ಇಲ್ಲಿ ದೇವರಿಗೆ ನೈವೇದ್ಯ ಇಡೋದೇ ಮಕ್ಕಳು ತಿನ್ನುವ ಚಾಕೋಲೆಟ್​! ಈ ದೇಗುಲದ ವಿಶೇಷತೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ  
ದೇಶ

ಇಲ್ಲಿ ದೇವರಿಗೆ ನೈವೇದ್ಯ ಇಡೋದೇ ಮಕ್ಕಳು ತಿನ್ನುವ ಚಾಕೋಲೆಟ್​! ಈ ದೇಗುಲದ ವಿಶೇಷತೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಕೇರಳ: ದೇವಸ್ಥಾನಕ್ಕೆ ಹೋದರೆ ಸಾಮಾನ್ಯವಾಗಿ ಲಡ್ಡು, ಪಂಚಾಮೃತ, ಹಣ್ಣು ಅಥವಾ ಕಡಲೆಕಾಳು, ತೆಂಗಿನಕಾಯಿ ಮಿಶ್ರಣವನ್ನು ಪ್ರಸಾದವನ್ನಾಗಿ ಕೊಡುವುದು ತೀರ ಸಹಜ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಇಡೋದೇ ಮಕ್ಕಳು ಬಹಳ ಆಸೆಪಟ್ಟು ತಿನ್ನುವ ಸಿಹಿಯಾದ ಚಾಕೊಲೇಟ್​ ಅಂದ್ರೆ ನಂಬ್ತೀರಾ? ಹೇ, ಇಲ್ಲಪ್ಪ ಎಂದರೂ ನಂಬಲೇಬೇಕಾದ ದಿಟ ಸುದ್ದಿಯಿದು.

ಕೇರಳದ ಆಲಪ್ಪುಳದಲ್ಲಿರುವ ತಲವಾಡಿ ಬಾಲಮುರುಗನ್ ದೇವಸ್ಥಾನದಲ್ಲಿ ಇಂತಹ ವಿಶಿಷ್ಟ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇಳಲು ವಿಚಿತ್ರ, ಆಶ್ಚರ್ಯಕರ ಅನಿಸುವುದು ಖಂಡಿತ. ಆದರೆ, ಇಲ್ಲಿನ ಭಕ್ತರು ದೇವರಿಗೆ ಮಂಚ್ ಚಾಕೋಲೆಟ್​ಗಳನ್ನು ಅರ್ಪಿಸುವುದು ವಿಶೇಷತೆ. ಪೂಜೆ ನೆರವೇರಿಸಿದ ಬಳಿಕ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ವಿಶೇಷ ಸಂಪ್ರದಾಯದಿಂದಲೇ ದೇವಸ್ಥಾನಕ್ಕೆ ‘ಮಂಚ್ ಮುರುಗನ್ ದೇವಸ್ಥಾನ’ ಎಂಬ ಜನಪ್ರಿಯತೆಯೂ ಸಿಕ್ಕಿದೆ.

ದೇವರಿಗೆ ಪ್ರಿಯ ಮಂಚ್!

ಆಲಪ್ಪುಳದ ತಲವಾಡಿಯಲ್ಲಿರುವ ಬಾಲಮುರುಗನ್ ದೇವಸ್ಥಾನವು ಮುರುಗನ ಬಾಲರೂಪಕ್ಕೆ ಸಮರ್ಪಿತ ಎನ್ನಲಾಗಿದೆ. ದಕ್ಷಿಣದ ಪಳನಿ ಎಂದೂ ಕರೆಯಲ್ಪಡುವ ಈ ದೇವಸ್ಥಾನದಲ್ಲಿ ಮಂಚ್ ಚಾಕೊಲೇಟ್ ಅರ್ಪಿಸುವುದು ವಿಶೇಷ ಸಂಪ್ರದಾಯವಾಗಿದೆ. ಭಕ್ತರು ಪೂಜೆ ಮತ್ತು ಪ್ರಾರ್ಥನೆಯ ಸಂದರ್ಭದಲ್ಲಿ ಮಂಚ್ ಅನ್ನು ದೇವರಿಗೆ ಅರ್ಪಿಸುತ್ತಾರೆ. ಬಳಿಕ ಅದನ್ನೇ ಪ್ರಸಾದವಾಗಿ ದೇಗುಲಕ್ಕೆ ಬಂದಿರುವ ಇತರೆ ಭಕ್ತರಿಗೆ ಹಂಚುತ್ತಾರೆ.

