ಮೈ ಉರಿ ತಾಳಲಾರದೆ ನೀರಿನ ಹೊಂಡವನ್ನೇ ಮನೆ ಮಾಡಿಕೊಂಡಿದ್ದ ಬಾಲಕನಿಗೆ ಕೊನೆಗೂ ಸಿಕ್ತು ನೋವಿನಿಂದ ಮುಕ್ತಿ! Murshidabad Teen
- ಮೈ ಉರಿ ತಾಳಲಾರದೆ ದಿನವಿಡೀ ನೀರಿನಲ್ಲೇ ಕಾಲ ಕಳೆಯುತ್ತಿದ್ದ ಮುರ್ಷಿದಾಬಾದ್ ಬಾಲಕ
- ಘಾಜಿಯಾಬಾದ್ ವೈದ್ಯ ಡಾ. ಬ್ರಜ್‌ಪಾಲ್ ತ್ಯಾಗಿ ಬಾಲಕನಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ
- ರಿಲಯನ್ಸ್ ಜಿಯೋ ತಂಡವು ಆಂಬುಲೆನ್ಸ್ ಮೂಲಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ದಿದೆ ಎಂದ ಸ್ಥಳೀಯರು
- ಕಳೆದ ಮೂರು ದಿನಗಳಿಂದ ಬಾಲಕನ ಆರೋಗ್ಯದ ಮಾಹಿತಿ ಲಭ್ಯವಿಲ್ಲದ ಕಾರಣ ವೈದ್ಯ ಡಾ. ತ್ಯಾಗಿ ಕಳವಳ
ಕೋಲ್ಕತ: ಮೈ ಉರಿಯನ್ನು ತಡೆಯಲಾರದೆ ಬಾಲಕನೊಬ್ಬ ( Murshidabad Teen ) ದಿನವಿಡೀ ಹೊಂಡದಲ್ಲೇ ಕುಳಿತು ಕಾಲ ಕಳೆದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೀರಿನಿಂದ ಆಚೆ ಬಂದರೆ ಉರಿ ಸಹಿಸಲಾಗದು ಅಂತ ಆ ಬಾಲಕ ಯಾವಾಗಲೂ ನೀರಿನಲ್ಲೇ ಇರುತ್ತಿದ್ದ. ಊಟ ತಿಂಡಿಯನ್ನೂ ಅಲ್ಲಿಯೇ ಮಾಡುತ್ತಿದ್ದ. ಇದೀಗ ಆ ಬಾಲಕನ ಆರೋಗ್ಯದ ಬಗ್ಗೆ ಘಾಜಿಯಾಬಾದ್ ಮೂಲದ ವೈದ್ಯರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಆತನಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾ ನಿವಾಸಿಯಾದ ಇಕ್ಬಾಲ್ (16), ದಿನಗಟ್ಟಲೆ ನೀರಿನ ಹೊಂಡದಲ್ಲೇ ಕಾಲಳೆಯುತ್ತಿದ್ದ. ಬಾಲಕನ ವಿಚಿತ್ರ ಮತ್ತು ಅಸಾಮಾನ್ಯ ವರ್ತನೆಯು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಆತ ನೀರಿನಿಂದ ಹೊರಬಂದಾಗಲೆಲ್ಲ ಮೈಯೆಲ್ಲಾ ಉರಿಯುತ್ತದೆ ಎಂದು ದೂರುತ್ತಿದ್ದ. ಇದಿಷ್ಟೇ ಅಲ್ಲದೆ, ನನ್ನನ್ನು ಅತಿಮಾನುಷ ಶಕ್ತಿಯೊಂದು ನಿಯಂತ್ರಿಸುತ್ತಿದೆ ಎಂದು ನಂಬಿದ್ದ. ಬಡತನದ ಕಾರಣದಿಂದಾಗಿ ಕುಟುಂಬವು ಆತನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿತ್ತು. ಇತ್ತ ಸ್ಥಳೀಯರೇ ಆ ಬಾಲಕನಿಗೆ ಊಟ ತಂದುಕೊಡುತ್ತಿದ್ದರು. ಅದನ್ನೂ ನೀರಿನಲ್ಲಿದ್ದುಕೊಂಡೇ ಸವಿಯುತ್ತಿದ್ದ.
ಈ ವಿಚಿತ್ರ ಪ್ರಕರಣದ ಬಗ್ಗೆ ತಿಳಿದು ತೀವ್ರ ಕಳವಳ ವ್ಯಕ್ತಪಡಿಸಿರುವ ಘಾಜಿಯಾಬಾದ್‌ನ ವೈದ್ಯರಾದ ಡಾ. ಬ್ರಜ್‌ಪಾಲ್ ತ್ಯಾಗಿ ಅವರು, ಬಾಲಕನಿಗೆ ತಾವೇ ಸ್ವಯಂಪ್ರೇರಿತರಾಗಿ ಉಚಿತ ಚಿಕಿತ್ಸೆ ನೀಡುವುದಾಗಿ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಘೋಷಿಸಿದ್ದಾರೆ. ಬಾಲಕನಿಗೆ ಚಿಕಿತ್ಸೆ ನೀಡಲು ಅವಕಾಶ ಕೋರಿ ಅವರು ಪಶ್ಚಿಮ ಬಂಗಾಳ ಸರ್ಕಾರಕ್ಕೂ ಮನವಿ ಮಾಡಿದ್ದು, ಸರ್ಕಾರದ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಬಾಲಕನ ಕುಟುಂಬದವರು ಮತ್ತು ಅಕ್ಕಪಕ್ಕದವರೂ ಕೂಡ ತಾವೇ ಬಂದು ಚಿಕಿತ್ಸೆ ನೀಡಬೇಕೆಂದು ಬಯಸಿದ್ದರು ಎಂದು ತ್ಯಾಗಿ ಹೇಳಿದ್ದಾರೆ.
