Narottam Mishra |ಬಿಜೆಪಿ ಹಿರಿಯ ನಾಯಕ ನರೋತ್ತಮ್ ಮಿಶ್ರಾ
ದತಿಯಾ (ಮಧ್ಯಪ್ರದೇಶ): ಮುಂಬರುವ ದತಿಯಾ ವಿಧಾನಸಭಾ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ನರೋತ್ತಮ್ ಮಿಶ್ರಾ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದ್ದು, ಉಗ್ರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನರೋತ್ತಮ್ ಮಿಶ್ರಾ, ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಮತ್ತು ಇಂತಹ ಅತಿರೇಕದ ಪ್ರತಿಭಟನೆಗಳಿಂದ ದೂರವಿರುವಂತೆ ಮನವಿ ಮಾಡಿದ್ದಾರೆ.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿದ ಮಿಶ್ರಾ, ಟಿಕೆಟ್ ಕೈ ತಪ್ಪಿರುವುದು ಪಕ್ಷದ ನಿರ್ಧಾರ, ಅದನ್ನು ನಾವೆಲ್ಲರೂ ಗೌರವಿಸಬೇಕು. ಕಾರ್ಯಕರ್ತರು ಪೆಟ್ರೋಲ್, ಸೀಮೆಎಣ್ಣೆ ಸುರಿದುಕೊಳ್ಳುವ ವಿಡಿಯೋಗಳನ್ನು ನೋಡಿ ನನಗೆ ತೀವ್ರ ಬೇಸರವಾಗಿದೆ. ಇಂತಹ ಅಪಾಯಕಾರಿ ಸನ್ನಿವೇಶಗಳಿಗೆ ಯಾರೂ ಕೈಹಾಕಬೇಡಿ. ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಕ್ತ ಮಾರ್ಗಗಳಿವೆ, ಆದರೆ ಬೀದಿಯಲ್ಲಿ ಹೀಗೆ ಪ್ರತಿಭಟಿಸುವುದು ಸರಿಯಲ್ಲ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
11 ಗಂಟೆಗಳ ಕಾಲ NH-44 ಬಂದ್; 25 ಕಿ.ಮೀ ಟ್ರಾಫಿಕ್ ಜಾಮ್!
ದತಿಯಾದಲ್ಲಿ ನರೋತ್ತಮ್ ಮಿಶ್ರಾ ಬೆಂಬಲಿಗರು ನಡೆಸಿದ ರಸ್ತೆ ತಡೆ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಜಾವ 5 ಗಂಟೆಯವರೆಗೆ ಸುಮಾರು 11 ಗಂಟೆಗಳ ಕಾಲ ಮುಂದುವರಿಯಿತು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ-44 ರಸ್ತೆ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.
ದತಿಯಾ ಜಿಲ್ಲಾಧಿಕಾರಿ ಸ್ವಪ್ನಿಲ್ ವಾಂಖೆಡೆ ಹೇಳಿದ್ದೇನೆ..?
ಹೆದ್ದಾರಿಯಲ್ಲಿ ಸುಮಾರು 20 ರಿಂದ 25 ಕಿಲೋಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದತಿಯಾ, ಝಾನ್ಸಿ, ಶಿವಪುರಿ ಹಾಗೂ ಗ್ವಾಲಿಯರ್ ಜಿಲ್ಲೆಗಳ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿತ್ತು. ನೂರಾರು ಪ್ರಯಾಣಿಕರ ಬಸ್‌ಗಳು ಹಾಗೂ ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬುಲೆನ್ಸ್‌ಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡು ಸಾರ್ವಜನಿಕರು ತೀವ್ರ ಪರದಾಟ ಅನುಭವಿಸಿದರು ಎಂದು ಜಿಲ್ಲಾಧಿಕಾರಿ ಸ್ವಪ್ನಿಲ್ ವಾಂಖೆಡೆ ತಿಳಿಸಿದ್ದಾರೆ.
ಕಲೆಕ್ಟರ್ ಸೇರಿದಂತೆ 8 ಪೊಲೀಸರಿಗೆ ಗಾಯ
ಪ್ರತಿಭಟನಾಕಾರರನ್ನು ಶಾಂತಿಯುತವಾಗಿ ತೆರವುಗೊಳಿಸಲು ರಸ್ತೆಯಲ್ಲೇ ರಾತ್ರಿಯಿಡೀ ಮಾತುಕತೆ ನಡೆಸಲಾಯಿತು. ಆದರೆ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಮಾತುಕತೆ ವಿಫಲಗೊಂಡು, ಸುಮಾರು 3,000ಕ್ಕೂ ಹೆಚ್ಚು ಪ್ರತಿಭಟನಾಕಾರರು ದಿಢೀರನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಮಿಶ್ರಾ ಬೆಂಬಲಿಗರು ಹತ್ತಿರದ ಸರ್ಕಾರಿ ಕಟ್ಟಡ ಹೊಕ್ಕು ಒಳಗಿನಿಂದಲೂ ಕಲ್ಲು ತೂರಿದರು. ಜನರನ್ನು ಚದುರಿಸಲು ಪೊಲೀಸರು ಅನಿವಾರ್ಯವಾಗಿ ಅಶ್ರುವಾಯದ ಮೊರೆ ಹೋಗಬೇಕಾಯಿತು. ಈ ಹಿಂಸಾಚಾರದಲ್ಲಿ ದತಿಯಾ ಜಿಲ್ಲಾಧಿಕಾರಿ ಸ್ವಪ್ನಿಲ್ ವಾಂಖೆಡೆ (ಹೆಲ್ಮೆಟ್ ಧರಿಸಿದ್ದಾಗ್ಯೂ ತಲೆಗೆ ಗಾಯ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಯೂರ್ ಖಂಡೇಲ್ವಾಲ್, ಅಡಿಷನಲ್ ಎಸ್‌ಪಿ ಹಾಗೂ ಎಸ್‌ಡಿಪಿಒ ಸೇರಿದಂತೆ ಒಟ್ಟು 8 ಮಂದಿ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸ್ ವಾಹನಗಳು ಹಾಗೂ ಟ್ರಕ್‌ಗಳು ಜಖಂಗೊಂಡಿವೆ(ಏಜೆನ್ಸೀಸ್).