ಬಲವಂತದ ಮತಾಂತರದಿಂದ ರಾಷ್ಟ್ರಾಂತರ? 
ದೇಶ

ಬಲವಂತದ ಮತಾಂತರದಿಂದ ರಾಷ್ಟ್ರಾಂತರ?

ವಿಶ್ವಾಸ್​ ಎನ್​ ಜೋಳದಾಳು
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)
ಈ ಮೇಲಿನ ಮೂರು ವಿಷಯಗಳಿಗೆ ಸಂಬಂಧಿಸಿ ನ್ಯಾ. ಪ್ರಶಾಂತಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಇತ್ತೀಚೆಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈಗ ಈ ಚರ್ಚೆ ಮತ್ತೊಮ್ಮೆ ಸಹಜವಾಗಿ ಬಿರುಸು ಪಡೆದುಕೊಂಡಿದೆ. ದೇಶಾದ್ಯಂತ ಒಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅದರ ಬೆನ್ನಲ್ಲೇ ಶುರುವಾದ ಚರ್ಚೆ ಎರಡೂ ಸ್ವಾಗತಾರ್ಹ ಎಂದೇ ಭಾವಿಸೋಣ.
ಸುಪ್ರೀಂ ಕೋರ್ಟಿನ ಪ್ರಸಕ್ತ ತೀರ್ಪು ಸಂವಿಧಾನದ ಆಶಯಕ್ಕೆ ವಿರುದ್ಧ ಎಂಬ ಧಾಟಿಯಲ್ಲಿ ಕೆಲವರು ಅಪಸ್ವರ ಎತ್ತುತ್ತಿದ್ದಾರೆ. ಈ ಭಿನ್ನರಾಗ ಸಮಂಜಸವೇ ಎಂಬುದನ್ನು ನಮ್ಮ ಸಂವಿಧಾನ ಮತ್ತು ಸಂವಿಧಾನ ಕರ್ತೃಗಳ ಆಶಯದ ಹಿನ್ನೆಲೆಯಲ್ಲೇ ಚರ್ಚೆ ಮಾಡೋಣ.
ಸಂವಿಧಾನದ 25ರಿಂದ 28ನೇ ವಿಧಿಗಳು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತಾನು ನಂಬಿದ ಧರ್ಮವನ್ನು ಆಚರಿಸಲು, ಪ್ರಚಾರ ಮಾಡಲು ಮತ್ತು ಅನುಸರಿಸಲು ಹಕ್ಕನ್ನು ನೀಡುತ್ತವೆ. ಇಲ್ಲಿ ಧರ್ವಚರಣೆ ಮತ್ತು ಧರ್ಮ ಅನುಸರಿಸುವಿಕೆ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಸಮಸ್ಯೆ ಎದುರಾಗುವುದು ಧರ್ಮ ಪ್ರಚಾರ ಮಾಡಲು ಮುಕ್ತ ಸ್ವಾತಂತ್ರ್ಯ ಎಂಬ ವ್ಯಾಖ್ಯಾನದ ಕುರಿತು ಮಾತ್ರ.
ಆದಿಗುರು ಶಂಕರಾಚಾರ್ಯರು, ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರು, ಶ್ರೀ ಸತ್ಯಸಾಯಿ ಬಾಬಾ, ವರ್ತಮಾನದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ, ಶ್ರೀ ಜಗ್ಗಿ ವಾಸುದೇವ, ಶ್ರೀ ಮಧುಸೂದನ ಸಾಯಿ ಅಥವಾ ಇಸ್ಕಾನ್ ಪಂಥದವರವರೆಗೆ ನೂರಾರು, ಸಾವಿರಾರು ಸಂತ ಮಹಾಂತರು, ಧಾರ್ವಿುಕ, ಸಾಮಾಜಿಕ ಸಂಘಟನೆಗಳು ಧರ್ಮ ಪ್ರಸಾರ, ಪ್ರಚಾರದ ಕೆಲಸ ಮಾಡುತ್ತಿದ್ದಾರೆ.
