ನಡುರಸ್ತೆಯಲ್ಲಿ ನಮಾಜ್ ಮಾಡಿದ ವ್ಯಕ್ತಿ
- ನಡುರಸ್ತೆಯಲ್ಲಿ ನಮಾಜ್ ಮಾಡಿದ ವ್ಯಕ್ತಿ
- ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಿದ ಯುಪಿ ಪೊಲೀಸರು
- ಅವನು ಮಾನಸಿಕ ಅಸ್ವಸ್ಥ ಎಂದ ಕುಟುಂಬ ವರ್ಗ
ಉತ್ತರ ಪ್ರದೇಶ: ಜನ ನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ನಮಾಜ್ (Namaz On Road) ಮಾಡಿದ್ದು, ಪರಿಣಾಮ ಪೊಲೀಸರು ವಶಕ್ಕೆ ಪಡಿದಿರುವ ಘಟನೆ ಉತ್ತರ ಪ್ರದೇಶದ ರಾಮ್ಪುರ್ದಲ್ಲಿ ವರದಿಯಾಗಿದೆ.
ಸುತ್ತಲೂ ವಾಹನಗಳಿಂದ ತುಂಬಿರುವ ಶಾಹಬಾದ್ ಗೇಟ್ ಕ್ರಾಸಿಂಗ್ನಲ್ಲಿ ಬಂಧಿತ ವ್ಯಕ್ತಿ ನಮಾಜ್ ಸಲ್ಲಿಸಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ನಮಾಜ್ ಸಲ್ಲಿಸುತ್ತಿದ್ದ ನಯೀಮ್(35) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಅವನೊಬ್ಬ ಮಾನಸಿಕ ಅಸ್ವಸ್ಥ!
ಮನೆಯ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದ ವಿಷಯ ತಿಳಿದ ನಂತರ ಪೊಲೀಸ್ ಠಾಣೆಗೆ ಬಂದ ಕುಟುಂಬ ವರ್ಗ ಅವನು ಮಾನಸಿಕ ಅಸ್ವಸ್ಥನಾಗಿದ್ದು, ಈ ರೀತಿಯ ಕೆಲಸ ಮಾಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವ ಮೂಲಕ ಅಶಾಂತಿ ಉಂಟುಮಾಡುವ ಯೋಜನೆ ಅವನದ್ದಾಗಿರಲಿಲ್ಲ ಎನ್ನುವುದುವು ಕುಟುಂಬದವರ ವಾದವಾಗಿದೆ. ಪೊಲೀಸರು ಸಹ ವಿಚಾರಣೆಯ ಸಂದರ್ಭದಲ್ಲಿ ಈತ ಮಾನಸಿಕವಾಗಿ ಸರಿಯಿಲ್ಲ ಎಂದು ದೃಢ ಪಡಿಸಿದ್ದಾರೆ. ಆದರೆ ಸಾರ್ವಜನಿಕ ಅಶಾಂತಿ ಉಂಟಾದ ಕಾರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅನುರಾಗ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋವನ್ನು ಆಧರಿಸಿ ಅವನನ್ನು ಕಸ್ಟಡಿಗೆ ತೆಗೆದುಕೊಂಡು ಎಫ್.ಐ.ಆರ್ ದಾಖಲಿಸಲಾಗಿದ್ದು, ಈಗ ಅವನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನುರಾಗ್ ಸಿಂಗ್ ತಿಳಿಸಿದ್ದಾರೆ.
ಯುಪಿಯಲ್ಲಿ ಸಾರ್ವಜನಿಕ ಪ್ರಾರ್ಥನೆ ನಿಷಿದ್ಧ!
ರಾಜ್ಯದಲ್ಲಿ ಕೋಮು ಗಲಭೆ ಮತ್ತು ಹಿಂಸಾಚಾರವನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ. ಧಾರ್ಮಿಕ ಆಚರಣೆ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳ ಬಹುದೆಂದು ಅಲಹಾಬಾದ್ ಹೈಕೋರ್ಟ್ ಸಹ ತಿಳಿಸಿದೆ.
ಖಾಸಗಿ ಸ್ಥಳಗಳಲ್ಲಿ ಹಾಗೂ ಅನುಮತಿ ಪಡೆದ ದಿನ ಹಾಗೂ ಸ್ಥಳಗಳಲ್ಲಿ ನಮಾಜ್, ಪೂಜೆ, ಮೆರವಣಿಗೆ ಮಾಡಲು ಅವಕಾಶವಿದ್ದು, ಕಾನೂನುಬಾಹಿರ ರೀತಿಯಲ್ಲಿ ಧಾರ್ಮಿಕ ಆಚರಣೆ ನಡೆಸಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್).