ನವದೆಹಲಿ: ನರೇಂದ್ರ ಮೋದಿ(Narendra Modi) ಇಂದಿಗೆ (ಜೂ. 10) ನಿರಂತರ ಪ್ರಧಾನಿಯಾಗಿ 12 ವರ್ಷ ಪೂರೈಸಿದ್ದು, ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ಅವರ ದಾಖಲೆಯನ್ನು ಸರಿಗಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದು, ವಿಶ್ವದ ಅನೇಕ ರಾಷ್ಟ್ರಗಳ ನಾಯಕರು ಅಭಿನಂದಿಸಿದ್ದಾರೆ.
ಮೊದಲ ಬಾರಿಗೆ 2014 ಮೇ 26ರಂದು ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿಯವರು, ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೆಹರೂ 4,398 ದಿನಗಳ ಕಾಲ ಪ್ರಧಾನಿಯಾಗಿದ್ರೆ, ಮೋದಿಯರು ಇಂದಿಗೆ ಆ ದಾಖಲೆಯನ್ನ ಮುರಿದು 4,399 ದಿನಗಳನ್ನು ಪೂರೈಸಿದ್ದಾರೆ.
ವಿಶ್ವದ ನಾಯಕರಿಂದ ಅಭಿನಂದನೆ
ಸುದೀರ್ಘ 12 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿಯವರನ್ನು ಮಂಗಳವಾರ ಹಲವಾರು ದೇಶದ ಮುಖ್ಯಸ್ಥರು ಅಭಿನಂದಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಅನುಕುಮಾರ ದಿಸಾನಾಯಕೆ, ಈ ಮೈಲಿಗಲ್ಲು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ಮೋದಿಯವರ ನಾಯಕತ್ವದಲ್ಲಿ ಪದೇ-ಪದೇ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದ್ದಾರೆ.
ಪಪುವಾ ನ್ಯೂಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ ಅವರು, ಪ್ರಧಾನಿ ಮೋದಿಯವರನ್ನು ನಾಯಕತ್ವದ ಮಾದರಿ ಮತ್ತು ಉದಾಹರಣೆ ಎಂದು ಬಣ್ಣಿಸಿದ್ದು, ಇಂದು 200 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಡತನದಿಂದ ಉತ್ತಮ ಜೀವನಕ್ಕೆ ಎತ್ತುವುದು ಅದ್ಭುತ ಸಾಧನೆಯಾಗಿದೆ ಎಂದಿದ್ದಾರೆ.
ಅದೇ ರೀತಿ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಜಾಗತಿಕ ವಿಷಯಗಳಲ್ಲಿ ಪ್ರಮುಖ ಧ್ವನಿಯಾಗಿದೆ. ಮೋದಿಯವರ ಮೂರು ಅವಧಿಗಳಲ್ಲಿ 1.4 ಶತಕೋಟಿ ಜನರ ರಾಷ್ಟ್ರವನ್ನು ಮುನ್ನಡೆಸುವ ಪ್ರಯಾಣವನ್ನು ಹಾಡಿಹೊಗಳಿದ್ದಾರೆ.
ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾರತದ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿಯವರಿಗೆ ಅಭಿನಂದನೆ. ಈ ಸಾಧನೆಯು ಭಾರತದ ಅಭಿವೃದ್ಧಿ, ಸಮೃದ್ಧಿ ಮತ್ತು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆಯುವಲ್ಲಿ ಅವರ ವರ್ಷಗಳ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).