕ್ರವನ್ನು ಬಲಪಡಿಸುವವಳು ಆಗಿರುತ್ತಾಳೆ. ಮಹಾಗೌರಿ- ಬೆಳ್ಳನೆಯ ಗೌರಿ- ಮಾಯೆ, ಭ್ರಮೆಗಳಿಗೆ ಕಾರಕಳು. ಜಾತಕದಲ್ಲಿ ಸರ್ಪದೋಷವನ್ನು ಪರಿಹರಿಸುವವಳು, ಚರ್ಮರೋಗವನ್ನು ನಿವಾರಿಸುವವಳು. ಸಿದ್ಧಿಧಾತ್ರಿ- ಎಲ್ಲ ಸಿದ್ಧಿ ಕೊಡುವವಳು, ಆಧ್ಯಾತ್ಮಿಕ ಜ್ಞಾನ ಮತ್ತು ಮೋಕ್ಷಕ್ಕೆ ಕಾರಕಳು. ಹೀಗೆ ನವರಾತ್ರಿಯಲ್ಲಿ ನವದುರ್ಗೆಯನ್ನು ಆರಾಧಿಸುವುದರಿಂದ ಮಾನವರಿಗೆ ಸಿಗುವ ಶುಭಫಲಗಳಾಗಿರುತ್ತವೆ.

ಸಾಂಸ್ಕೃತಿಕ ಅಭಿಮಾನ: ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯಿಂದ ದುಷ್ಟಶಕ್ತಿಗಳ ವಿರುದ್ಧದ ಹೋರಾಟದಿಂದ ಮಹಿಳಾ ನಾಯಕತ್ವ ಮತ್ತು ಸಾಮಾಜಿಕ ನ್ಯಾಯದ ಮಾರ್ಗಕ್ಕೆ ದಾರಿ ಸುಗಮವಾಗುತ್ತದೆ. ಈ ಕಥೆಗಳನ್ನು ಇಂದಿನ ಸಮಾಜದ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡಾಗ, ಅವು ಅನ್ಯಾಯ, ಅಹಂಕಾರ, ದುರಾಸೆಯ ವಿರುದ್ಧ ಮಹಿಳೆಯರು ನಿಲ್ಲುವ ಅಗತ್ಯವನ್ನು ನೆನಪಿಸುತ್ತವೆ. ಮಹಿಷಾಸುರನ ಸಂಹಾರದ ಕಥೆಯು ಮೈಸೂರು ದಸರೆಯ ಸಾಂಸ್ಕೃತಿಕ ಮಹತ್ವದೊಂದಿಗೂ ನಿಕಟ ಸಂಬಂಧ ಹೊಂದಿದೆ. ಚಾಮುಂಡೇಶ್ವರಿ ದೇವಿಯ ಆರಾಧನೆ ಮತ್ತು ವಿಜಯದಶಮಿಯ ಆಚರಣೆಗಳು ಕರ್ನಾಟಕದ ಜನಜೀವನದಲ್ಲಿ ಆಳವಾಗಿ ಬೆರೆತಿವೆ. ಮೈಸೂರು ಅರಸರ ದಸರಾ ಪರಂಪರೆಯು ನಮ್ಮ ಇತಿಹಾಸದ ಸ್ಮರಣೆಯಷ್ಟೇ ಅಲ್ಲದೆ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವ ಧಾರ್ಮಿಕ ಸಂಕಲ್ಪವನ್ನು ನವೀಕರಿಸಿಕೊಳ್ಳುವ ಸಂದರ್ಭವೂ ಆಗಿದೆ. ನವರಾತ್ರಿ ಆಚರಣೆಗಳು ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಜನರಲ್ಲಿ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಅಭಿಮಾನವನ್ನು ಬೆಳೆಸುತ್ತವೆ.

ನವರಾತ್ರಿ ಮಂಟಪ: ಕೇರಳದ ಸ್ವಾತಿ ತಿರುನಾಳ್​ ಮಹಾರಾಜರು ನಿರ್ಮಿಸಿದ ನವರಾತ್ರಿ ಮಂಟಪಕ್ಕೆ 200 ವರ್ಷಗಳ ಇತಿಹಾಸ ಉಂಟು. ಈ ಮಂಟಪದಲ್ಲಿ ದೇವಿಯನ್ನು ಸಂಗೀತದಿಂದ ಆರಾಧನೆ ಮಾಡಲಾಗುತ್ತದೆ. ಈ ಮಂಟಪದಲ್ಲಿ ಮಣ್ಣಿನ ಮಡಕೆಗಳನ್ನು ತಲೆಕೆಳಗಾಗಿ ನೇತು ಹಾಕಿ- ಸಂಗೀತ ಸ್ವರಗಳು ಎಲ್ಲೆಡೆ ಪ್ರಸರಿಸಲು ಕ್ರಮ ಜರುಗಿಸಲಾಗಿದೆ. ಸ್ವಾತಿ ತಿರುನಾಳರು 9 ಕೃತಿಗಳು, 9 ದುರ್ಗಾ ರೂಪಗಳು, 9 ಗ್ರಹಗಳು = 9 ರಾಗಗಳು, ಅಂದರೆ ಮೊದಲ 3 ದಿನ ಸರಸ್ವತಿ- ಇದು ಬುಧ-ಚಂದ್ರ-ಗುರು ಗ್ರಹಗಳ ಸಂಕೇತ. ಜ್ಞಾನಾಭಿವೃದ್ಧಿಗಾಗಿ- ಮೋಹನಂ, ಶಂಕರಾಭರಣಂ, ಕಲ್ಯಾಣಿ ರಾಗಗಳನ್ನು ಹಾಡಬೇಕು. ಮಧ್ಯೆ ಮೂರು ದಿನಗಳು ಲಕ್ಷ್ಮೀ- ಶುಕ್ರ ಮತ್ತು ಸೂರ್ಯ ಗ್ರಹಗಳು, ಹಿಂದೋಳಂ, ಬಿಲಹರಿ ರಾಗಗಳು. ಕೊನೆಯ ಮೂರು ದಿನಗಳು ದುರ್ಗಾ- ಮಂಗಳ, ಶನಿ, ರಾಹು-ಕೇತು, ಶಕ್ತಿ- ದುರ್ಗಾ, ನಾಟ್ಯಭೈರವಿ, ದರ್ಬಾರಿ ಕಾನಡಾ. ಈ ಸಂಗೀತ ಪರಂಪರೆಯು ನವರಾತ್ರಿಯಲ್ಲಿ ನವದುರ್ಗೆಯ ಆರಾಧನೆಗಾಗಿ ಮಹತ್ವ ಪಡೆದಿದೆ. ಭಕ್ತಿ ಸಂಗೀತದಿಂದ ನವದುರ್ಗೆಯರು ಸಾಧಕರಿಗೆ, ಭಕ್ತರಿಗೆ ಬೇಗ ಒಲಿಯುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.