Okram Ibobi Singh | ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಓಕ್ರಮ್ ಇಬೋಬಿ ಸಿಂಗ್ 
ದೇಶ

ಮ್ಯಾನ್ಮಾರ್ ನಿರಾಶ್ರಿತರ ಹಾವಳಿ, ಸ್ಥಳೀಯರ ಸಂಕಷ್ಟ: ಅಕ್ರಮ ವಲಸಿಗರ ಪತ್ತೆ ಬಳಿಕವೇ ಗಣತಿ ನಡೆಸಿ ಎಂದ ಇಬೋಬಿ ಸಿಂಗ್! | Okram Ibobi Singh

ಇಂಫಾಲ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಪರಿಣಾಮವಾಗಿ ಉಂಟಾಗಿರುವ ಅಸ್ಥಿರತೆ ಮತ್ತು ಬೃಹತ್ ಪ್ರಮಾಣದ ಜನವಸತಿ ಸ್ಥಳಾಂತರದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆಯಾಗುವವರೆಗೆ ಮುಂಬರುವ ಜನಗಣತಿ ಕಾರ್ಯವನ್ನು ಮುಂದೂಡಬೇಕೆಂದು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಓಕ್ರಮ್ ಇಬೋಬಿ ಸಿಂಗ್ (Okram Ibobi Singh) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಇಂಫಾಲದ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್​, ಪ್ರಸ್ತುತ ಪರಿಸ್ಥಿತಿಯಲ್ಲಿ ಜನಗಣತಿ ನಡೆಸಿದರೆ ದತ್ತಾಂಶದ ನಿಖರತೆ ತಪ್ಪುವ ಸಾಧ್ಯತೆಯಿದ್ದು, ಇದು ಭವಿಷ್ಯದ ಅಭಿವೃದ್ಧಿ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜನಗಣತಿಯು ದೇಶದ ನೀತಿ ನಿರೂಪಣೆಗೆ ಅತ್ಯಂತ ನಿರ್ಣಾಯಕವಾದ ರಾಷ್ಟ್ರೀಯ ವ್ಯಾಯಾಮವಾಗಿದ್ದು, ಇದರಲ್ಲಿ ಕಂಡುಬರುವ ಸಣ್ಣ ತಪ್ಪುಗಳೂ ಸಹ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಇಬೋಬಿ ಸಿಂಗ್ ಎಚ್ಚರಿಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ನಡೆದ 2001ರ ಜನಗಣತಿಯು ದೀರ್ಘಕಾಲದವರೆಗೆ ನೀತಿ ನಿರ್ಧಾರಗಳಿಗೆ ಆಧಾರವಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ದಾಖಲಾದ ಅಸಹಜ ಜನಸಂಖ್ಯೆಯ ಹೆಚ್ಚಳದಿಂದಾಗಿ ಕ್ಷೇತ್ರಗಳ ಮರುಹಂಚಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ರಾಷ್ಟ್ರೀಯ ಸರಾಸರಿ ಜನಸಂಖ್ಯೆಯ ಬೆಳವಣಿಗೆ ಶೇ. 24ರಷ್ಟಿದ್ದರೆ, ಮಣಿಪುರದ ಕೆಲವು ಭಾಗಗಳಲ್ಲಿ ಇದು ಅತಿ ಎನ್ನಿಸುವಷ್ಟು ಏರಿಕೆಯಾಗಿತ್ತು. ಇಂತಹ ವೈಪರೀತ್ಯಗಳ ನಡುವೆ ಜನಗಣತಿ ನಡೆಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 50,000ಕ್ಕೂ ಹೆಚ್ಚು ಜನರು ಸಂಘರ್ಷದ ಕಾರಣದಿಂದಾಗಿ ತಮ್ಮ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಾವಿರಾರು ಕುಟುಂಬಗಳು ಆಂತರಿಕವಾಗಿ ಸ್ಥಳಾಂತರಗೊಂಡಿರುವ ಈ ಹೊತ್ತಿನಲ್ಲಿ ಅಧಿಕಾರಿಗಳು ನಿಖರವಾದ ಜನಗಣತಿ ಮಾಡುವುದು ಅಸಾಧ್ಯದ ಮಾತು. ಜನರು ತಮ್ಮ ಮೂಲ ನೆಲೆಗಳಿಗೆ ಮರಳುವ ಮುನ್ನವೇ ಎಣಿಕೆ ಪ್ರಕ್ರಿಯೆ ಆರಂಭಿಸಿದರೆ ನೈಜ ಅಂಕಿಅಂಶಗಳು ಲಭ್ಯವಾಗುವುದಿಲ್ಲ ಎಂದಿದ್ದಾರೆ. ನೆರೆಯ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ಮಣಿಪುರಕ್ಕೆ ಆಗಮಿಸಿರುವ ನಿರಾಶ್ರಿತರ ಸಮಸ್ಯೆ ಕೂಡ ಜನಗಣತಿಯನ್ನು ಸಂಕೀರ್ಣಗೊಳಿಸಲಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಿದ ಬಳಿಕ ಮತ್ತು ಸ್ಥಳಾಂತರಗೊಂಡ ನಿವಾಸಿಗಳ ಪುನರ್ವಸತಿಯ ನಂತರವೇ ಈ ಪ್ರಕ್ರಿಯೆ ನಡೆಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಇಬೋಬಿ ಸಿಂಗ್, ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಯಾವುದೇ ಕಾರ್ಯವಿಧಾನಕ್ಕೆ ಕಾಂಗ್ರೆಸ್ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಈ ವಿಷಯದಲ್ಲಿ ಬಿಜೆಪಿ ಸರ್ಕಾರವು ಸ್ಪಷ್ಟ ನಿಲುವು ಹೊಂದಿಲ್ಲ ಮತ್ತು ಜನರಿಗೆ ತಪ್ಪು ಸಂದೇಶಗಳನ್ನು ರವಾನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ಪ್ರಮುಖ ವಿಷಯಗಳ ಬಗ್ಗೆ ರಾಜಕೀಯ ಒಮ್ಮತ ಮೂಡಿಸುವುದು ಅಗತ್ಯವಾಗಿದ್ದು, ಕೇಂದ್ರದೊಂದಿಗೆ ಮಾತುಕತೆ ನಡೆಸಲು ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಕಾಂಗ್ರೆಸ್ ಸದಾ ಸಿದ್ಧವಿದೆ, ಅಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮುಕ್ತ ಸಂಚಾರ ಇರಬೇಕು ಎಂದು ಪ್ರತಿಪಾದಿಸುವ ಮೂಲಕ ಶಾಂತಿ ಮರುಸ್ಥಾಪನೆಯ ಅಗತ್ಯವನ್ನು ಸಿಂಗ್​ ಒತ್ತಿ ಹೇಳಿದ್ದಾರೆ(ಏಜೆನ್ಸೀಸ್​).