ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ (ಡಿ.16) ಬಿಗ್ ರಿಲೀಫ್ ನೀಡಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರನ್ನು ಪರಿಗಣಿಸಲು ನಿರಾಕರಿಸಿರುವ ನ್ಯಾಯಾಲಯ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಸಲ್ಲಿಸಿರುವ ದೂರು ವಿಚಾರಣೆಗೆ ಅರ್ಹವಲ್ಲ, ಈ ಪ್ರಕರಣವು ಖಾಸಗಿ ದೂರನ್ನು ಆಧರಿಸಿದೆಯೇ ಹೊರತು ಎಫ್ಐಆರ್ನ್ನು ಅಲ್ಲ ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರ ಪೀಠ ತಿಳಿಸಿದೆ. ಕೇಂದ್ರ ತನಿಖಾ ಸಂಸ್ಥೆ ಈ ವಿಷಯದಲ್ಲಿ ತನ್ನ ತನಿಖೆಯನ್ನು ಮುಂದುವರಿಸಬಹುದು ಎಂದು ಆದೇಶಿಸಿದೆ.
ಎಫ್ಐಆರ್...
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಅಕ್ಟೋಬರ್ 3 ರಂದು FIR ದಾಖಲಿಸಿದೆ ಎಂದು ವರದಿಯಾಗಿದ್ದು, ಪೊಲೀಸರು IPC ಸೆಕ್ಷನ್ 120B, 403 (ಆಸ್ತಿ ದುರುಪಯೋಗ), 406 (ನಂಬಿಕೆ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಂಎಲ್‌ಎ ಸೆಕ್ಷನ್ 44 ಮತ್ತು 45 ರ ಆರೋಪಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ, ದಿವಂಗತ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ಯಂಗ್ ಇಂಡಿಯನ್ ಮತ್ತು ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಿವೆ.
ಕಾಂಗ್ರೆಸ್ ಪಕ್ಷವು ಇಡಿ ತನಿಖೆಯನ್ನು ಟೀಕಿಸಿದ್ದು, ಇದನ್ನು ರಾಜಕೀಯ ದ್ವೇಷ ಸಾಧನೆ ಎಂದು ಕರೆದಿದೆ. ಆದಾಗ್ಯೂ, ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಸಮರ್ಥಿಸಿಕೊಂಡಿದ್ದು, ವಂಚನೆ ಮತ್ತು ಹಣ ವರ್ಗಾವಣೆಯ ಪುರಾವೆಗಳನ್ನು ಒಳಗೊಂಡಿರುವ ಗಂಭೀರ ಆರ್ಥಿಕ ಅಪರಾಧ ನಡೆದಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ ಮತ್ತು ED ಆರೋಪಗಳು
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ನೀಡಿದ ದೂರಿನಿಂದ ಆರಂಭವಾದ ಈ ತನಿಖೆಯು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಆಸ್ತಿಗಳ ದುರುಪಯೋಗದ ಆರೋಪವನ್ನು ಗುರಿಯಾಗಿಸಿಕೊಂಡಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ 38 ಪ್ರತಿಶತ ಷೇರುಗಳನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾಂಗ್ರೆಸ್ ನಾಯಕರು ಪಕ್ಷದ ಸಾಲಗಳನ್ನು ಬಳಸಿಕೊಂಡು 50 ಲಕ್ಷ ರೂ.ಗೆ 2,000 ಕೋಟಿ ರೂ.ಗೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ, ಇದರಲ್ಲಿ ನಕಲಿ ಬಾಡಿಗೆ ರಶೀದಿಗಳು ಮತ್ತು ನಕಲಿ ವಹಿವಾಟುಗಳು ಸೇರಿವೆ ಎನ್ನುವುದು ಇಡಿ ಆರೋಪ.
ಕಾನೂನು ತಂಡ...
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (ಸೋನಿಯಾ), ಆರ್‌ಎಸ್ ಚೀಮಾ (ರಾಹುಲ್), ಪ್ರಮೋದ್ ದುಬೆ (ಡೋಟೆಕ್ಸ್), ಮತ್ತು ಇಡಿ ಪರವಾಗಿ ಎಎಸ್‌ಜಿ ಎಸ್‌ವಿ ರಾಜು ವಾದ ಮಂಡಿಸಿದ ವಕೀಲರುಗಳು. ಮುಂದಿನ ವಿಚಾರಣೆ ಡಿಸೆಂಬರ್ 16 ಕ್ಕೆ ನಿಗದಿಯಾಗಿದೆ(ಏಜೆನ್ಸೀಸ್).