ಕೃಣ್ವಂತೋ ವಿಶ್ವಮಾರ್ಯಂ (ಇಡೀ ಜಗತ್ತು ಸುಸಂಸ್ಕೃತವಾಗಲಿ, ಜಗತ್ತಿನ ಕಲ್ಯಾಣಕ್ಕೆ ಪೂರಕವಾಗಲಿ) ವಸುಧೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ), ದರಿದ್ರ ದೇವೋಭವ ಇವೆಲ್ಲ ಸಾವಿರ ವರ್ಷಗಳ ಭಾರತ ಭೂಮಿಯ ಸಾರ ಸತ್ವವನ್ನೇ ಅರುಹುತ್ತವೆ. ಹಿಂದೂ ಧರ್ಮ, ಭಾರತೀಯ ನಂಬಿಕೆಗಳು ಹೇಗೆ ಮನುಕುಲದ ಏಳಿಗೆ ಬಯಸುತ್ತವೆ ಎಂಬುದನ್ನು ನಿರೂಪಿಸುತ್ತವೆ. ಭಾರತದ ಮೂಲ ಆಚಾರ ಮತ್ತು ವಿಚಾರದಲ್ಲಿ ನಿಮ್ಮ ಧರ್ಮ ಕನಿಷ್ಠ, ನಮ್ಮ ಧರ್ಮ ಶ್ರೇಷ್ಠ, ನಮ್ಮ ಧರ್ಮವೊಂದೇ ಶ್ರೇಷ್ಠ ಎಂಬ ಭಾವ ಲವಲೇಶವೂ ಕಾಣಿಸುವುದಿಲ್ಲ. ಭಾರತೀಯತೆ ಹೇಳಿದ್ದು ಭಗವಂತನ ಧ್ಯಾನದಲ್ಲಿ, ಪೂಜೆಯಲ್ಲಿ, ಭಜನೆಯಲ್ಲಿ, ಬಡಬಗ್ಗರ ಸೇವೆಯಲ್ಲಿ ದೈವತ್ವವನ್ನು ಕಾಣಿ ಎಂದು ಮಾತ್ರ. ಈ ಉದಾತ್ತ ವಿಚಾರ ಹಲವರನ್ನು ಹಿಂದೂ ಧರ್ಮದ ಕಡೆಗೆ ಸೆಳೆದಿರಬಹುದು. ಅದೊಂದು ಸಹಜ ಕ್ರಿಯೆ ಮಾತ್ರ.
ನಮ್ಮ ಸಂವಿಧಾನ ಮತಾಂತರಕ್ಕೂ ಅವಕಾಶ ನೀಡಿದೆ ಎಂಬುದನ್ನು ಈ ರೀತಿಯಲ್ಲಿ ಮಾತ್ರ ಅನ್ವಯಿಸಿಕೊಳ್ಳಬಹುದು. ಸಮಸ್ಯೆ ಎದುರಾಗುವುದು ಮತ ಅನುಸರಿಸುವ ಸ್ವಾತಂತ್ರ್ಯದ ಅವಕಾಶವನ್ನು ಬಲವಂತದ, ಭೌತಿಕ ಆಸೆ, ಆಕಾಂಕ್ಷೆಗಳ ಪೂರೈಕೆ ಮೂಲಕ ಮತಾಂತರಿಸಿ ಧರ್ವನುಯಾಯಿಗಳ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುವುದು ಎಂದು ವ್ಯಾಖ್ಯಾನ ಮಾಡಿಕೊಂಡಿರುವ ಕಾರಣಕ್ಕೆ. ಉದಾಹರಣೆಗೆ ಬಡತನ, ಅನಾರೋಗ್ಯ, ಶಿಕ್ಷಣ, ನಿರುದ್ಯೋಗ, ಕೌಟುಂಬಿಕ ಕಲಹ, ಪ್ರೇಮ ವಿವಾಹ ಮುಂತಾದ ಅವಕಾಶಗಳನ್ನು ಬಳಸಿಕೊಂಡು ಧರ್ವಂತರಕ್ಕೆ ಮಾರ್ಗ ಮಾಡಿಕೊಳ್ಳುವುದು. ಕ್ರೖೆಸ್ತ ಮತ್ತು ಇಸ್ಲಾಂ ಧರ್ಮದ ಕೆಲವರು ಹೀಗೆ ಮಾಡುತ್ತಿರುವ ಬಗ್ಗೆ ದೊಡ್ಡ ತಕರಾರು ಇದೆ. ಆಯಾ ಧರ್ಮದ ಪ್ರಮುಖರು ಇದನ್ನು ಅರ್ಥ ಮಾಡಿಕೊಂಡಲ್ಲಿ ಸಮಸ್ಯೆ ಬಗೆಹರಿದುಹೋಗುತ್ತದೆ.

