ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ನಾಸಿಕ್ ಕಚೇರಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಬಂಧಿಸಿದಂತೆ ಕಳೆದ 42 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಗುರುವಾರ(ಮೇ 07) ರಾತ್ರಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಅಪರಾಧ ನೋಂದಣಿ ಸಂಖ್ಯೆ 156/26 ರ ಅಡಿಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ನಿದಾ ಖಾನ್ ಅವರ ಹೆಸರಿದ್ದು, ಇಂದು ನಾಶಿಕ್‌ಗೆ ಕರೆತಂದು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾರ್ಚ್ 26ರಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಮತ್ತು ಇತರ ಅಪರಾಧಗಳಿಗಾಗಿ ಖಾನ್ ವಿರುದ್ಧ ಎಫ್‌ಐಆರ್ ದಾಖಲಾದ ಕೂಡಲೇ ಪೊಲೀಸ್ ಅಧಿಕಾರಿ ಸಂದೀಪ್ ಮಿಟ್ಕೆ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರ ಬಂಧನಕ್ಕೆ ಬಲೆ ಬೀಸಿತ್ತು.
ನಾಸಿಕ್ ಐಟಿ ಕಂಪನಿಯ ಘಟಕದಲ್ಲಿ ನಡೆದಿದೆ ಎನ್ನಲಾದ ಕೆಲಸದ ಸ್ಥಳದಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪಗಳನ್ನು ಒಳಗೊಂಡ ಒಂಬತ್ತು ಪ್ರತ್ಯೇಕ ಪ್ರಕರಣಗಳನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಎಂಟು ಬಂಧಿಸಲಾಗಿದೆ.
ನಿದಾ ಖಾನ್ ವಿರುದ್ಧದ ಆರೋಪಗಳೇನು?
ಎಫ್‌ಐಆರ್ ಪ್ರಕಾರ, ನಿದಾ ಖಾನ್ ವಾಟ್ಸಾಪ್ ಗುಂಪನ್ನು ಬಳಸಿಕೊಂಡು ನೌಕರರನ್ನು ಕೆಲವು ಧಾರ್ಮಿಕ ಆಚರಣೆಗಳನ್ನು ಅನುಸರಿಸುವಂತೆ ಒತ್ತಡ ಹೇರಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಪ್ರಾರ್ಥನೆ ಸಲ್ಲಿಸಲು, ಮಾಂಸಾಹಾರ ಸೇವಿಸಲು ಹಾಗೂ ಇಸ್ಲಾಮಿಕ್ ಸಂಪ್ರದಾಯಗಳಿಗೆ ಅನುಗುಣವಾಗಿ ಉಡುಗೆ ತೊಡಲು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ (ಏಜೆನ್ಸೀಸ್).