ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ
ಕೋಲ್ಕತ್ತಾ: ವಿಶ್ವದಾದ್ಯಂತ ಭಾರಿ ತಲ್ಲಣಕ್ಕೆ ಕಾರಣವಾಗಿರುವ ಎಪ್ಸ್ಟೀನ್ ಫೈಲ್ಸ್‌ನಲ್ಲಿ ಹೆಸರಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ರಾಜೀನಾಮೆ ನೀಡುವಂತೆ ಭಾನುವಾರ(ಫೆ. 01) ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಲೈಂಗಿಕ ಅಪರಾಧಿ ಮತ್ತು ಅಮೇರಿಕನ್ ಉದ್ಯಮಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಫೈಲ್‌ಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಸಹ ಇದೆ ಎಂಬ ವದಂತಿ ಹಬ್ಬಿದ್ದು, ಅದನ್ನು ಕೇಂದ್ರ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.
ಈ ಕುರಿತು ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಎಪ್ಸ್ಟೀನ್ ಫೈಲ್‌ಗಳಲ್ಲಿ ಮೋದಿ ಹೆಸರು ಇರುವುದು ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಎಪ್ಸ್ಟೀನ್ ಅವರ ಜೊತೆ ಮೋದಿಯವರ ಸಂಪರ್ಕ ಏನೇ ಇರಲಿ, ಪ್ರಜಾಪ್ರಭುತ್ವ ದೇಶದಲ್ಲಿ ನೈತಿಕ ಹೊಣೆಗಾರಿಕೆಯಿಂದ ಅವರು ರಾಜೀನಾಮೆ ನೀಡಬೇಕು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಅನುಸರಿಸಬೇಕು. ಮೌನವಾಗಿರುವುದು ಸರಿಯಲ್ಲ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಯನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಜೆಫ್ರಿ ಎಪ್ಸ್ಟೀನ್ರ ಭೇಟಿಯ ಭಾಗವೆಂದು ಹೇಳಲಾದ ಇಮೇಲ್‌ನಲ್ಲಿ ಉಲ್ಲೇಖಿಸಲಾದ ಪ್ರಧಾನಿ ನರೇಂದ್ರ ಮೋದಿಯವರ 2017ರ ಇಸ್ರೇಲ್ ಪ್ರವಾಸದ ಉಲ್ಲೇಖಗಳನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಆಧಾರರಹಿತವೆಂದು ತಳ್ಳಿಹಾಕಿದ್ದಾರೆ. ಈ ವದಂತಿಗಳು ಕೇವಲ ಉಹಾತ್ಮಕವಾಗಿದ್ದು, ಇವುಗಳನ್ನು ಗಂಭೀರವಾಗಿ ಪರಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).