Murder 
ದೇಶ

ರಜೆ ಕೊಡದಿದ್ದಕ್ಕೆ ಮರ್ಡರ್: ಬ್ಯಾಂಕ್ ಮ್ಯಾನೇಜರ್ ಕೊಲೆ ಮಾಡಿ ಗನ್ ಹಿಡಿದು ಎಸ್ಕೇಪ್ ಆದ ಗಾರ್ಡ್! | Murder

ಗಾಜಿಯಾಬಾದ್: ದೆಹಲಿಗೆ ಹೊಂದಿಕೊಂಡಿರುವ ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಭೀಕರ ರಕ್ತಪಾತ (Murder) ನಡೆದಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನ ಮ್ಯಾನೇಜರ್ ಅಭಿಷೇಕ್ (36) ಅವರನ್ನು ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಲೋನಿಯ ಬಲರಾಮ್ ನಗರದಲ್ಲಿರುವ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ಸೋಮವಾರ ಮಧ್ಯಾಹ್ನ 1:45ರ ಸುಮಾರಿಗೆ ಘಟನೆ ಸಂಭವಿಸಿದೆ. ಮ್ಯಾನೇಜರ್ ಅಭಿಷೇಕ್ ತಮ್ಮ ಕೊಠಡಿಯಲ್ಲಿದ್ದಾಗ, ಭದ್ರತಾ ಕಾವಲುಗಾರ ರವೀಂದ್ರ ಹೂಡಾ ಒಳಗೂ ನುಗ್ಗಿ ತನ್ನ ಪರವಾನಗಿ ಪಡೆದ ಬಂದೂಕಿನಿಂದ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಭಯಭೀತರಾಗಿ ಓಡತೊಡಗಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮ್ಯಾನೇಜರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹತ್ಯೆಯ ನಂತರದ ದೃಶ್ಯಗಳು ಬ್ಯಾಂಕಿನ ಹೊರಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮ್ಯಾನೇಜರ್ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿ ರವೀಂದ್ರ ತನ್ನ ಕೈಯಲ್ಲಿ ಬಂದೂಕು ಹಿಡಿದು ಅತ್ಯಂತ ಶಾಂತವಾಗಿ ಬ್ಯಾಂಕಿನಿಂದ ಹೊರಬಂದಿದ್ದಾನೆ. ತನ್ನ ಸಹೋದ್ಯೋಗಿಯೊಬ್ಬನ ಜೊತೆ ಕಾಲ್ನಡಿಗೆಯಲ್ಲೇ ಅಲ್ಲಿಂದ ಪರಾರಿಯಾಗಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಆತ ಹೊರಬಂದ ಕೆಲವೇ ಸೆಕೆಂಡುಗಳಲ್ಲಿ ಬ್ಯಾಂಕ್ ಸಿಬ್ಬಂದಿ ಗಾಯಾಳು ಮ್ಯಾನೇಜರ್ ಅನ್ನು ಹೊರತಂದಿದ್ದಾರೆ.

ಹತ್ಯೆಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ರಜೆ ಪಡೆಯುವ ವಿಚಾರದಲ್ಲಿ ಮ್ಯಾನೇಜರ್ ಮತ್ತು ಗಾರ್ಡ್ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ರವೀಂದ್ರ ಹೂಡಾ ರಜೆ ಕೇಳುತ್ತಿದ್ದರೂ ಮ್ಯಾನೇಜರ್ ನಿರಾಕರಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗಾರ್ಡ್, ಈ ಘೋರ ಅಪರಾಧ ಎಸಗಿದ್ದಾನೆ ಎಂದು ಎಸಿಪಿ ಜ್ಞಾನ ಪ್ರಕಾಶ್ ರೈ ತಿಳಿಸಿದ್ದಾರೆ.ಬಾಗ್‌ಪತ್ ನಿವಾಸಿಯಾಗಿರುವ ಆರೋಪಿ ರವೀಂದ್ರನನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೇ ಆತನನ್ನು ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).