ಚರ್ಚೆ-2

ಪ್ರಸಕ್ತ ತೀರ್ಪು ದಲಿತ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುತ್ತದೆಯೇ? ಖಂಡಿತವಾಗಿ ಇಲ್ಲ. ದಲಿತ ದೌರ್ಜನ್ಯ ತಡೆ ಕಾಯಿದೆ ವ್ಯಾಖ್ಯಾನಕ್ಕೆ ಹೋಗುವ ಮುನ್ನ ದಲಿತರು ಯಾರು, ದಲಿತರ ರಕ್ಷಣೆ ಮಾಡುವ ಮಾರ್ಗ ಯಾವುದು ಎಂಬುದರ ಕುರಿತು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯದ ನಂತರ ನಮ್ಮ ಸಂವಿಧಾನ ಹಾಗೂ ಸಂವಿಧಾನದ ಕರ್ತೃಗಳು ಯಾವ ಆಶಯ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಅವಲೋಕನ ಮಾಡಬೇಕು.
ಈಗ ಸುಪ್ರೀಂ ತೀರ್ಪಿಗೆ ಕಾರಣ ಆಂಧ್ರದ ಚಿಂತಾಲಾ ಆನಂದ್ ಎಂಬ ಮತಾಂತರಿ ಪಾದ್ರಿಯ ಪ್ರಕರಣ. ಆನಂದ್ ಮೂಲತಃ ಹಿಂದೂ ಮಾದಿಗ ಜಾತಿಗೆ ಸೇರಿದ ವ್ಯಕ್ತಿ. ಅವರು ಕ್ರೖೆಸ್ತ ಮತಕ್ಕೆ ಮತಾಂತರಗೊಂಡು 2010ರಿಂದಲೇ ಪಾದ್ರಿಯಾಗಿ ನೇಮಕವಾಗಿ ಚರ್ಚ್ ಮೂಲಕ ಮತಾಂತರ ಕಾರ್ಯದಲ್ಲಿ ತೊಡಗಿದ್ದರು. ಆ ಕಾರಣಕ್ಕೆ 2021ರಲ್ಲಿ ಅವರ ಮೇಲೆ ಗುಂಪು ಹಲ್ಲೆ ನಡೆಯಿತು. ದಲಿತ ದೌರ್ಜನ್ಯ ಕಾಯಿದೆ ಪ್ರಕಾರ ಹಲ್ಲೆ ಮಾಡಿದವರ ಮೇಲೆ ಆನಂದ್ ಮೊಕದ್ದಮೆ ದಾಖಲಿಸುತ್ತಾರೆ. ಅದನ್ನು ಪ್ರಶ್ನಿಸಿ ಆರೋಪಿಗಳು ಆಂಧ್ರ ಹೈಕೋರ್ಟ್ ಮೆಟ್ಟಿಲೇರಿದರು. ಮತಾಂತರಿತ ವ್ಯಕ್ತಿ ಅಥವಾ ಹಿಂದು, ಸಿಖ್, ಜೈನ ಅಥವಾ ಬೌದ್ಧ ಧರ್ಮಕ್ಕೆ ಸೇರದ ವ್ಯಕ್ತಿ ದಲಿತ ಸ್ಥಾನಮಾನ ಉಳಿಸಿಕೊಳ್ಳಲು ಅರ್ಹನಾಗುವುದಿಲ್ಲ ಎಂಬ ನಿಷ್ಕರ್ಷೆಯ ಆಧಾರದಲ್ಲಿ ಕೋರ್ಟ್ ತೀರ್ಪು ನೀಡಿತು. ಆ ತೀರ್ಪನ್ನು ಸುಪ್ರೀಂ ಕೋರ್ಟ್ ಈಗ ಎತ್ತಿ ಹಿಡಿದಿದೆ.
ಹಾಲಿ ತೀರ್ಪಿನ ಪೂರ್ವಾಪರ ಏನು?: ಸ್ವಾತಂತ್ರ್ಯ ಪೂರ್ವದಲ್ಲಿ 1909ರ ಭಾರತ ಕೌನ್ಸಿಲ್ ಕಾಯಿದೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ಹಕ್ಕು, 1919ರ ಭಾರತ ಸರ್ಕಾರ ಕಾಯಿದೆ ಸಿಖ್ಖರಿಗೆ, ಭಾರತೀಯ ಕ್ರೖೆಸ್ತರಿಗೆ, ಆಂಗ್ಲೋ ಇಂಡಿಯನ್ನರಿಗೆ ಮತ್ತು ಐರೋಪ್ಯ ನಾಗರಿಕರಿಗೆ ಪ್ರತ್ಯೇಕ ಮತದಾನ ಹಕ್ಕು ಮತ್ತು 1932ರ ದುಂಡು ಮೇಜಿನ ಸಭೆ ಮತಾನುಸಾರ ಪ್ರತ್ಯೇಕ ಮತದಾನ ಹಕ್ಕು ಮಾನ್ಯ ಮಾಡಿದ್ದನ್ನು ವಿರೋಧಿಸಿ ಗಾಂಧೀಜಿ ಆಮರಣ ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಆಗ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ನಡುವೆ ಪೂನಾ ಒಪ್ಪಂದ ಏರ್ಪಟ್ಟು ಪ್ರತ್ಯೇಕ ಮತದಾನದ ಪದ್ಧತಿ ಬದಲು ಶೋಷಿತ ವರ್ಗದವರಿಗೆ ಪ್ರಾತಿನಿಧ್ಯ ಕಲ್ಪಿಸುವ ತೀರ್ವನಕ್ಕೆ ಬರಲಾಯಿತು.
ಪೂನಾ ಒಪ್ಪಂದದ ಅನುಸಾರ 1935ರ ಭಾರತ ಸರಕಾರ ಕಾಯಿದೆ ಕೂಡ ಜಾರಿಗೆ ಬಂತು. ಅದಕ್ಕೆ ಪೂರಕವಾಗಿ 1936ರಲ್ಲಿ ಆದೇಶ ಜಾರಿಗೊಂಡು ಭಾರತದ ಆಯಾ ಪ್ರಾಂತ್ಯದಲ್ಲಿ ಯಾವ ಯಾವ ಜಾತಿ ಪರಿಶಿಷ್ಟರ ಪಟ್ಟಿಗೆ ಸೇರಬೇಕೆಂಬ ನಿರ್ಧಾರವೂ ಆಯಿತು. 1936ರ ಭಾರತ ಸರ್ಕಾರದ ಕಾಯಿದೆ ಕಲಂ 3ರ ಪ್ರಕಾರ ಭಾರತದ ಕ್ರೈಸ್ತರನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬಾರದೆಂದು ಸ್ಪಷ್ಟವಾಗಿ ನಮೂದಿಸಲಾಯಿತು. ಸ್ವಾತಂತ್ರ್ಯದ ನಂತರ ದೇಶದ ಯಾವುದೇ ಭಾಗದಲ್ಲಿ ಯಾರನ್ನೇ ಆದರೂ ಪರಿಶಿಷ್ಟರ ಪಟ್ಟಿಗೆ ಸೇರಿಸುವ ಅಂತಿಮ ಅಧಿಕಾರವನ್ನು ಭಾರತದ ಸಂವಿಧಾನದ ವಿಧಿ 300 ಮತ್ತು 300 ಎ ಪ್ರಕಾರ ಅಂತಿಮವಾಗಿ ರಾಷ್ಟ್ರಪತಿಗೆ ನೀಡಲಾಯಿತು.
ಅದರಂತೆ 1950ರ ಅ.11ರಂದು ಭಾರತದ ರಾಷ್ಟ್ರಪತಿಗಳು ಆದೇಶ ಮಾಡಿ ರಾಜ್ಯವಾರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿ ಮಾಡಿದ್ದು,ಈ ಪಟ್ಟಿಗೆ ಹಿಂದೂಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಸೇರ್ಪಡೆ ಮಾಡಕೂಡದೆಂದು ಸ್ಪಷ್ಟವಾಗಿ ಹೇಳಲಾಯಿತು.
ನಂತರದಲ್ಲಿ ಮಾಡಿದ ಆದೇಶದ ಪ್ರಕಾರ ಸಂವಿಧಾನದ ವಿಧಿ 25/26ರ ಧಾರ್ವಿುಕ ಸ್ವಾತಂತ್ರ್ಯದ ಹಕ್ಕಿನಂತೆ ಹಿಂದೂ ಧಾರ್ವಿುಕ ಸಂಸ್ಥೆಗಳನ್ನು ಹಿಂದೂಗಳಿಗೆ ಮಾತ್ರ ಮುಕ್ತ ಮಾಡಬೇಕೆಂಬ ಆದೇಶದಲ್ಲಿ ಹಿಂದೂಗಳ ಮಿತಿಗೆ ಸಿಖ್, ಜೈನ ಮತ್ತು ಬೌದ್ಧರನ್ನು ಸೇರಿಸಿಕೊಳ್ಳಬೇಕೆಂದೂ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತಾಂತರಗೊಂಡವರು ದಲಿತ ಸ್ಥಾನಮಾನ ಪಡೆಯಲು ಅರ್ಹರಲ್ಲ ಎಂದು ಆಂಧ್ರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು ನೀಡಿವೆ ಎಂಬುದು ಸ್ಪಷ್ಟ.

