ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  
ದೇಶ

ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರು ನಾಪತ್ತೆ!...ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಯೋಗಿ ನೀಡಿದ ಖಡಕ್​ ಎಚ್ಚರಿಕೆ ಏನು..? | Yogi Adityanath

ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣಾ ಸಿದ್ಧತೆಗಳ ಭಾಗವಾಗಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯ ಕುರಿತು ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಕೋಟ್ಯಂತರ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಲೋಪವನ್ನು ಸರಿಪಡಿಸಲು ಮತ್ತು ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಎಲ್ಲ ಬಿಜೆಪಿ ಕಾರ್ಯಕರ್ತರು ತೀವ್ರ ನಿಗಾ ವಹಿಸುವಂತೆ ಅವರು ಕರೆ ನೀಡಿದ್ದಾರೆ.

ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ!

ಸಭೆಯಲ್ಲಿ ಅಂಕಿಅಂಶಗಳನ್ನು ಬಿಚ್ಚಿಟ್ಟ ಸಿಎಂ ಯೋಗಿ ಆದಿತ್ಯನಾಥ್, ಒಟ್ಟು 1.27 ಕೋಟಿ ಹಿಂದೂಗಳ ಹೆಸರುಗಳು ಮತದಾರರ ಪಟ್ಟಿಯಿಂದ ಕಾಣೆಯಾಗಿವೆ ಎಂದು ಆರೋಪಿಸಿದ್ದಾರೆ. ಜನಸಂಖ್ಯೆಯ ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಪ್ರಸ್ತುತ ಇರುವ ಸುಮಾರು 13 ಕೋಟಿ ಮತದಾರರ ಬದಲಿಗೆ 16 ಕೋಟಿಗೂ ಅಧಿಕ ಮತದಾರರು ಇರಬೇಕಿತ್ತು ಎಂದು ಅವರು ವಾದಿಸಿದ್ದಾರೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ವೋಟ್ ಡಿಲೀಟ್​ ಮಾಡಿರುವುದು ರಾಜ್ಯದ 28 ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಲ್ಲಿ ಪಕ್ಷವನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪಂಚಾಯತ್ ಚುನಾವಣಾ ಮತದಾರರ ಪಟ್ಟಿಯಲ್ಲಿರುವ ಸುಮಾರು 66 ಲಕ್ಷ ಜನರ ಹೆಸರುಗಳು ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿಲ್ಲದಿರುವುದನ್ನು ಅವರು ಗಮನಕ್ಕೆ ತಂದಿದ್ದಾರೆ. ಅದೇ ರೀತಿ, ಸರ್ಕಾರದ ವಿವಿಧ ಅಭಿವೃದ್ದಿ ಯೋಜನೆಗಳ 55 ಲಕ್ಷ ಫಲಾನುಭವಿಗಳ ಹೆಸರುಗಳು ಕೂಡ ಮತದಾರರ ಪಟ್ಟಿಯಿಂದ ಮಾಯವಾಗಿವೆ. ಇದರೊಂದಿಗೆ 18-19 ವಯಸ್ಸಿನ ಸುಮಾರು 4.5 ಲಕ್ಷ ಯುವ ಮತದಾರರ ಹೆಸರುಗಳು ಕೂಡ ಪಟ್ಟಿಯಲ್ಲಿಲ್ಲ ಎಂದು ಅವರು ತಿಳಿಸಿದ್ದಾರೆ. ಹಿಂದಿನ ಎಸ್‌ಐಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೇವಲ 4 ಲಕ್ಷ ಮತದಾರರನ್ನು ಮಾತ್ರ ಹೊಸದಾಗಿ ಸೇರಿಸಲಾಗಿದೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ!

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಯಾವುದೇ ಅರ್ಹ ಮತದಾರರು ಬಿಟ್ಟುಹೋಗದಂತೆ ನೋಡಿಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಈ ಪ್ರಕ್ರಿಯೆಯ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ವಿಶೇಷವಾಗಿ ಎಲ್ಲಾ ಹಿಂದೂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸಂಸದರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ.

ಮತ್ತೊಂದೆಡೆ, ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಎಸ್‌ಐಆರ್ ಪ್ರಕ್ರಿಯೆಯ ಬಳಿಕ ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಬರೋಬ್ಬರಿ 2.04 ಕೋಟಿಗೂ ಅಧಿಕ ಮತದಾರರನ್ನು ಕೈಬಿಡಲಾಗಿದೆ. ಇದು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ನಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರು ಇದರ ಪರಿಣಾಮ ಎದುರಿಸಿದ್ದಾರೆ. ಆದಾಗ್ಯೂ, 84 ಲಕ್ಷಕ್ಕೂ ಹೆಚ್ಚು ಹೊಸ ಮತದಾರರನ್ನು ಸೇರಿಸಲಾಗಿದ್ದು, ಇದರೊಂದಿಗೆ ರಾಜ್ಯದ ಅಂತಿಮ ಮತದಾರರ ಸಂಖ್ಯೆ 13,39,84,792 ಕ್ಕೆ ತಲುಪಿದೆ ಎಂದು ಇಸಿಐ ತಿಳಿಸಿದೆ(ಏಜೆನ್ಸೀಸ್​).