ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (ಚಿತ್ರ X) 
ದೇಶ

ನಾಗ್ಪುರ ಕಾರ್ಖಾನೆಯಲ್ಲಿ ಸ್ಫೋಟ: 17 ಕಾರ್ಮಿಕರು ಬಲಿ...ಕಂಬನಿ ಮಿಡಿದ ಸಿಎಂ ಫಡ್ನವೀಸ್! Nagpur explosion

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸ್ಪೋಟದಲ್ಲಿ (Nagpur explosion) ಸುಮಾರು 17 ಜನ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಹಿನ್ನಲೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ.
ನಾಗ್ಪುರ ಜಿಲ್ಲೆಯ ರೌಲ್ಗಾಂವ್‌ನಲ್ಲಿರುವ ಸ್ಫೋಟಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದ ಘಟನೆ ಅತ್ಯಂತ ದುರದೃಷ್ಟಕರ. ಘಟನೆ ಸಂಭವಿಸಿದಾಗಿನಿಂದಲೂ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಗಳು ಚುರುಕುಗೊಂಡಿವೆ. ಈವರೆಗೂ ಸುಮಾರು 17 ಜನ ಪ್ರಾಣ ಕಳೆದುಕೊಂಡಿದ್ದು, 18 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದ್ದು, ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಫಡ್ನವೀಸ್ ಭಾವುಕರಾಗಿದ್ದಾರೆ.
ದುರಂತ ಮತ್ತು ದುರದೃಷ್ಟಕರ ಘಟನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ 
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ನಾಗ್ಪುರ ಜಿಲ್ಲೆಯ ಕಟೋಲ್‌ನ ರೌತ್‌ಲ್‌ಗಾವ್ ಗ್ರಾಮದಲ್ಲಿರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 17 ಜನರು ಮೃತಪಟ್ಟಿರುವುದು ದುರದೃಷ್ಟಕರ ಸಂಗತಿ. ಮೃತ ಕಾರ್ಮಿಕರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ. ಕುಟುಂಬಗಳಿಗೆ ಆ ದೇವರು  ನಷ್ಟ ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಘಟನೆಯ ಹಿನ್ನೆಲೆ 
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ  ದುರಂತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಾಗ್ಪುರ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕಾಟೋಲ್ ತಹಸಿಲ್‌ನ ರೌಲ್‌ಗಾಂವ್​ನಲ್ಲಿರುವ  ಎಸ್‌ಬಿಎಲ್ ಎನರ್ಜಿ ಲಿಮಿಟೆಡ್ ಸ್ಪೋಟಕ ತಯಾರಿಕಾ ಸಂಸ್ಥೆಯಲ್ಲಿ ಘಟನೆ ಸಂಭವಿಸಿದ್ದು, ಈ ಕಂಪನಿಯು ಗಣಿಗಾರಿಕೆ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುವ ಡೆಟೊನೇಟರ್‌ಗಳನ್ನು ತಯಾರಿಸುತ್ತಿತ್ತು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕಾರ್ಖಾನೆಯ ಡೆಟೊನೇಟರ್ ಪ್ಯಾಕಿಂಗ್ ಯುನಿಟ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ (ಏಜೆನ್ಸೀಸ್​).