- ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯ
- ಜಾರಿ ನಿರ್ದೇಶನಾಲಯ (ED) ದ ಆರೋಪ ಪಟ್ಟಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯ
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾಗಿಯಾದವರಿಗೆ ನೋಟಿಸ್
ನವದೆಹಲಿ: ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸೋಮವಾರ (ಡಿ.22) ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ನ್ಯಾಷನಲ್ ಹೆರಾಲ್ಡ್ (National Herald) ಪ್ರಕರಣದ ಇತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ತನಿಖಾ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ED ಪ್ರಕರಣದಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ, ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಹುಡುಕಾಟವನ್ನು ನಡೆಸಿದ್ದು, ತನಿಖಾ ಸಂಸ್ಥೆ ಸಲ್ಲಿಸಿದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸುವ ಮೂಲಕ ಕೆಳ ನ್ಯಾಯಾಲಯವು ತಪ್ಪು ಮಾಡಿದೆ ಎಂದು ವಾದ ಮಂಡಿಸಿದರು.
ಕಳೆದ ವಾರ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಪ್ರಕರಣದಲ್ಲಿ ED ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದಾಗ ಗಾಂಧಿ ಕುಟುಂಬಕ್ಕೆ ಉಸಿರು ಬಂದಂತಾಗಿತ್ತು. ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ED ಯ ಆರೋಪಪಟ್ಟಿ ನಿರ್ವಹಿಸಲು ಯೋಗ್ಯವಲ್ಲ ಎಂದು ಹೇಳಿ ದೂರನ್ನು ವಜಾಗೊಳಿಸಿದ್ದರು. ಈ ಪ್ರಕರಣದಲ್ಲಿ ಕೇವಲ ಗಾಂಧಿ ಕುಟುಂಬದವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಮತ್ತು ಸುನಿಲ್ ಭಂಡಾರಿ ಅವರನ್ನು ಪ್ರಮುಖ ಆರೋಪಿಗಳೆಂದು ತನಿಖಾ ಸಂಸ್ಥೆ ಉಲ್ಲೇಖಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಗೆ ಸೇರಿದ ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆರೋಪಿಗಳು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿ ಕುಟುಂಬವು ಯಂಗ್ ಇಂಡಿಯನ್‌ನಲ್ಲಿ ಸುಮಾರು 76 ಪ್ರತಿಶತ ಷೇರುಗಳನ್ನು ಹೊಂದಿದ್ದು, ಇದು 90 ಕೋಟಿ ರೂ. ಸಾಲಕ್ಕಾಗಿ ಎಜೆಎಲ್ ಆಸ್ತಿಗಳನ್ನು ವಂಚನೆಯಿಂದ ಕಬಳಿಸಿದೆ ಎಂದು ಇಡಿ ಆರೋಪಿಸಿದೆ.
ರೌಸ್ ಅವೆನ್ಯೂ ನ್ಯಾಯಾಲಯದ ಕ್ರಮವನ್ನು ಕಾಂಗ್ರೆಸ್ ಸ್ವಾಗತಿಸಿತ್ತು, ಈ ಪ್ರಕರಣದಲ್ಲಿ ಒಂದು ಮಿಲಿಮೀಟರ್ ಹಣದ ಚಲನೆ ಇಲ್ಲ, ಒಂದು ಮಿಲಿಮೀಟರ್ ಸ್ಥಿರ ಆಸ್ತಿಯ ಚಲನೆ ಇಲ್ಲ, ಎಲ್ಲಾ ಆಸ್ತಿಗಳು ಎಜೆಎಲ್‌ನಲ್ಲಿಯೇ ಉಳಿದಿವೆ ಮತ್ತು ಹಣ ವರ್ಗಾವಣೆ ಇದೆ ಎಂದು ನಾನು ನ್ಯಾಯಾಲಯಕ್ಕೆ ಹೇಳಿದ್ದೆ" ಎಂದು ಸುಪ್ರೀಂ ಕೋರ್ಟ್ನ ಹರಿಯ ವಕೀಲ ಹಾಗೂ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದರು.
ಈ ಪ್ರಕರಣದಲ್ಲಿ ಗಾಂಧಿ ಕುಟುಂಬ ಇನ್ನೂ ಆರೋಪಿಗಳಾಗಿದ್ದು, ನ್ಯಾಯಾಲಯವು ಹಿರಿಯ ಕಾಂಗ್ರೆಸ್ ನಾಯಕರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಬಿಜೆಪಿ ಹೇಳಿತ್ತು. ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಆರೋಪಿಸಿದ್ದರು,(ಏಜನ್ಸೀಸ್).