Namita Thapar 
ದೇಶ

ನಮಾಜ್​ ವಿಡಿಯೋದಿಂದ ಟ್ರೋಲ್​ಗೊಳಗಾದ Namitha Thapar; 'ದೇವರು ಎಲ್ಲ ನೋಡ್ಕೋತಾನೆ' ಎಂದು ಟ್ರೋಲರ್ಸ್​ಗೆ ವಾರ್ನಿಂಗ್

ಪ್ರಮುಖ ಮುಖ್ಯಾಂಶಗಳು

  • ನಮಾಜ್​ನಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ರೀಲ್ಸ್​ ಶೇರ್​ ಮಾಡಿದ ನಮಿತಾ ಥಾಪರ್​
  • ಎರಡು ವಾರಗಳಿಂದ ಟ್ರೋಲರ್ಸ್​ಗಳಿಂದ ನಿಂದನೆಗೊಳಗಾದ ಉದ್ಯಮಿ, ಬೇಸರ ವ್ಯಕ್ತ
  • ದೇವರು ನಿಮ್ಮನ್ನು ನೋಡುತ್ತಿರುತ್ತಾನೆ ಎಂದು ಟ್ರೋಲರ್ಸ್​ಗೆ ಎಚ್ಚರಿಕೆ ಕೊಟ್ಟ ನಮಿತಾ ಥಾಪರ್
ನವದೆಹಲಿ: ನಮಾಜ್(Namaz)​​ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳನ್ನು ಉಲ್ಲೇಖಿಸಿ ಮಾತನಾಡಿದ್ದ  ಶಾರ್ಕ್ ಟ್ಯಾಂಕ್ ಇಂಡಿಯಾ' ತೀರ್ಪುಗಾರ್ತಿ ಮತ್ತು ಎಮ್‌ಕ್ಯೂರ್ ಫಾರ್ಮಾಸ್ಯುಟಿಕಲ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ನಮಿತಾ ಥಾಪರ್​ (Namita Thapar)ಅವರು ಸದ್ಯ ಟ್ರೋಲ್​ಗಳ ಟೀಕೆಗೆ ಗುರಿಯಾಗಿದ್ದಾರೆ. ಜೊತೆಗೆ ಹಿಗ್ಗಾಮುಗ್ಗ ವಿವಾದಕ್ಕೆ ಒಳಗಾದ ನಂತರ ಎಕ್ಸ್​ನಲ್ಲಿ ಹೊಸ ವೀಡಿಯೋ ಹಂಚಿಕೊಂಡಿದ್ದು, ತಮ್ಮ  ಮೇಲೆ ಮಾಡುತ್ತಿರುವ ನಿಂದನೆ ಬಗ್ಗೆ ಹರಿಹಾಯ್ದಿದ್ದಾರೆ. 

ನಮಿತಾ ನಮಾಜ್​​ ಬಗ್ಗೆ ಹೇಳಿದ್ದೇನು?

ಈದ್​ ಹಬ್ಬದ (Eid) ನಂತರ ಮಾರ್ಚ್​​ 25ರಂದು ನಮಾಜ್​ನಿಂದಾಗುವ ಲಾಭದ ಬಗ್ಗೆ  ಮಾಹಿತಿ ಹಂಚಿಕೊಂಡಿದ್ದರು. 'ನಮಾಜ್​  ಒಂದು ದೈಹಿಕ ವ್ಯಾಯಾಮ, ರಕ್ತ ಪರಿಚಲನೆಗೆ ಸಹಕಾರಿ. ಕೀಲು ನೋವು ಕಡಿಮೆ ಮಾಡುತ್ತದೆ. ಇದರಲ್ಲಿ ಬರುವ ವಜ್ರಾಸನವು ನಿಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಾನಸಿಕ ಆರೋಗ್ಯವನ್ನು ಸುಗಮವಾಗಿ ಇರಿಸಲು ನಮಾಜ್​​ ಉಪಯುಕ್ತ' ಎಂದು ಮಾತನಾಡಿ ಪೋಸ್ಟ್​ ಮಾಡಿದ್ದರು.  ಮಾರ್ಚ್​ನಿಂದ ಅವರನ್ನು  ಬಿಟ್ಟುಬಿಡದೆ ಟ್ರೋಲ್​ ಮಾಡಲಾಗುತ್ತಿದೆ. 
ಹೊಸ ಪೋಸ್ಟ್​ನಲ್ಲಿ ಏನಿದೆ?
'ಕಳೆದ ಮೂರು ವಾರಗಳಿಂದ ನಿರಂತರವಾಗಿ ನಾನು ಟೀಕೆ, ನಿಂದನೆಗೆ ಒಳಗಾಗಿದ್ದೇನೆ. ನನ್ನನ್ನು ವೇಶ್ಯೆ ಎಂದು ಕರೆಯಲಾಗುತ್ತಿದೆ. ನನ್ನ ತಾಯಿಯನ್ನು ನಿಂದಿಸುತ್ತಿದ್ದಾರೆ. ಇದು ಯಾತಕ್ಕಾಗಿ, ನಾನು ಮಾಡಿದ ನಮಾಜ್​ ಪ್ರಯೋಜನಗಳ ರೀಲ್​ಗಾಗಿ. ನಾನು ಆರೋಗ್ಯದ ಬಗೆಗಿನ ವೃತ್ತಿಪರಳು. ನಾನು ಸಹ ಒಬ್ಬ ಹೆಮ್ಮೆಯ ಹಿಂದೂ.  ನಾನು ಈ ಹಿಂದೆ ಹಿಂದೂ ಧರ್ಮದ ಧಾರ್ಮಿಕ ಆಚರಣೆ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾತನಾಡಿ, ರೀಲ್ಸ್​​ ಹಂಚಿಕೊಳ್ಳುತ್ತಿದ್ದೆ. ಆಗ ನೀವು ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ.  ಯೋಗದಿನದಂದು ನಾನು ಪ್ರತಿ ಆಸನದ ಬಗ್ಗೆ ವಿವರಣೆ ಕೊಟ್ಟಿದೆ. ಅದರಲ್ಲು ಸೂರ್ಯ ನಮಸ್ಕಾರದಿಂದಾಗುವ ಪೂರ್ಣ ಲಾಭದ ಬಗ್ಗೆ ವಿವರಣೆ ಕೊಟ್ಟಿದ್ದೆ. ಈಗ ನಮಾಜ್​ ಬಗ್ಗೆ ಹೇಳಿದ್ದಕ್ಕೆ ಯಾಕಿಷ್ಟು...ನಿಂದಿಸುತ್ತಿದ್ದೀರಿ' ಎಂದು ಟ್ರೋಲರ್ಸ್​ಗಳಿಗೆ ಖಡಕ್​ ಆಗಿ ಪ್ರಶ್ನೆ ಮಾಡಿದ್ದಾರೆ.  