ಆದರೆ, ಡಾ. ತ್ಯಾಗಿ ಅವರು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ, ರಿಲಯನ್ಸ್ ಜಿಯೋ (Jio) ತಂಡವು ಆಂಬುಲೆನ್ಸ್ ಅಥವಾ ಏರ್ ಆಂಬುಲೆನ್ಸ್ ಮೂಲಕ ಇಕ್ಬಾಲ್‌ನನ್ನು ಕರೆದೊಯ್ದಿದೆ ಎಂದು ಸ್ಥಳೀಯರು ನನಗೆ ಮಾಹಿತಿ ನೀಡಿದರು. ಆ ಬಾಲಕನನ್ನು ಮುಂಬೈನಲ್ಲಿರುವ ರಿಲಯನ್ಸ್ ಆಸ್ಪತ್ರೆಗೆ ಕರೆದೊಯ್ದಿರಬಹುದೆಂದು ಅನುಮಾನ ವ್ಯಕ್ತಪಡಿಸಿರುವ ತ್ಯಾಗಿ, ಬಾಲಕನ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ರೋಗನಿರ್ಣಯದ ಬಗ್ಗೆ ತಿಳಿದುಕೊಳ್ಳುವುದೇ ಈಗ ತಮ್ಮ ಮುಖ್ಯ ಕಾಳಜಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರಾದರೂ ಮುಂದೆಬಂದು ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವುದು ಒಳ್ಳೆಯದೇ ಎಂದಿರುವ ಡಾ. ತ್ಯಾಗಿ, ಬಾಲಕ ಇಷ್ಟು ದೀರ್ಘಕಾಲ ನೀರಿನಲ್ಲೇ ಇರಲು ನಿಜವಾದ ಕಾರಣವೇನು ಹಾಗೂ ಆತನಿಗೆ ಯಾವ ರೋಗವಿದೆ ಎಂಬುದರ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ. ತಮ್ಮ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ತನಿಖಾ ವರದಿ ಹಾಗೂ ರೋಗನಿರ್ಣಯವಿದ್ದು, ಅಗತ್ಯವಿದ್ದರೆ ತಾವೂ ಕೂಡ ಚಿಕಿತ್ಸೆ ನೀಡಲು ಸಿದ್ಧವಿರುವುದಾಗಿ ತ್ಯಾಗಿ ಅವರು ಪುನರುಚ್ಚರಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬಾಲಕನ ಯಾವುದೇ ಆರೋಗ್ಯ ಮಾಹಿತಿಯೂ ಲಭ್ಯವಿಲ್ಲದ ಕಾರಣ ತಮಗೂ, ತಮ್ಮ ಮಗ ಹರ್ಷ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ತೀವ್ರ ಕಳವಳ ಉಂಟಾಗಿದೆ ಎಂದು ಡಾ. ತ್ಯಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಆರೋಗ್ಯ ಸಚಿವರು ಅಥವಾ ಜಿಯೋ ತಂಡದ ಸದಸ್ಯರು ಇಕ್ಬಾಲ್‌ನ ಆರೋಗ್ಯ ಸ್ಥಿತಿ, ರೋಗನಿರ್ಣಯ ಹಾಗೂ ಚಿಕಿತ್ಸೆಯ ವಿವರಗಳ ಬಗ್ಗೆ ವಿಡಿಯೋ ಅಥವಾ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಇಕ್ಬಾಲ್‌ನ ಈ ಸ್ಥಿತಿಯ ಬಗ್ಗೆ ವೈದ್ಯರು ಗಂಭೀರ ಎಚ್ಚರಿಕೆಗಳನ್ನು ನೀಡಿದ್ದು, ದೀರ್ಘಕಾಲ ನೀರಿನಲ್ಲಿಯೇ ಇರುವುದರಿಂದ ಚರ್ಮವು ಮೆದುವಾಗಿ ಗಾಯಗೊಳ್ಳುವುದು, ಕಿರಿಕಿರಿ ಉಂಟಾಗುವುದು ಮತ್ತು ಸೋಂಕು ತಗುಲುವ ಅಪಾಯವಿರುತ್ತದೆ ಎಂದು ತಿಳಿಸಿದ್ದಾರೆ. ಬಾಲಕನು ಅನುಭವಿಸುತ್ತಿರುವ ಉರಿಯುವಿಕೆಯ ಸಂವೇದನೆಗೆ ಸೂಕ್ತ ವೈದ್ಯಕೀಯ ತಪಾಸಣೆ ಅಗತ್ಯವಿದ್ದು, ಇಂತಹ ಅಸಾಮಾನ್ಯ ನಂಬಿಕೆಗಳ ಹಿಂದೆ ಮಾನಸಿಕ ಆರೋಗ್ಯದ ಸಮಸ್ಯೆಗಳೂ ಇರಬಹುದಾದ್ದರಿಂದ ಮನೋವೈದ್ಯಕೀಯ ಮೌಲ್ಯಮಾಪನವೂ ಅತ್ಯಗತ್ಯ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್).