National Herald case 
ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆಗೆ ಮಲ್ಲಿಕಾರ್ಜುನ​ ಖರ್ಗೆ ಆಗ್ರಹ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಆಗ್ರಹಿಸಿದ್ದಾರೆ.
ಯಾವುದೇ ದೃಢ ಆಧಾರವಿಲ್ಲದೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಹಿರಿಯ ವ್ಯಕ್ತಿಗಳನ್ನು ಕಿರುಕುಳ ನೀಡಲು ಇಡಿ ಮತ್ತು ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಖರ್ಗೆ, ಗಾಂಧಿ ಕುಟುಂಬವನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ಅಸ್ತ್ರಗಳಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದರು. ನ್ಯಾಯಾಲಯದ ಈ ತೀರ್ಪು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕಪಾಳಮೋಕ್ಷವಾಗಿದೆ ಎಂದು ಖರ್ಗೆ ಹೇಳಿದರು.

ಕೋರ್ಟ್​ ಹೇಳಿದ್ದೇನು..?

ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರನ್ನು ಪರಿಗಣಿಸಲು ನಿರಾಕರಿಸಿರುವ ನ್ಯಾಯಾಲಯ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಸಲ್ಲಿಸಿರುವ ದೂರು ವಿಚಾರಣೆಗೆ ಅರ್ಹವಲ್ಲ, ಈ ಪ್ರಕರಣವು ಖಾಸಗಿ ದೂರನ್ನು ಆಧರಿಸಿದೆಯೇ ಹೊರತು ಎಫ್​​ಐಆರ್​ನ್ನು ಅಲ್ಲ ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರ ಪೀಠ ತಿಳಿಸಿದೆ. ಕೇಂದ್ರ ತನಿಖಾ ಸಂಸ್ಥೆ ಈ ವಿಷಯದಲ್ಲಿ ತನ್ನ ತನಿಖೆಯನ್ನು ಮುಂದುವರಿಸಬಹುದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ED ಆರೋಪಗಳು

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ನೀಡಿದ ದೂರಿನಿಂದ ಆರಂಭವಾದ ಈ ತನಿಖೆಯು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಆಸ್ತಿಗಳ ದುರುಪಯೋಗದ ಆರೋಪವನ್ನು ಗುರಿಯಾಗಿಸಿಕೊಂಡಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ 38 ಪ್ರತಿಶತ ಷೇರುಗಳನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಸಾಲಗಳನ್ನು ಬಳಸಿಕೊಂಡು 50 ಲಕ್ಷ ರೂ.ಗೆ 2,000 ಕೋಟಿ ರೂ.ಗೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ, ಇದರಲ್ಲಿ ನಕಲಿ ಬಾಡಿಗೆ ರಶೀದಿಗಳು ಮತ್ತು ನಕಲಿ ವಹಿವಾಟುಗಳು ಸೇರಿವೆ ಎನ್ನುವುದು ಇಡಿ ಆರೋಪ,(ಏಜೆನ್ಸೀಸ್​).