ದೇಶ

500 ಕೋಟಿ ಆಡಿಯೋ ಬಾಂಬ್: ಮಹಾರಾಷ್ಟ್ರ ಮಹಾಯುತಿ ಮೈತ್ರಿಯಲ್ಲಿ ದೊಡ್ಡ ಸಂಘರ್ಷ!...ಏನಿದು ಹಗರಣದ ಆರೋಪ..? | Mahayuti Alliance Rift

Mahayuti Alliance Rift: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೇ ಪಾಟೀಲ್ ಅವರು ಬಿಡುಗಡೆ ಮಾಡಿರುವ 500 ಕೋಟಿ ರೂ ಆಡಿಯೋ ಕ್ಲಿಪ್‌ ಇದೀಗ ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

Mahayuti Alliance Rift: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೇ ಪಾಟೀಲ್ ಅವರು ಬಿಡುಗಡೆ ಮಾಡಿರುವ 500 ಕೋಟಿ ರೂ ಆಡಿಯೋ ಕ್ಲಿಪ್‌ ಇದೀಗ ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಸಂಸದ ಶ್ರೀಕಾಂತ್ ಶಿಂಧೆ ಮೂಲಕ ಜರಾಂಗೇ ಪಾಟೀಲ್​ಗೆ 500 ಕೋಟಿ ರೂ ತಲುಪಿಸಲು ಯತ್ನಿಸಿದ್ದರು ಎಂದು ಆಡಿಯೋ ಸಂಭಾಷಣೆಯಲ್ಲಿ ಮಹಿಳೆಯೊಬ್ಬಳು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಆಡಿಯೋ ಕ್ಲಿಪ್ ಬಹಿರಂಗಗೊಳ್ಳುತ್ತಿದ್ದಂತೆ ಜರಾಂಗೇ ಪಾಟೀಲ್ ಅವರು, ತಾವು ಯಾವುದೇ ರೀತಿಯ ಹಣವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಆರೋಪ ಕೇಳಿಬರುತ್ತಿದ್ದಂತೆಯೇ ಶಿಂಧೆ ಬಣ ಇದನ್ನು ತಮ್ಮ ನಾಯಕನ ವಿರುದ್ಧ ನಡೆಯುತ್ತಿರುವ ಸಂಚು ಎಂದು ಕರೆದಿದೆ.

ಶಿವಸೇನೆಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮದಾಸ್ ಕದಮ್ ಅವರು, ಬಿಜೆಪಿಯ ಒಂದು ವಿಭಾಗವು ಶಿಂಧೆ ರಾಜಕೀಯ ಅಸ್ತಿತ್ವವನ್ನೇ ಮುಗಿಸಲು ಹೂಡಿರುವ ಸಂಚು ಇದಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕರಾದ ಪ್ರವೀಣ್ ದಾರೇಕರ್ ಮತ್ತು ಪ್ರಸಾದ್ ಲಾಡ್ ಅವರನ್ನು ಉಲ್ಲೇಖಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ಮಹಾಭಿಯೋಗ: ಇಂಡಿಯಾ ಒಕ್ಕೂಟದಿಂದ ಹೊಸ ಪ್ರತಿಭಟನಾ ಅಸ್ತ್ರ! | Public Impeachment

ಬಿಜೆಪಿ ತಿರುಗೇಟು!

ಶಿವಸೇನೆಯ ಈ ವಾಗ್ದಾಳಿಗೆ ತಕ್ಷಣವೇ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ತಮ್ಮ ಪಕ್ಷದ ಮೇಲೆ ಆರೋಪ ಮಾಡುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ. ಬಿಜೆಪಿ ಶಾಸಕ ಪ್ರಸಾದ್ ಲಾಡ್ ಅವರು, ಜರಾಂಗೇ ಪಾಟೀಲ್ ಅವರಿಗೆ ದೇವೇಂದ್ರ ಫಡ್ನವೀಸ್ ವಿರುದ್ಧ ಹಿಂಬಾಗಿಲ ಬೆಂಬಲ ನೀಡಿದವರು ಯಾರು ಎಂಬುದು ಶೀಘ್ರದಲ್ಲೇ ಹೊರಬರಲಿದೆ ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಯಲ್ಲಿ ಮಾತನಾಡಿ, ನಾನು ಯಾರಿಗೂ 500 ಕೋಟಿ ರೂ ಕೊಟ್ಟೂ ಇಲ್ಲ, ಯಾರಿಂದಲೂ ಪಡೆದೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶ್ರೀಕಾಂತ್ ಶಿಂಧೆ ಕೂಡ ಈ ಆರೋಪವನ್ನು ತಮಾಷೆಯಾಗಿ ತಳ್ಳಿಹಾಕಿದ್ದು, 500 ಕೋಟಿ ರೂ ನಗದು ಸಾಗಿಸಲು ಎಷ್ಟು ವಾಹನಗಳು ಬೇಕಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಈ ಮಧ್ಯೆ, ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಫೋರೆನ್ಸಿಕ್ ತನಿಖೆಗೆ ಆದೇಶಿಸಿದ್ದಾರೆ. ಚುನಾವಣೆ ಮುಗಿದ ವರ್ಷಗಳ ಬಳಿಕ ಈ ಸಂಭಾಷಣೆಗಳು ಏಕಾಏಕಿ ಹೊರಬರುತ್ತಿರುವುದರ ಹಿಂದೆ ಇರುವ ಉದ್ದೇಶವೇನು ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಸದ್ಯಕ್ಕೆ ಉಭಯ ಪಕ್ಷಗಳ ನಾಯಕರ ನಡುವೆ ಸಮಾಧಾನಕರ ಮಾತುಕತೆಗಳು ನಡೆದಿದ್ದು, ಪ್ರಕರಣ ಶಮನಗೊಂಡಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೂ, ಮಹಾಯುತಿ ಮೈತ್ರಿಕೂಟದ ಒಳಗಿನ ಭಿನ್ನಾಭಿಪ್ರಾಯಗಳು ಈ ಘಟನೆಯಿಂದಾಗಿ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ(ಏಜೆನ್ಸೀಸ್​).