ಸೆರ್ಗಿಯೊ ಗೋರ್, ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
- ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಿಜವಾದ ಸ್ನೇಹಿತರು
- ಡೊನಾಲ್ಡ್ ಟ್ರಂಪ್ ಮುಂದಿನ ಒಂದು-ಎರಡು ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಾರೆ
- ಭಾರತ-ಅಮೆರಿಕ ಸಂಬಂಧದ ಉನ್ನತೀಕರಣಕ್ಕೆ ನಾನು ಬಂದಿದ್ದೇನೆ
ನವದೆಹಲಿ: ಭಾರತಕ್ಕೆ ಹೊಸದಾಗಿ ನೇಮಕಗೊಂಡ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ನಡುವಿನ ಸ್ನೇಹದ ಬಗ್ಗೆ, ಅವರಿಬ್ಬರು ನಾನು ಕಂಡ ನಿಜವಾದ ಸ್ನೇಹಿತರು ಎಂದು ಕರೆದ್ದಿದ್ದಾರೆ.
ನಾನು ಅಧ್ಯಕ್ಷ ಟ್ರಂಪ್ ಜತೆ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಪ್ರಧಾನಿ ಮೋದಿಯವರೊಂದಿಗಿನ ಅವರ ಸ್ನೇಹ ನಿಜವೆಂದು ನಾನು ದೃಢೀಕರಿಸಬಲ್ಲೆ. ಅಮೆರಿಕ ಮತ್ತು ಭಾರತದ ಸಂಬಂಧವು ಬಹಳ ಉನ್ನತ ಮಟ್ಟದಲ್ಲಿದೆ ಎಂದ ಗೋರ್, ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಹೊಂದಿರುತ್ತಾರೆ ಆದರೆ ಕೊನೆಯಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಅವರೇ ಸರಿಪಡಿಸಿಕೊಳ್ಳತ್ತಾರೆ ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಒಂದು-ಎರಡು ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಎಲ್ಲಿಗೆ ಬಂದಿದೆ?
ಮಿಷನ್ ಇಂಡಿಯಾವನ್ನು ಉದ್ದೇಶಿಸಿ ಮಾತನಾಡಿದ ಗೋರ್, ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಮತ್ತು ಶೀಘ್ರದಲ್ಲೇ ಮತ್ತೊಂದು ಉನ್ನತ ಮಟ್ಟದ ಚರ್ಚೆ ನಡೆಯಲಿದೆ ಎಂದು ಹೇಳಿದರು. ಅಮೆರಿಕ ಮತ್ತು ಭಾರತದ ವ್ಯಾಪಾರ ಮಾತುಕತೆಗಳ ಸಂಕೀರ್ಣತೆಯನ್ನು ಒಪ್ಪಿಕೊಂಡ ರಾಯಭಾರಿ, ಒಪ್ಪಂದವನ್ನು ಅಂತಿಮ ಗೆರೆಯನ್ನು ದಾಟಲು ಎರಡೂ ಕಡೆಯವರು ದೃಢನಿಶ್ಚಯ ಹೊಂದಿದ್ದಾರೆ ಎಂದು ಹೇಳಿದರು.
ಭಾರತ ಮತ್ತು ಅಮೆರಿಕವು ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಭಾರತ-ಅಮೆರಿಕ ಸಂಬಂಧದ ಉನ್ನತೀಕರಣಕ್ಕೆ ನಾನು ಬಂದಿದ್ದೇನೆ
ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಉನ್ನತೀಕರಿಸುವ ಸ್ಪಷ್ಟ ಧ್ಯೇಯದೊಂದಿಗೆ ಭಾರತಕ್ಕೆ ತಾವು ಬಂದಿರುವುದಾಗಿ ಹೇಳಿದರು. ಭಾರತ-ಅಮೆರಿಕ ಸಂಬಂಧವನ್ನು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಶಿಷ್ಟ ಸಂಗಮ ಎಂದು ಅವರು ಬಣ್ಣಿಸಿದರು.
ಭಾರತದೊಂದಿಗಿನ ತಮ್ಮ ದೀರ್ಘಕಾಲದ ಸಂಪರ್ಕವನ್ನು ಪ್ರತಿಬಿಂಬಿಸುತ್ತಾ, 2013 ರಲ್ಲಿ ಅವರ ಮೊದಲ ಭೇಟಿಯು ಶಾಶ್ವತವಾದ ಪ್ರಭಾವ ಬೀರಿತು ಎಂದು ಗೋರ್ ಹೇಳಿದರು. ತಾಜ್ ಮಹಲ್, ಜೈಪುರ, ರಣಥಂಬೋರ್, ಪಂಜಾಬ್ ಮತ್ತು ಇತರ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು. ಭಾರತವು ಒಂದು ಅದ್ಭುತ ರಾಷ್ಟ್ರವಾಗಿದ್ದು, ಮುಂದಿನ ವರ್ಷಗಳಲ್ಲಿ ಅಮೆರಿಕವು ಅದರೊಂದಿಗೆ ತನ್ನ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ಉತ್ಸುಕವಾಗಿದೆ ಎಂದು ಹೇಳಿದರು,(ಏಜನ್ಸೀಸ್).