ಮಕ್ಕಳಿಂದ ಆರಂಭ ಈ ವಿಶಿಷ್ಟ ಸಂಪ್ರದಾಯ

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುವ ಈ ಚಾಕೊಲೇಟ್ ಈಗ ದೇವಸ್ಥಾನದ ವಿಶೇಷ ಗುರುತಾಗಿಯೇ ಬೆಳೆದಿದೆ. ಮಂಚ್ ಅರ್ಪಿಸಿದರೆ ತಮ್ಮ ಆಸೆಗಳು ಈಡೇರುತ್ತವೆ ಎಂಬ ನಂಬಿಕೆಯೊಂದಿಗೆ ಭಕ್ತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂಪ್ರದಾಯ ಆರಂಭವಾದ ಬಗ್ಗೆ ಹಲವು ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ, ಹಿಂದೆ ದೇವಸ್ಥಾನಕ್ಕೆ ಬಂದಿದ್ದ ಬಾಲಕನೊಬ್ಬ ತನ್ನ ಕೈಯಲ್ಲಿದ್ದ ಮಂಚ್ ಚಾಕೊಲೇಟ್ ಅನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಮನೆಗೆ ಮರಳಿದ್ದನಂತೆ. ಸ್ವಲ್ಪ ಸಮಯದ ಬಳಿಕ ಅದನ್ನು ಮರಳಿ ಪಡೆಯಲು ಬಂದಾಗ ಅಲ್ಲಿ ಚಾಕೊಲೇಟ್ ಇರಲಿಲ್ಲ ಎಂಬ ಕಥೆ ಜನರಲ್ಲಿ ಹರಡಿತು.

ಇದಾದ ಬಳಿಕ ಈ ಘಟನೆ ದೇವಸ್ಥಾನದೊಂದಿಗೆ ಮಂಚ್ ಚಾಕೊಲೇಟ್‌ನ ವಿಶೇಷ ಸಂಬಂಧಕ್ಕೆ ಕಾರಣವಾಯಿತು ಎಂಬ ಮಾತಿದೆ. ಇನ್ನೊಂದು ನಂಬಿಕೆಯ ಪ್ರಕಾರ, ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತು ತಮ್ಮ ಆಸೆಗಳು ಈಡೇರಲು ಬಾಲಮುರುಗನಿಗೆ ಮಂಚ್ ಅರ್ಪಿಸಲು ಆರಂಭಿಸಿದರು. ದೇವರಿಗೆ ಮಕ್ಕಳು ಇಷ್ಟಪಡುವ ಚಾಕೊಲೇಟ್ ಕೂಡ ಪ್ರಿಯ ಎಂಬ ಭಾವನೆಯಿಂದ ಈ ಆಚರಣೆಯು ಜನಪ್ರಿಯವಾಯಿತು. ಆರಂಭದಲ್ಲಿ ಮಕ್ಕಳು ಮಾತ್ರ ಪಾಲ್ಗೊಳ್ಳುತ್ತಿದ್ದ ಈ ಸಂಪ್ರದಾಯಕ್ಕೆ ಕಾಲಕ್ರಮೇಣ ದೊಡ್ಡವರೂ ಸೇರಿಕೊಂಡಿರುವುದು ವಿಶೇಷ.

ಒಂದು ಮಂಚ್‌ನಿಂದ ದೊಡ್ಡ ಬಾಕ್ಸ್‌ವರೆಗೆ!

ಈ ದೇವಸ್ಥಾನಕ್ಕೆ ಬರುವ ಭಕ್ತರು ಒಂದೆರಡು ಮಂಚ್ ಚಾಕೊಲೇಟ್‌ಗಳಿಂದ ಹಿಡಿದು ದೊಡ್ಡ ಬಾಕ್ಸ್‌ಗಳಲ್ಲಿಯೂ ಚಾಕೊಲೇಟ್ ತಂದು ಅರ್ಪಿಸುತ್ತಾರೆ. ದೇವಸ್ಥಾನದ ಉತ್ಸವಗಳ ಸಂದರ್ಭದಲ್ಲಿಯೂ ಮಂಚ್ ಅನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಹೀಗೆ ಚಾಕೊಲೇಟ್ ಅರ್ಪಿಸುವ ಸಂಪ್ರದಾಯ ದೇವಸ್ಥಾನದ ವಿಶಿಷ್ಟ ಗುರುತಾಗಿ ರೂಪುಗೊಂಡಿದೆ,(ಏಜೆನ್ಸೀಸ್).