ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 
ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ | National Herald case

ನವದೆಹಲಿ: ನ್ಯಾಷನಲ್ ಹೆರಾಲ್ಡ್​ ಪ್ರಕರಣಕ್ಕೆ(National Herald case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಹಂಚಿಕೊಂಡ ದೂರಿನ ಮೇರೆಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ಹೊಸ ಎಫ್​ಐಆರ್ ದಾಖಲಿಸಿದೆ ಎಂದು ಭಾನುವಾರ(ನ. 30) ವರದಿಯಾಗಿದೆ.
ಅ. 03ರಂದು ದಾಖಲಾಗಿರುವ ಈ ಎಫ್​ಐಆರ್ ಪತ್ರಿಕೆಯ ಹಣಕಾಸಿನ ಬಗ್ಗೆ ಮತ್ತು ಅದರ ಮಾತೃ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಆರೋಪದ ಕುರಿತು ದೀರ್ಘಕಾಲದಿಂದ ನಡೆಯುತ್ತಿರುವ ರಾಜಕೀಯ ಮತ್ತು ಕಾನೂನು ಹೋರಾಟವನ್ನು ಮತ್ತುಷ್ಟು ಬಲಪಡಿಸಿದೆ.
ಎಫ್​ಐಆರ್​​ನಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರ ಜೊತೆಗೆ, ಆರು ವ್ಯಕ್ತಿಗಳು ಮತ್ತು ಮೂರು ಕಂಪನಿಗಳನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.
ಪ್ರಕರಣದಲ್ಲಿ ಹೆಸರಿಸಲಾದವರಲ್ಲಿ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಸೇರಿ ಇತರೆ ಮೂವರು ವ್ಯಕ್ತಿಗಳು, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್), ಯಂಗ್ ಇಂಡಿಯನ್ ಹಾಗೂ ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಎಂಬ ಮೂರು ಕಂಪನಿಗಳು ಸೇರಿವೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಕಂಪನಿಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಅನ್ನು ಮೋಸದಿಂದ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ನಡೆದಿದೆ ಎಂದು ಆರೋಪಿಸಲಾಗಿದೆ.
ಕೋಲ್ಕತ್ತಾ ಮೂಲದ ಶೆಲ್ ಕಂಪನಿ ಎಂದು ಹೇಳಲಾಗುವ ಡಾಟೆಕ್ಸ್ ಮರ್ಚಂಡೈಸ್, ಇಬ್ಬರು ಕಾಂಗ್ರೆಸ್ ನಾಯಕರು ಶೇಕಡಾ 76 ರಷ್ಟು ಷೇರುಗಳನ್ನು ಹೊಂದಿದ್ದ ಲಾಭರಹಿತ ಕಂಪನಿಯಾದ ಯಂಗ್ ಇಂಡಿಯನ್‌ಗೆ 1 ಕೋಟಿ ರೂ.ಗಳನ್ನು ಒದಗಿಸಿದೆ. ಈ ವ್ಯವಹಾರದ ಮೂಲಕ ಯಂಗ್ ಇಂಡಿಯನ್ ಕಾಂಗ್ರೆಸ್‌ಗೆ 50 ಲಕ್ಷ ರೂ.ಗಳನ್ನು ಪಾವತಿಸಿ, ಸುಮಾರು 2,000 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದ ಎಜೆಎಲ್‌ನ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.
ಎಜೆಎಲ್‌ನ ಆಸ್ತಿ ಸುಮಾರು 2,000 ಕೋಟಿ ರೂ.ಗಳಾಗಿದ್ದರೂ, ಯಂಗ್ ಇಂಡಿಯನ್ ಕಾಂಗ್ರೆಸ್ ಪಕ್ಷಕ್ಕೆ 50 ಲಕ್ಷ ರೂ.ಗಳನ್ನು ಪಾವತಿಸುವ ಮೂಲಕ ಎಜೆಎಲ್‌ನ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವ ಸರಣಿ ಹಣಕಾಸಿನ ವಹಿವಾಟುಗಳ ಮೇಲೆ ಆರೋಪಗಳು ಕೇಂದ್ರೀಕೃತವಾಗಿವೆ.
ಇನ್ನೂ ಶನಿವಾರ(ನ. 29) ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ತನ್ನ ತೀರ್ಪಿನ ಘೋಷಣೆಯನ್ನು ಡಿಸೆಂಬರ್ 16 ಕ್ಕೆ ಮುಂದೂಡಿದೆ (ಏಜೆನ್ಸೀಸ್).