ದೀದಿ ನಾಡಿನಲ್ಲಿ ನಮೋ ಅಬ್ಬರ; ಇದು ನನ್ನ ಕೊನೆಯ ರ‍್ಯಾಲಿ, ಮೇ 4ರ ನಂತರ ಪ್ರಮಾಣವಚನಕ್ಕೆ ಬರ್ತೀನಿ! ಬಂಗಾಳದಲ್ಲಿ ಮೋದಿ ಭವಿಷ್ಯವಾಣಿ ನಿಜವಾಗುತ್ತಾ...?
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಬರಾಕ್‌ಪೋರ್‌ನಲ್ಲಿ ನಡೆಸಿದ ಅಂತಿಮ ಪ್ರಚಾರ ಸಭೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿಯ ಗೆಲುವು ನಿಶ್ಚಿತ ಎಂದು ಘೋಷಿಸಿದ ಪ್ರಧಾನಿ, ಈಗ ಪ್ರಚಾರಕ್ಕೆ ಬಂದಿದ್ದೇನೆ, ಮುಂದಿನ ಬಾರಿ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ.
ಗೆಲುವಿನ ವಿಶ್ವಾಸದೊಂದಿಗೆ ಮರಳುತ್ತಿದ್ದೇನ
ಈ ಬಗ್ಗೆ ಸೋಮವಾರ ಬರಾಕ್‌ಪೋರ್‌ನಲ್ಲಿ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಚುನಾವಣೆಯಲ್ಲಿ ಇದು ನನ್ನ ಕೊನೆಯ ರ‍್ಯಾಲಿ. ಮೇ 4ರ ಫಲಿತಾಂಶದ ನಂತರ ನಾನು ಖಂಡಿತವಾಗಿಯೂ ಬಿಜೆಪಿಯ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ಪೂರ್ಣ ವಿಶ್ವಾಸದೊಂದಿಗೆ ಮರಳುತ್ತಿದ್ದೇನೆ ಎಂದರು. ಮುಂಜಾನೆ 2 ಕಿಲೋಮೀಟರ್ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರ ಪ್ರೀತಿಯನ್ನು ಕಂಡು ಭಾವುಕರಾದರು.
TMC ಮತ್ತು 'ಸಿಂಡಿಕೇಟ್' ವಿರುದ್ಧ ವಾಗ್ದಾಳಿ
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ, ಮಮತಾ ಬ್ಯಾನರ್ಜಿ ಸರ್ಕಾರದ ಅಡಿಯಲ್ಲಿ ಬಂಗಾಳದ ಕೈಗಾರಿಕೆಗಳು ನಾಶವಾಗಿವೆ ಮತ್ತು ಫ್ಯಾಕ್ಟರಿಗಳು ಮುಚ್ಚಲ್ಪಟ್ಟಿವೆ ಎಂದು ಆರೋಪಿಸಿದ್ದಾರೆ.
ಡಬಲ್ ಇಂಜಿನ್ ಸರ್ಕಾರ: ಬಂಗಾಳದ ವೇಗದ ಬೆಳವಣಿಗೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇರಬೇಕು.
ಸಿಂಡಿಕೇಟ್ ವ್ಯವಸ್ಥೆ: ಬಂಗಾಳದ ಅಭಿವೃದ್ಧಿಗೆ ಅಡ್ಡಿಯಾಗಿರುವ ಟಿಎಂಸಿಯ ಸಿಂಡಿಕೇಟ್ ರಾಜ್ ಅನ್ನು ಕಿತ್ತೊಗೆಯಬೇಕಿದೆ.
ಬಂಗಾಳದ ಮಹಿಳೆಯರಿಗೆ ಸುರಕ್ಷತೆ ಇಲ್ಲ
ಮಹಿಳಾ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಟಿಎಂಸಿ ಮಹಿಳೆಯರ ನಂಬಿಕೆಗೆ ದ್ರೋಹ ಬಗೆದಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಮತ ನೀಡಿದರೆ ಮಾತ್ರ ಮಹಿಳೆಯರು ರಾತ್ರಿಯ ವೇಳೆಯೂ ನಿರ್ಭಯವಾಗಿ ಓಡಾಡಲು ಸಾಧ್ಯ ಮತ್ತು ಅವರಿಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಲಂಡನ್ ಆಗಲಿಲ್ಲ, ಕೋಲ್ಕತ್ತಾ ತನ್ನ ಗುರುತನ್ನೇ ಕಳೆದುಕೊಂಡಿತು"
ಕೋಲ್ಕತ್ತಾವನ್ನು ಲಂಡನ್ ಮಾಡುವುದಾಗಿ ಭರವಸೆ ನೀಡಿದ್ದ ಟಿಎಂಸಿ, ಕಳೆದ 15 ವರ್ಷಗಳಲ್ಲಿ ನಗರದ ಅಸ್ಮಿತೆಯನ್ನೇ ಹಾಳುಮಾಡಿದೆ. ಅಕ್ರಮ ನುಸುಳುವಿಕೆಗೆ ಅವಕಾಶ ಮಾಡಿಕೊಡುವ ಮೂಲಕ ನಗರದ ಸಂಸ್ಕೃತಿಯನ್ನು ಬದಲಿಸಲಾಗಿದೆ ಎಂದು ಮೋದಿ ಕಿಡಿಕಾರಿದ್ದಾರೆ.
ಬಂಗಾಳದ ಯುವಕರಿಗೆ ಮೋದಿ ನೀಡಿದ '5 ಗ್ಯಾರಂಟಿಗಳು'
ಯುವ ಮತದಾರರನ್ನು ಸೆಳೆಯಲು ಪ್ರಧಾನಿ ಐದು ಪ್ರಮುಖ ಭರವಸೆಗಳನ್ನು ಘೋಷಿಸಿದರು.
ಸಕಾಲಿಕ ನೇಮಕಾತಿ: ಎಲ್ಲಾ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದು.
ಖಾಲಿ ಹುದ್ದೆಗಳ ಭರ್ತಿ: ರಾಜ್ಯದ ಎಲ್ಲಾ ಸರ್ಕಾರಿ ಖಾಲಿ ಹುದ್ದೆಗಳನ್ನು ವಿಳಂಬವಿಲ್ಲದೆ ಭರ್ತಿ ಮಾಡುವುದು.
ಕೌಶಲ್ಯ ಆಧಾರಿತ ಉದ್ಯೋಗ: ಯುವಕರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ.
7ನೇ ವೇತನ ಆಯೋಗ: ಬಂಗಾಳದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಜಾರಿ.
G-RAM-G ಯೋಜನೆ: ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ಯೋಜನೆ ಜಾರಿ.
ಚುನಾವಣಾ ಫ್ಲ್ಯಾಶ್‌ಬ್ಯಾಕ್:
ಮೊದಲ ಹಂತ (ಏಪ್ರಿಲ್ 23): ದಾಖಲೆಯ ಶೇ.93.19 ಮತದಾನವಾಗಿದ್ದು, ಇದು ಬಂಗಾಳದ ಇತಿಹಾಸದಲ್ಲೇ ಅತಿ ಹೆಚ್ಚು.
ಎರಡನೇ ಹಂತ: ಏಪ್ರಿಲ್ 29 ರಂದು ಮತದಾನ ನಡೆಯಲಿದೆ.
ಫಲಿತಾಂಶ: ಮೇ 4, 2026 ರಂದು ಹೊರಬೀಳಲಿದೆ,(ಏಜೆನ್ಸೀಸ್).