The Jerusalem Post | 'ದಿ ಜೆರುಸಲೆಮ್ ಪೋಸ್ಟ್' ಮುಖಪುಟದಲ್ಲಿ ರಾರಾಜಿಸಿದ ಮೋದಿ
ದೆಹಲಿ/ಟೆಲ್ ಅವಿವ್: ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಅಲ್ಲಿನ ಪ್ರಭಾವಿ ಇಂಗ್ಲಿಷ್ ದಿನಪತ್ರಿಕೆ 'ದಿ ಜೆರುಸಲೆಮ್ ಪೋಸ್ಟ್' (The Jerusalem Post) ಈ ಐತಿಹಾಸಿಕ ಭೇಟಿಯನ್ನು ಸಂಭ್ರಮಿಸಲು ತನ್ನ ಇಡೀ ಮುಖಪುಟವನ್ನೇ ಮೀಸಲಿಟ್ಟಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತಾದ ಪೋಸ್ಟ್ ಹಂಚಿಕೊಂಡಿರುವ ಪತ್ರಿಕೆಯ ಪ್ರಧಾನ ಸಂಪಾದಕ ಜ್ವಿಕಾ ಕ್ಲೈನ್, ನಾಳೆ ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಇಸ್ರೇಲ್‌ನಲ್ಲಿ ಬರಮಾಡಿಕೊಳ್ಳುತ್ತಿದ್ದೇವೆ. ಈ ಮಹತ್ವದ ಕ್ಷಣವನ್ನು ಸ್ವಾಗತಿಸಲು ನಮ್ಮ ಪತ್ರಿಕೆಯು ವಿಶೇಷ ಮುಖಪುಟವನ್ನು ಹೊರತರುತ್ತಿದೆ, ಇದಕ್ಕೆ ನಿಮ್ಮ ಅಭಿಪ್ರಾಯವೇನು? ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಭಾರತೀಯರು ಮತ್ತು ಇಸ್ರೇಲಿಗಳು ಇದನ್ನು ಹಂಚಿಕೊಳ್ಳುವ ಮೂಲಕ ದ್ವಿಪಕ್ಷೀಯ ಬಾಂಧವ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಬುಧವಾರ ಸಂಜೆ 4 ಗಂಟೆಗೆ (ಭಾರತೀಯ ಪ್ರಮಾಣಿತ ಸಮಯ) ಇಸ್ರೇಲ್‌ನಲ್ಲಿ ಇಳಿಯಲಿದ್ದು, 2017 ರ ಬಳಿಕ ಮೋದಿ ತಮ್ಮ ಮೊದಲ ಇಸ್ರೇಲ್ ಭೇಟಿ ಕೈಗೊಂಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ದ್ವಿಪಕ್ಷೀಯ ವ್ಯಾಪಾರ, ರಕ್ಷಣೆ ಮತ್ತು ಭದ್ರತಾ ಸಹಕಾರದ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸುವ ನಿರೀಕ್ಷೆಯಿದೆ.
ಇಬ್ಬರೂ ನಾಯಕರು ಭಾರತ - ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಆಗಿರುವ ಮಹತ್ವದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ಜಲ ನಿರ್ವಹಣೆ, ವ್ಯಾಪಾರ ಮತ್ತು ಆರ್ಥಿಕತೆ ಮತ್ತು ಜನರಿಂದ ಜನರ ವಿನಿಮಯ ಸೇರಿದಂತೆ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಚರ್ಚಿಸಲಿದ್ದಾರೆ.
ಉಭಯ ನಾಯಕರು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತಾದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದ್ದು, ಇಸ್ರೇಲ್-ಇರಾನ್ ಸಂಘರ್ಷ ಆರಂಭವಾದಾಗಿನಿಂದ ಗಾಜಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸುವ ನಿರೀಕ್ಷೆಯಿದೆ.
ಈ ಭೇಟಿಗೂ ಮುನ್ನವೇ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಬಗ್ಗೆ ಎರಡೂ ದೇಶಗಳು ತಮ್ಮ ನಿಲುವನ್ನು ಪುನರುಚ್ಚರಿಸಿದ್ದು, ವರ್ಧಿತ ಗುಪ್ತಚರ ಮತ್ತು ಮಾಹಿತಿ ಹಂಚಿಕೆ ಸೇರಿದಂತೆ ಇತರೆ ಬೆದರಿಕೆಯನ್ನು ಎದುರಿಸಲು ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಗಾಢವಾಗಿಸಲು ಪ್ರತಿಜ್ಞೆ ಮಾಡಿದವು.
ನೆಸ್ಸೆಟ್‌ನಲ್ಲಿ ಐತಿಹಾಸಿಕ ಭಾಷಣ
ಪ್ರಧಾನಿ ಮೋದಿ ಇಸ್ರೇಲ್‌ನ ಸಂಸತ್ತು ನೆಸ್ಸೆಟ್ನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದ್ದು, ಈ ಗೌರವ ಪಡೆದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ವಿಶೇಷವಾಗಿಸಲು ಸ್ಥಳೀಯ ಸರ್ಕಾರ ಅತ್ಯಂತ ಅಪರೂಪದ ಮತ್ತು ಗೌರವಯುತ ಕ್ರಮವನ್ನು ಕೈಗೊಂಡಿದ್ದು, ನೆಸ್ಸೆಟ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ(ಏಜೆನ್ಸೀಸ್).