ಚರ್ಚೆ-3

ಮತಾಂತರಕ್ಕೆ ವಿರೋಧ ಏಕೆ?: ಹಿಂದೂ ಧರ್ಮ ಜಗತ್ತಿನ ಯಾವುದೇ ಮತ ಧರ್ಮದ ವಿರೋಧಿ ಅಲ್ಲ. ಎಲ್ಲ ಮತಧರ್ಮಗಳನ್ನೂ ಸ್ವಾಗತಿಸಿ ಜೀರ್ಣಿಸಿಕೊಂಡಿದೆ. ಭಾರತದ ವೈವಿಧ್ಯ ಜನಜೀವನ ಸಹೋದರತ್ವದಿಂದ ಬಾಳಿ ಬದುಕುತ್ತಿರುವುದು ಇದಕ್ಕೆ ಸಾಕ್ಷಿ. ಆದರೆ ಭಾರತದ ವೈವಿಧ್ಯ ಸಂಸ್ಕೃತಿಯನ್ನು ನಾಶ ಮಾಡುವ ಏಕ ಸಂಸ್ಕೃತಿ, ಏಕ ದೇವೋಪಾಸನೆ ವಾದವನ್ನು ಭಾರತೀಯತೆ ಎಂದೂ ಒಪ್ಪಿಕೊಳ್ಳುವುದಿಲ್ಲ. ಮತಾಂತರ ರಾಷ್ಟ್ರಾಂತರಕ್ಕೆ ಕಾರಣವಾಗುವುದರಿಂದ ವಿರೋಧ ಅಷ್ಟೆ.

