ನವದೆಹಲಿ: ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ವಿರೋಧ ಪ್ರತಿಪಕ್ಷ ನಾಯಕರು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇದರ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡುತ್ತಿದೆ.
ಈ ಹಿನ್ನಲೆ ಮಂಗಳವಾರ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿ ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಎಸ್ಐಆರ್ ಪ್ರಕ್ರಿಯೆ ಮೂಲಕ ಇಲ್ಲಿವರೆಗೆ ಸುಮಾರು 13 ಕೋಟಿ ಮತದಾರರ, ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಚುನಾವಣಾ ಆಯೋಗ ಧಕ್ಕೆ ಉಂಟುಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈಗ, ಈ ಆರೋಪಕ್ಕೆ ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದ್ದು, ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರನ್ನು ಕೈಬಿಡಲು ಕಾರಣವೇನು ಎನ್ನುವುದನ್ನು ತಿಳಿಸಿದೆ.
ಕೇಂದ್ರ ಚುನಾವಣಾ ಆಯೋಗ ಹೊರಹಾಕಿರುವ ಡೇಟಾ ಪ್ರಕಾರ, ಇದುವರೆಗೆ ಮೂರು ಹಂತಗಳಲ್ಲಿ ಸರಿಸುಮಾರು 95.40 ಕೋಟಿ ಮತದಾರರನ್ನು ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಇದರಲ್ಲಿ 13. 39 ಕೋಟಿ ಮತದಾರರನ್ನು ASDD ಆಧಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
ASDD ಎಂದರೆ, A- Absent (ಗೈರು), S- Shifted (ಸ್ಥಳಾಂತರ) D- Dead (ಸಾವು), D- Duplicate (ನಕಲಿ) ಎಂಬ ನಾಲ್ಕು ಅಂಶಗಳ ಆಧಾರದಲ್ಲಿ ಒಂದಕ್ಕಿಂತ ಹೆಚ್ಚಿನ ಮತದಾರರ ಗುರುತಿನ ಚೀಟಿ ಅಥವಾ ಮತದಾನದ ಹಕ್ಕನ್ನು ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಆಯೋಗಕ್ಕೆ ಅಧಿಕಾರವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗೂ ಇವುಗಳ ಆಧಾರದಲ್ಲೇ 13.39 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ದಾಗಿ ಮಾಹಿತಿ ಹಂಚಿಕೊಂಡಿದೆ.
A- Absent (ಗೈರು) - 3.01 ಕೋಟಿ
S- Shifted (ಸ್ಥಳಾಂತರ) - 6.30 ಕೋಟಿ
D- Dead (ಸಾವು) - 2.80 ಕೋಟಿ
D- Duplicate (ನಕಲಿ) - 1.02 ಕೋಟಿ
ಇತರೆ- 0.26 ಕೋಟಿ
ಒಟ್ಟು - 13.39 ಕೋಟಿ
ಈ ASDD ಪಟ್ಟಿಯನ್ನು ಬೂತ್ಮಟ್ಟದಲ್ಲಿ ತಯಾರಿಸಲಾಗಿದ್ದು, ಇದನ್ನು ಇಲ್ಲಿವರೆಗೆ 22 ಲಕ್ಷ ಬೂತ್ಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೂ ಈ ಪಟ್ಟಿಯನ್ನು ಸಿದ್ಧ ಪಡಿಸಿ ಆಯೋಗಕ್ಕೆ ರವಾನಿಸುವ ಪೂರ್ವದಲ್ಲಿ ಪ್ರತಿ ರಾಜಕೀಯ ಪಕ್ಷಗಳಿಗೆ ಅವರ ಅಭಿಪ್ರಾಯವನ್ನು ತಿಳಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಹಾಗೆಯೇ, ಈ ಮೇಲಿನ ಯಾವುದೇ ಕಾರಣದಿಂದ, ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟ ಪಕ್ಷದಲ್ಲಿ, ಇದರ ಬಗ್ಗೆ ಕಂಪ್ಲೇಂಟ್ ನೀಡಲು ಒಂದು ತಿಂಗಳ ಅವಧಿಯನ್ನು ಜನರಿಗೆ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗೇನಾದರೂ ಪಟ್ಟಿಯಿಂದ ತಪ್ಪಾಗಿ ಹೆಸರನ್ನು ತೆಗೆದುಹಾಕಿದ್ದರೆ, ಇನ್ನೊಮ್ಮೆ ಸೇರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್).