ನಾಗ್ಪುರದಲ್ಲಿ ಸಂಭವಿಸಿದ ಕ್ಲೋರಿನ್ ಅನಿಲ ಸೋರಿಕೆ
- ನಾಗ್ಪುರದಲ್ಲಿ ಸಂಭವಿಸಿದ ಕ್ಲೋರಿನ್ ಅನಿಲ ಸೋರಿಕೆ
- ಅನಿಲ ಸೋರಿಕೆ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು
- ಎನ್‌ಡಿಆರ್‌ಎಫ್ (NDRF) ತಂಡದಿಂದ ಯಶಸ್ವಿ ಕಾರ್ಯಾಚರಣೆ
ನಾಗ್ಪುರ: ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಅನಿಲ
(Nagpur Chlorine Gas leak) ಬಿಡುಗಡೆಯಾಗಿರುವ ಅಪಾಯಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದ ಗೊಧ್ನಿಯಲ್ಲಿ ವರದಿಯಾಗಿದೆ. ಸುಮಾರು 40 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿರುವ ಕುರಿತು ಮಾಹಿತಿ ತಿಳಿದು ಬಂದಿದೆ.
ಆದರೆ, ಈ ಅನಿಲ ಸೋರಿಕೆ ಹೇಗೆ ಸಂಭವಿಸಿತು ಎನ್ನುವುದಕ್ಕೆ ಸ್ಪಷ್ಟ ಕಾರಣ ತಿಳಿದು ಬರದೇ ಇದ್ದರೂ, ಸುಮಾರು 900 ಕೆ.ಜಿ ಸಾಮರ್ಥ್ಯವಿದ್ದ ಸಿಲಿಡಂರ್ನಿಂದ ಈ ಸೋರಿಕೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗೆ ದಾಖಲು; ಮುಂದುವರಿದ ಚಿಕಿತ್ಸೆ!
ಈ ಘಟನೆ ತಡರಾತ್ರಿ ಸುಮಾರು 1.30 ಕ್ಕೆ ನಡೆದಿದ್ದು, ವಿಷಕಾರಿ ಅನಿಲವಾದ ಕ್ಲೋರಿನ್ ಅನ್ನು ಮೂಗಿನ ಮೂಲಕ ಸೇವಿಸಿದ ಸುಮಾರು 40 ಜನ ಉಸಿರಾಟದ ತೊಂದರೆಯನ್ನು ಅನುಭವಿಸಿದ ಹಿನ್ನಲೆ ನಗರದ ಜಿಂಗಾಬಾಯಿ ಟಕ್ಲಿ ಮತ್ತು ಮೇಯೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಗಂಭೀರವಾದ ಪರಿಸ್ಥಿತಿ ಏನಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ, ಸ್ಥಳಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ಪಡೆ ಪರಿಸ್ಥಿತಿಯನ್ನು ಆದಷ್ಟು ಬೇಗ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನಿಲ ಸೋರಿಕೆಗೆ ಕಾರಣವಾಗಿದ್ದ, 900 ಕೆ.ಜಿ ತೂಕದ ಕ್ಲೋರಿನ್ ಸಿಲಿಂಡರ್ಅನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿರುವ ಎನ್‌ಡಿಆರ್‌ಎಫ್ ಪಡೆ, ಹರಡುತ್ತಿರುವ ವಿಷಾನಿಲದ ತೀವ್ರತೆಯನ್ನು ಕಡಿಮೆ ಮಾಡಲು ಕ್ಲೋರಿನ್ ಅನ್ನು ಕಾಸ್ಟಿಕ್ ಸೋಡಾದ ನೀರಿನಲ್ಲಿ ವಿಲೀನ ಮಾಡಲಾಗಿದ್ದು, ಬೆಳಗ್ಗಿನ ಜಾವ 5.30 ಕ್ಕೆ ಈ ಕಾರ್ತಾಚರಣೆ ಮುಕ್ತಾಯವಾಗಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).