ಚರ್ಚೆ -4

ಹಿಂದೂಗಳಲ್ಲಿ ಮಾತ್ರ ಜಾತಿ, ಅಸ್ಪೃಶತೆ, ಬಡತನ ಸಮಸ್ಯೆ ಇರುವುದೇ?: ಕ್ರೈಸ್ತ ಮತ್ತು ಮುಸ್ಲಿಮರಲ್ಲೂ ಹತ್ತು ಹಲವು ಪಂಗಡ ಉಪಪಂಗಡಗಳು, ಮೇಲ್ಜಾತಿ, ಕೆಳಜಾತಿ, ಸ್ಪೃಶ ಅಸ್ಪೃಶ, ಮದುವೆ ಮುಂಜಿ ನಿರ್ಬಂಧಗಳು, ಬಡತನ ಮತ್ತು ರೋಗರುಜಿನ ಸಮಸ್ಯೆಗಳು ಇದ್ದೇ ಇವೆ. ಈ ಮೇಲಿನ ಯಾವ ಸಮಸ್ಯೆಯೂ ಮತಾಂತರದಿಂದ ಪರಿಹಾರ ಆಗಲಾರದೆಂಬುದು ಸಂಬಂಧಪಟ್ಟವರಿಗೆ ಮನವರಿಕೆ ಆಗಬೇಕು.

ಚರ್ಚೆ-5

ಮತಾಂತರಿತ ದಲಿತರು ಮೀಸಲಾತಿ ಉಳಿಸಿಕೊಳ್ಳುವ ಮಾರ್ಗ ಯಾವುದು?: ಈ ವಿಷಯಕ್ಕೆ ಸಂಬಂಧಿಸಿ ಮತ್ತೆ ಪುನಃ ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೇ ಹೊರಳಬೇಕು. ಕೆಪಿ ಮನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಗೋಪಾಲಗೌಡ ಅವರು ಈ ವಿಷಯದಲ್ಲಿ ಮಹತ್ವದ ತೀರ್ಪು ನೀಡಿ ಮರಳಿ ಮಾತೃ ಧರ್ಮಕ್ಕೆ ಬಂದರೆ ಅಂಥವರು ಮೀಸಲಾತಿ ಪಡೆಯಲು ಅರ್ಹರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಚರ್ಚೆ-6

ಮತಾಂತರ ಹಾಗೂ ಮರುಮತಾಂತರದ ಅವಾಂತರಕ್ಕೆ ಪರಿಹಾರ ಏನು?: ಒಡಿಶಾ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್​ಗಢ, ಜಾರ್ಖಂಡ್, ಕರ್ನಾಟಕ (ಧಾರ್ವಿುಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021) ಸೇರಿದಂತೆ 12ಕ್ಕೂ ಹೆಚ್ಚು ರಾಜ್ಯಗಳು ಬಲವಂತದ, ಮೋಸದ ಅಥವಾ ಆಮಿಷವೊಡ್ಡಿ ನಡೆಯುವ ಮತಾಂತರಗಳನ್ನು ತಡೆಯಲು ಕಾಯ್ದೆಗಳನ್ನು ಜಾರಿಗೆ ತಂದಿವೆ. ಈಗ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಮಗ್ರ ಮತಾಂತರ ತಡೆ ಮತ್ತು ಮರುಮತಾಂತರ ಕಾಯಿದೆ ರೂಪಿಸಬೇಕು. ಆಗ ಈ ವಿವಾದಗಳಿಗೆ, ಗೊಂದಲಗಳಿಗೆ ಶಾಶ್ವತ ಅಂತ್ಯ ಹೇಳಬಹುದು.