ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖಸ್ಥ ರಾಜ್ ಠಾಕ್ರೆ(Raj Thackeray)
ಮುಂಬೈ: ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಜಾಗರೂಕತೆ ವಹಿಸುವಂತೆ ಮಾರಾಠಿಗರಿಗೆ ಕರೆ ನೀಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖಸ್ಥ ರಾಜ್ ಠಾಕ್ರೆ(Raj Thackeray), ಇದು ಮರಾಠಿ ಸಮುದಾಯಕ್ಕೆ ನಿರ್ಣಾಯಕ ಚುನಾವಣೆ, ಮುಂಬೈ ನಮ್ಮ ಕೈ ತಪ್ಪಿದ್ರೆ, ಅವರು ವಿನಾಶ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಡೆದ ಎಂಎನ್‌ಎಸ್‌ನ ಕೊಂಕಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಬಿಎಂಸಿ ಚುನಾವಣೆಗೆ ಮುಂಚಿತವಾಗಿ ಎಚ್ಚರಿಕೆಯನ್ನು ವಹಿಸುವಂತೆ ಕಾರ್ಯಕರ್ತರು ಮತ್ತು ಮತದಾರರನ್ನು ಒತ್ತಾಯಿಸಿದರು.
ಮರಾಠಿ ಜನರಿಗೆ, ಈ ಬಿಎಂಸಿ ಚುನಾವಣೆ ಕೊನೆಯ ನಿರ್ಣಾಯಕ ಚುನಾವಣೆಯಾಗಲಿದೆ. ನಾವು ನಿರ್ಲಕ್ಷ್ಯ ವಹಿಸಿದರೆ, ಅದು ನಮ್ಮ ಕೈಯಿಂದ ಹೋಗಿದೆ ಎಂದು ಪರಿಗಣಿಸಿ. ಮುಂಬೈ ನಮ್ಮ ಕೈಯಿಂದ ಜಾರಿದರೆ, ಈ ಜನರು ವಿನಾಶವನ್ನು ಸೃಷ್ಟಿಸುತ್ತಾರೆ ಎಂದು ಠಾಕ್ರೆಸ ಹೇಳಿದ್ದಾರೆ.
ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮತದಾರರು ನಿಜವಾದವರೇ ಅಥವಾ ನಕಲಿಯೇ ಎಂಬುದರ ಬಗ್ಗೆ ನೀವು ಗಮನ ಹರಿಸುವುದು ಮುಖ್ಯ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಬೇಷರತ್ತಾದ ಬೆಂಬಲವನ್ನು ನೀಡಿದ ತಿಂಗಳುಗಳ ನಂತರ ಠಾಕ್ರೆ ಅವರು ಹೊಸ ರಾಜಕೀಯ ಹಾದಿಯನ್ನು ಹಿಡಿದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಜೊತೆ ಕೈ ಜೋಡಿಸಿದ್ದು, ಮರಾಠಿ ಅಸ್ಮಿತೆ ಬಗ್ಗೆ ಮತ್ತೆ ಹಿಂದಿಗಿಂತಲೂ ಹೆಚ್ಚು ಪ್ರತಿಪಾದಿಸುತ್ತಿದ್ದಾರೆ (ಏಜೆನ್ಸೀಸ್).