- ಕ್ಯಾನ್ಸರ್‌ನಿಂದ ಮೃತಪಟ್ಟ ಹಿಂದೂ ವ್ಯಕ್ತಿಗೆ ಮುಸ್ಲಿಂ ಮಹಿಳೆ ನೆರವೇರಿಸಿದ ಅಂತ್ಯಕ್ರಿಯೆ
- ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆಯ ಅಂತಿಮ ಗೌರವ
- ಸಂಬಂಧಿಕರು ದೂರವಾದಾಗ ಆಸರೆಯಾದ ಮುಸ್ಲಿಂ ಮಹಿಳೆ
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾನವೀಯತೆ ಮತ್ತು ಧಾರ್ಮಿಕ ಸೌಹಾರ್ದದ ಅಪರೂಪದ ಘಟನೆ ನಡೆದಿದೆ. ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಆರ್‌ಎಸ್‌ಎಸ್(RSS) ಕಾರ್ಯಕರ್ತ ನಾರಾಯಣ ತೊಟ್ಟತ್ತೋಡಿ (64) ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ನೆರವೇರಿಸಿದ್ದು, ಈ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ಯಾನ್ಸರ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣ ಅವರು ಗುರುವಾರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶುಕ್ರವಾರ ಅವರ ಸ್ವಗ್ರಾಮವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬ್ಲಾಕ್‌ನ ಮೀಂಜ ಪಂಚಾಯಿತಿಯ ಚಿಗ್ರುಪಾಡವು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾರಾಯಣ
ಸುಮಾರು ಒಂದು ತಿಂಗಳ ಹಿಂದೆ ಚಿಗ್ರುಪಾಡವು ಗ್ರಾಮದ ಅಂಗಡಿಯೊಂದರ ಬಳಿ ನಾರಾಯಣ ಅವರು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ ಬಾಯಿಯ ಕ್ಯಾನ್ಸರ್ ಕೊನೆಯ ಹಂತದಲ್ಲಿತ್ತು. ಕುಟುಂಬದ ಸಮಸ್ಯೆಗಳಿಂದ ಅವರು ನಿರಾಶ್ರಿತರಾಗಿದ್ದರು. ವಯೋವೃದ್ಧ ಸಹೋದರಿಗೆ ಅವರನ್ನು ನೋಡಿಕೊಳ್ಳುವ ಸ್ಥಿತಿಯೂ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾರಾಯಣ ಅವರು ದಿನಗೂಲಿ ಕಾರ್ಮಿಕರಾಗಿದ್ದು, ಸುಮಾರು 20 ವರ್ಷಗಳ ಹಿಂದೆ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಎರಡು ಮದುವೆಯಾಗಿದ್ದ ಅವರಿಗೆ ಮೊದಲ ಪತ್ನಿಯಿಂದ ಮಕ್ಕಳು ಇದ್ದರೂ, ಅವರು ನಾರಾಯಣ ಅವರಿಂದ ದೂರವಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಆಸರೆ ನೀಡಿದ ಇರ್ಫಾನಾ
ಈ ವಿಷಯ ತಿಳಿದ ವಾರ್ಡ್ ಸದಸ್ಯ ಶೆರೀಫ್ ಚಿನಾಲಾ ಅವರು ಮಂಜೇಶ್ವರ ವಿಭಾಗದ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಅವರನ್ನು ಸಂಪರ್ಕಿಸಿದರು. ಇರ್ಫಾನಾ ಅವರ ಕುಟುಂಬ ನಡೆಸುತ್ತಿರುವ ಶೇಖ್ ಜಾಯೆದ್ ಫೌಂಡೇಶನ್‌ನ ವೃದ್ಧಾಶ್ರಮಕ್ಕೆ ನಾರಾಯಣ ಅವರನ್ನು ದಾಖಲಿಸುವ ಯೋಚನೆ ಇತ್ತು. ಆದರೆ ಅಷ್ಟರಲ್ಲಾಗಲೇ ಅವರ ಆರೋಗ್ಯ ತುಂಬಾ ಗಂಭೀರವಾಗಿತ್ತು ಎಂದು ಇರ್ಫಾನಾ ತಿಳಿಸಿದ್ದಾರೆ. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಮಾನವೀಯತೆಯ ಸಂದೇಶ
ನಾರಾಯಣ ಅವರ ಸಾವಿನ ಬಳಿಕ ಇರ್ಫಾನಾ ಇಕ್ಬಾಲ್ ಅವರೇ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬದವರು ಹಾಗೂ ಸಂಬಂಧಿಕರ ಸಹಕಾರ ಸಿಗದ ಸಂದರ್ಭದಲ್ಲಿ ಅವರು ಮುಂದೆ ಬಂದಿದ್ದು, ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಘಟನೆ ಕೇರಳದಲ್ಲಿ ಧಾರ್ಮಿಕ ಸೌಹಾರ್ದ ಹಾಗೂ ಮಾನವೀಯತೆಗೆ ಮತ್ತೊಂದು ಉದಾಹರಣೆಯಾಗಿದೆ,(ಏಜೆನ್ಸೀಸ್).