ನವದೆಹಲಿ: ಮತದಾನ ಮಾಡುವುದು ದೇಶದ ಜನರ ಹಕ್ಕು ಮಾತ್ರವಲ್ಲ, ದೇಶದ ಭವಿಷ್ಯವನ್ನು ರೂಪಿಸುವಲ್ಲಿನ ಜವಾಬ್ದಾರಿಯೂ ಆಗಿದೆ. ಮತದಾನ ಸಂವಿಧಾನ ನಮಗೆ ನೀಡಿರುವ ಅತಿದೊಡ್ಡ ಹಕ್ಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಮತದಾರರ ದಿನದ ಸಂದರ್ಭದಲ್ಲಿ ಇಂದು(ಜ. 25) ಮೈ-ಭಾರತ್ ಸ್ವಯಂಸೇವಕರಿಗೆ ಪತ್ರ ಬರೆದಿರುವ ಅವರು, ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗುವಂತೆ ಯುವಜನರಿಗೆ ಕರೆ ನೀಡಿದ್ದಾರೆ. ದೇಶದ ಭವಿಷ್ಯದ ಹಾದಿಯು ಮತಗಳಿಂದ ರೂಪುಗೊಳ್ಳುತ್ತದೆ. ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಅದೃಷ್ಟವಂತರು ಮತದಾರರು. ಜನರು ಚಲಾಯಿಸುವ ಮತಗಳು ನಮ್ಮ ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸಲು ಚುನಾವಣಾ ಆಯೋಗದ ಪ್ರಯತ್ನಗಳನ್ನು ಶ್ಲಾಘಿಸಿರುವ ಅವರು, ಆಯೋಗವು ದೇಶದಲ್ಲಿ ಚುನಾವಣೆಗಳನ್ನು ಬದ್ಧತೆಯಿಂದ ನಡೆಸುತ್ತಿದೆ ಎಂದಿದ್ದಾರೆ.
ಯಾವುದೇ ರಾಜ್ಯದಲ್ಲಿ ಚುನಾವಣೆಗಳು ನಡೆದಾಗ, ಇತರ ಸ್ಥಳಗಳಲ್ಲಿ ನೆಲೆಸಿರುವ ಅನೇಕ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ತಮ್ಮ ಹಳ್ಳಿಗಳಿಗೆ ಹೋಗುತ್ತಾರೆ. ಹಿಮಾಲಯ, ಅಂಡಮಾನ್ ದ್ವೀಪಗಳು ಅಥವಾ ದಟ್ಟ ಕಾಡುಗಳಲ್ಲಿದ್ದರೂ ಸಹ, ಅವರು ಚುನಾವಣೆಗೆ ಸಮಯಕ್ಕೆ ಸರಿಯಾಗಿ ತಮ್ಮ ಊರುಗಳನ್ನು ತಲುಪುತ್ತಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).