WEB
ದೇಶ

ದಾನಿಗಳ ಪಟ್ಟಿಯಲ್ಲಿ ನಡಾರ್​ಗೆ ಅಗ್ರಸ್ಥಾನ

ಎಚ್​ಸಿಎಲ್ ಸಂಸ್ಥಾಪಕ ಶಿವ್ ನಡಾರ್ ಮತ್ತು ಅವರ ಕುಟುಂಬ 2026ರ ಭಾರತದ ದಾನಿಗಳ ಪಟ್ಟಿಯಲ್ಲಿ ಸತತ ಐದನೇ ವರ್ಷ ಅಗ್ರಸ್ಥಾನ ಉಳಿಸಿಕೊಂಡಿದೆ.

ನವದೆಹಲಿ: ಎಚ್​ಸಿಎಲ್ ಸಂಸ್ಥಾಪಕ ಶಿವ್ ನಡಾರ್ ಮತ್ತು ಅವರ ಕುಟುಂಬ 2026ರ ಭಾರತದ ದಾನಿಗಳ ಪಟ್ಟಿಯಲ್ಲಿ ಸತತ ಐದನೇ ವರ್ಷ ಅಗ್ರಸ್ಥಾನ ಉಳಿಸಿಕೊಂಡಿದೆ.

2025-26ರ ಹಣಕಾಸು ವರ್ಷದಲ್ಲಿ ಈ ಕುಟುಂಬ 2,593 ಕೋಟಿ ರೂ. ದಾನ ಮಾಡಿದ್ದು, ದಿನಕ್ಕೆ ಸರಾಸರಿ 7.1 ಕೋಟಿ ರೂ. ಕೊಡುಗೆ ನೀಡಿದೆ. ಹಿಂದಿನ ವರ್ಷ ನೀಡಿದ್ದ 2,708 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ ದಾನ ಶೇ. 4ರಷ್ಟು ಕಡಿಮೆಯಾಗಿದೆ. ಅವರ ಒಟ್ಟು ಕೊಡುಗೆಯಲ್ಲಿ ಶೇ. 93ರಷ್ಟು ವೈಯಕ್ತಿಕ ಸಂಪತ್ತಿನಿಂದ ಬಂದಿದೆ ಎಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿರುವ ಎಡೆಲ್​ಗಿವ್- ಹುರುನ್ ಸಂಸ್ಥೆ ತಿಳಿಸಿದೆ.

ಗೌತಮ್ ಅದಾನಿ ಮತ್ತು ಕುಟುಂಬ 877 ಕೋಟಿ ರೂ. ದಾನ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇವರ ಕೊಡುಗೆ ಶೇ. 127ರಷ್ಟು ಹೆಚ್ಚಳವಾಗಿದೆ. ಬಜಾಜ್ ಕುಟುಂಬ 632 ಕೋಟಿ ರೂ. ದಾನ ಮಾಡುವುದರೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದೆ. ಮುಕೇಶ್ ಅಂಬಾನಿ ಮತ್ತು ಕುಟುಂಬ 620 ಕೋಟಿ ರೂ. ದಾನ ಮಾಡಿ ನಾಲ್ಕನೇ ಸ್ಥಾನದಲ್ಲಿದೆ. ನಂದನ್ ನಿಲೇಕಣಿ 380 ಕೋಟಿ ರೂ. ಕೊಡುಗೆಯೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.

ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ 366 ಕೋಟಿ ರೂ., ಸೈರಸ್ ಹಾಗೂ ಆದರ್ ಪೂನಾವಾಲಾ ಕುಟುಂಬ 336 ಕೋಟಿ ರೂ., ಸುಧೀರ್ ಮತ್ತು ಸಮೀರ್ ಮೆಹ್ತಾ 334 ಕೋಟಿ ರೂ. ದಾನ ಮಾಡಿದ್ದಾರೆ. ರಂಜನ್ ಪೈ ಮತ್ತು ಕುಟುಂಬ 219 ಕೋಟಿ ರೂ. ದಾನದೊಂದಿಗೆ ಟಾಪ್ ಟೆನ್ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ. ರೋಹಿಣಿ ನಿಲೇಕಣಿ 215 ಕೋಟಿ ರೂ. ದಾನ ಮಾಡಿ ದೇಶದ ಅತಿ ಹೆಚ್ಚು ದಾನ ಮಾಡಿದ ಮಹಿಳೆ ಎನಿಸಿಕೊಂಡಿದ್ದಾರೆ. ಇನ್ಪೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ಕುಟುಂಬಸ್ಥರು ಒಟ್ಟಾಗಿ 920 ಕೋಟಿ ರೂ. ದಾನ ಮಾಡಿದ್ದು, ದಿನಕ್ಕೆ 2.5 ಕೋಟಿ ರೂ.ಗೂ ಹೆಚ್ಚು ನೆರವು ನೀಡಿದ್ದಾರೆ.

ಪಟ್ಟಿಯಲ್ಲಿರುವ 219 ದಾನಿಗಳು ಒಟ್ಟಾಗಿ 11,554 ಕೋಟಿ ರೂ. ನೀಡಿದ್ದಾರೆ. ಇದು ಹಿಂದಿನ ವರ್ಷದ 10,380 ಕೋಟಿ ರೂ.ಗಿಂತ ಶೇ. 11ರಷ್ಟು ಅಧಿಕ. ಹೊಸದಾಗಿ ಪಟ್ಟಿಗೆ ಸೇರಿದವರ ಸಂಖ್ಯೆ 12ರಿಂದ 45ಕ್ಕೆ ಏರಿದೆ. ಮಹಿಳಾ ದಾನಿಗಳ ಸಂಖ್ಯೆಯೂ 24ರಿಂದ 29ಕ್ಕೆ ಏರಿಕೆಯಾಗಿದೆ.