ಕರ್ಮ ನಿಮ್ಮನ್ನೆಂದಿಗೂ ಬಿಡೊಲ್ಲ

'ಹಿಂದೂ ಧರ್ಮದಲ್ಲಿ ಹಿರಿಯರು ಮತ್ತು ಕಿರಿಯರಿಗೆ ಹಾಗೂ ಮಹಿಳೆಯರಿಗೆ ಗೌರವ ಕೊಡಬೇಕು ಎನ್ನುವುದನ್ನು ನನಗೆ ನನ್ನ ತಾಯಿ ಕಲಿಸಿಕೊಟ್ಟಿದ್ದಾರೆ. ನಿಮಗೂ ಇದ್ರ ಬಗ್ಗೆ ಗೊತ್ತಿದೆ ಎಂದುಕೊಂಡಿದ್ದೇನೆ. ಗೊತ್ತಿದ್ದರೆ, ಮಹಿಳೆಯರಿಗೆ ಗೌರವ ಕೊಡುವುದು ಹೀಗೇನಾ?. ನಾನು ಹೆಮ್ಮೆಯ ಹಿಂದೂ ಮಹಿಳೆ. ಹಿಂದೂ ಧರ್ಮದಲ್ಲಿ ಕರ್ಮ ಮರುಕಳಿಸುತ್ತದೆ ಎಂಬುದನ್ನು ನಾನು ನಂಬಿದ್ದೇನೆ. ಅದನ್ನು ನೆನಪಿಟ್ಟುಕೊಳ್ಳಿ' ಎಂದು ಟ್ರೋಲರ್ಸ್​ಗಳನ್ನು ಜಾಡಿಸಿದ್ದಾರೆ.

ದೇವರು ನೋಡ್ಕೋತಾನೆ

ಮುಂದುವರೆದು,' ಕರ್ಮ ಎಂದರೆ ನೀವು ಮಾಡಿದ್ದನ್ನು, ನೋಯಿಸಿದ್ದನ್ನು ಮೂರು ಪಟ್ಟು ಅನುಭವಿಸುವ ಕಾಲ ಬರುತ್ತದೆ ಎಂದು. ಈ ಹಿಂದೂ ಧರ್ಮದ ಪರಿಕಲ್ಪನೆಯ ಕರ್ಮವನ್ನು ನಂಬಿದ್ದೇನೆ. ದೇವರು ನಿಮ್ಮನ್ನು ಗಮನಿಸುತ್ತಿರುತ್ತಾನೆ. ಇದನ್ನು ಟ್ರೋಲರ್​​ಗಳು ನೆನಪಿಟ್ಟುಕೊಳ್ಳಬೇಕು' ಎಂದು ಹೇಳಿದ್ದಾರೆ. 
'ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಫೇಲ್​ ಆದ ಕಾರಣ ಎಲ್ಲರೂ ಹೇಳಿಕೆಗಳನ್ನು ಕೊಟ್ಟರು. ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಇಂದು ನಾನು ಇಷ್ಟೆಲ್ಲ ನಿಂದನೆಗೆ ಒಳಗಾದರೂ ಸಹಾ ಯಾರೂ ಸಹ ನನ್ನ ಪರ ನಿಂತಿಲ್ಲ. ಅದರ ಬೇಸರ ನನಗಿಲ್ಲ ಏಕೆಂದರೆ, ನನಗೆ ಗೊತ್ತಿದೆ ಒಬ್ಬಂಟಿಯಾಗಿ ಹೋರಾಡುವುದು. ಹಾಗೆಯೇ ಹೆಣ್ಮಕ್ಕಳ ಪರ ಯಾರು ನಿಲ್ಲೋದಿಲ್ಲ ಎನ್ನುವುದನ್ನು ಹಲವು ವರ್ಷಗಳ ಹಿಂದೆಯೇ ಅರಿತುಕೊಂಡಿದ್ದೇನೆ' ಎಂದರು, (ಏಜೆನ್ಸೀಸ್​)