Naravane Memoir | ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆಯವರ ಆತ್ಮಚರಿತ್ರೆ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ 
ದೇಶ

ರಾಷ್ಟ್ರೀಯ ಭದ್ರತೆಗೆ ಕುತ್ತು...? ಜನರಲ್ ನರವಾಣೆ ಆತ್ಮಚರಿತ್ರೆ ಸೋರಿಕೆ ಹಿಂದೆ ಕ್ರಿಮಿನಲ್ ಪಿತೂರಿ ಶಂಕೆ! | Naravane Memoir

ದೆಹಲಿ: 2020 ರ ಭಾರತ-ಚೀನಾ ಗಾಲ್ವಾನ್ ಕಣಿವೆ ಘರ್ಷಣೆಯ ಘಟನೆಗಳನ್ನು ವಿವರಿಸುವ ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆಯ (Naravane Memoir) ಸುತ್ತಲಿನ ವಿವಾದದ ಬೆನ್ನಲ್ಲೇ, ದೆಹಲಿ ಪೊಲೀಸ್ ವಿಶೇಷ ಘಟಕವು ಪುಸ್ತಕವನ್ನು ಉದ್ದೇಶಪೂರ್ವಕವಾಗಿ ಸಂಘಟಿತ ರೀತಿಯಲ್ಲಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿದೆ.
ಈ ಆರೋಪವು ರಕ್ಷಣಾ ಸಚಿವಾಲಯದ ಕಡ್ಡಾಯ ಅನುಮತಿ ಪ್ರಕ್ರಿಯೆಯನ್ನು ತಪ್ಪಿಸಿದೆ ಎನ್ನುವುದನ್ನು ಸಾರಿ ಹೇಳುತ್ತಿದ್ದು, ನರವಾಣೆ ಅವರ ಪುಸ್ತಕವು ಭಾರತದಲ್ಲಿ ಮಾತ್ರವಲ್ಲದೆ ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿಯೂ ಪ್ರಸಾರವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಪುಸ್ತಕವು ಬೇರೆಡೆ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ, ಈ ಮೇಲಿನ ದೇಶಗಳಲ್ಲಿ ಆನ್‌ಲೈನ್‌ನಲ್ಲಿ ಮಾರಾಟವಾಗಿದೆ ಎಂದು ವರದಿಯಾಗಿದೆ. ಆದ್ದರಿಂದ ವಿಶೇಷ ಘಟಕವು ಕ್ರಿಮಿನಲ್ ಪಿತೂರಿ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆಯ ವ್ಯಾಪ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಾಗಿದೆ. ಅದರಲ್ಲೂ ನಿರ್ದಿಷ್ಟವಾಗಿ ಯುನೈಟೆಡ್ ಸ್ಟೇಟ್ಸ್, ಕೆನಡಾ, ಜರ್ಮನಿ ಮತ್ತು ಆಸ್ಟ್ರೇಲಿಯಾದ ಮೇಲೆ ಗಮನಹರಿಸಲಾಗಿದೆ.

ಪ್ರಕಾಶಕರ ನಿಲುವನ್ನು ಬೆಂಬಲಿಸಿದ ನರವಾಣೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಎಂ.ಎಂ ನರವಾಣೆ ಮಂಗಳವಾರ ತಮ್ಮ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯ ಸುತ್ತಲಿನ ವಿವಾದವನ್ನು ಪ್ರಸ್ತಾಪಿಸಿ, ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ತೆಗೆದುಕೊಂಡ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದರು. ಪುಸ್ತಕವನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ದೃಢಪಡಿಸಿದ್ದು, ಆತ್ಮಚರಿತ್ರೆಯ ವಿಶೇಷ ಪ್ರಕಾಶನ ಹಕ್ಕುಗಳನ್ನು ಪಿಆರ್​​ಎಚ್​ಐ ಮಾತ್ರ ಹೊಂದಿದೆ ಎಂದು ಪ್ರತಿಪಾದಿಸಿದೆ.

ಪೆಂಗ್ವಿನ್ ಇಂಡಿಯಾಗೆ ದೆಹಲಿ ಪೊಲೀಸರ ನೋಟಿಸ್

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆಯವರ ಆತ್ಮಚರಿತ್ರೆ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪ್ರಕಟಣೆಗೂ ಮುನ್ನ ಸೋರಿಕೆಯಾದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕವು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾಕ್ಕೆ (Penguin India ) ನೋಟಿಸ್ ಕಳುಹಿಸಿದೆ.
ನೋಟಿಸ್ ಮೂಲಕ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿರುವ ವಿಶೇಷ ಘಟಕವು, ತನಿಖೆಗೆ ಭಾಗವಹಿಸುವಂತೆ ಪ್ರಕಾಶನ ಸಂಸ್ಥೆಯ ಪ್ರತಿನಿಧಿಗಳಿಗೆ ತಿಳಿಸಿದೆ. ಜನರಲ್ ನರವಾಣೆ ಅವರ ಪುಸ್ತಕ ಮುದ್ರಣಗೊಳ್ಳುವ ಮೊದಲೇ ಸೋರಿಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ಕೋಶವು ಈ ಹಿಂದೆ ಪ್ರಕರಣ ದಾಖಲಿಸಿತ್ತು.

ರಾಹುಲ್​ ಆರೋಪ

ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಂಧಿ, ನಮಸ್ಕಾರ ಸ್ನೇಹಿತರೇ. ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಅನ್ನು ಅನುಸರಿಸಿ. ಜೈ ಹಿಂದ್ ಎಂದು ಬರೆದಿದ್ದ ನರವಾಣೆ ಅವರ 2023 ರ ಎಕ್ಸ್​ ಪೋಸ್ಟ್​ ಓದಿದರು.
ವಿವಾದ ತೀವ್ರಗೊಳ್ಳುತ್ತಿದ್ದಂತೆ, ದೆಹಲಿ ಪೊಲೀಸರು ಹಸ್ತಪ್ರತಿಯನ್ನು ಡಿಜಿಟಲ್ ಮತ್ತು ಇತರ ಸ್ವರೂಪಗಳಲ್ಲಿ ಅಕ್ರಮವಾಗಿ ಪ್ರಸಾರ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದರು. ಇತ್ತ ರಾಹುಲ್ ಗಾಂಧಿ ಸುಳ್ಳುಗಳು ಬಹಿರಂಗಗೊಂಡಿವೆ ಎಂದು ಬಿಜೆಪಿ ಆರೋಪಿಸಿದ್ದು, ದೇಶದ ಮುಂದೆ ಕಾಲ್ಪನಿಕ ಕಥೆಯನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ(ಏಜೆನ್ಸೀಸ್​).