- ಮಹಿಳಾ ಮೀಸಲಾತಿ ಪ್ರತಿಭಟನೆ ವೇಳೆ ಸಚಿವರನ್ನೇ ತರಾಟೆಗೆ ತೆಗೆದುಕೊಂಡಿದ್ದ ಮಹಿಳೆ
- ಟ್ರಾಫಿಕ್‌ನಲ್ಲಿ ಒಂದೂವರೆ ಗಂಟೆ ಸಿಲುಕಿದ್ದರಿಂದ ಸಿಟ್ಟಾಗಿ ಈ ರೀತಿ ವರ್ತಿಸಿದ್ದೆ ಎಂದ ವರ್ಲಿ ನಿವಾಸಿ ಟೀನಾ ಚೌಧರಿ.
- ತನ್ನ ಹಕ್ಕಿಗಾಗಿ ಧ್ವನಿ ಎತ್ತಲು ರಾಜಕೀಯ ಪ್ರೇರಣೆಯ ಅಗತ್ಯವಿಲ್ಲ ಎಂದು ವಿಡಿಯೋ ಬಿಡುಗಡೆ
ಮುಂಬೈ: 'ಮಗಳನ್ನು ಮ್ಯೂಸಿಕ್ ಕ್ಲಾಸ್ಗೆ ಬಿಡಬೇಕಾಗಿತ್ತು. ಸತತ 25 ನಿಮಿಷ ಕಾದ ನಂತರ ಕೆಳಗಿಳಿದು ಸುತ್ತಮುತ್ತಲಿನ ಜನರನ್ನು ಈ ಬಗ್ಗೆ ವಿಚಾರಿಸಿದೆ. ನಿಂತಿದ್ದ ಎರಡು ಬಸ್ ತೆರೆವುಗೊಳಿಸಲು ಕೇಳಿಕೊಂಡೆ. ಆದರೆ, ಅವರು ಕ್ಯಾರೆ ಎನ್ನಲಿಲ್ಲ. ಹೀಗಾಗಿ, ಸಿಟ್ಟು ಬಂದು ಅಂದು ಹಾಗೆ ನಡೆದುಕೊಂಡೆ.' ಮಹಿಳಾ ಮೀಸಲಾತಿ ಪ್ರತಿಭಟನೆ ವೇಳೆ ಉಂಟಾಗಿದ್ದ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ, ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ನೇರವಾಗಿಯೇ ಪ್ರಶ್ನಿಸಿ ಸುದ್ದಿಯಾಗಿದ್ದ ಮಹಿಳೆ ಹೇಳಿದ್ದು ಹೀಗೆ.
ಮುಂಬೈನಲ್ಲಿ ಮೀಸಲಾತಿ ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾಗಿದ್ದ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ, ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ನೇರವಾಗಿಯೇ ಪ್ರಶ್ನಿಸಿ ವೈರಲ್ ಆಗಿದ್ದ ವರ್ಲಿ ನಿವಾಸಿಯಾಗಿರುವ ಟೀನಾ ಚೌಧರಿ ಶನಿವಾರ ಮೌನ ಮುರಿದಿದ್ದಾರೆ. ಆದಿನ ಹಾಗೆ ನಡೆದುಕೊಂಡಿದ್ಯಾಕೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಏಪ್ರಿಲ್ 21 ರಂದು ಮುಂಬೈನಲ್ಲಿ ನಡೆದಿದ್ದ ಪ್ರತಿಭಟನೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು . ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಸಿಟ್ಟಾಗಿ ಆ ರೀತಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ನಂತರ ಅವರ ವಿರುದ್ಧ ಸಾಕಷ್ಟು ಆರೋಪ ಮತ್ತು ಟೀಕೆಗಳು ಕೇಳಿ ಬಂದಿದ್ದವು. ಜೊತೆಗೆ ಆ ಘಟನೆ ನಂತರ ಅವರ ಯೋಗಕ್ಷೇಮ ವಿಚಾರಿಸಿದ್ದರಂತೆ ಈ ಹಿನ್ನೆಲೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟೀನಾ ಚೌಧರಿ ಹೇಳಿದ್ದು ಹೀಗೆ..
ಅಂದು ನಾನು ನನ್ನ ಮಗಳನ್ನು ಮ್ಯೂಸಿಕ್ ಕ್ಲಾಸ್ಗೆ ಬಿಡಬೇಕಾಗಿತ್ತು. ನಾನು 4.45 ಕ್ಕೆ ಅವಳನ್ನು ಕರೆದುಕೊಂಡು ಹೋಗಬೇಕಿತ್ತು. ನಾನು ಮಹೀಂದ್ರಾ ತಾಜ್ ನಿಂದ ಎಡ ತಿರುವು ಪಡೆದಾಗ, ನಾವು ಅಲ್ಲಿ ಒಂದು ಜಾಮ್ ನಲ್ಲಿ ಸಿಲುಕಿಕೊಂಡೆವು. ನಾನು 25 ನಿಮಿಷಗಳ ಕಾಲ ನನ್ನ ಕಾರಿನಲ್ಲಿದ್ದೆ. ನಂತರ ಅಲ್ಲಿಂದ ಎದ್ದು ಟ್ರಾಫಿಕ್ ಬಗ್ಗೆ ವಿಚಾರಿಸಿ, ಅಲ್ಲಿದ್ದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯನ್ನು ವಿನಂತಿಸಿದೆ, ಎರಡು ಬಸ್ ತೆಗೆದರೆ, ಟ್ರಾಫಿಕ್‌ನಲ್ಲಿ ಸಿಲುಕಿರುವ ಜನರು ಯೂ ಟರ್ನ್ ಪಡೆದುಕೊಂಡು ಮೇನ್ ರೋಡ್ಗೆ ತೆರಳುತ್ತಾರೆ ಎಂದು ಕೇಳಿಕೊಂಡೆ, ಆದರೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸಲಿಲ್ಲ. ಸಾರ್ವಜನಿಕರ ಸಂಕಷ್ಟ ಅವರಿಗೆ ಕೇಳಿಸಲೇ ಇಲ್ಲ."
ಅಂದು ಬಾಟಲಿ ಎಸೆದಿದ್ದೇಕೆ?
"ನಾನು ಪ್ಲಾಸ್ಟಿಕ್ ಬಾಟಲಿಯನ್ನು ನೆಲಕ್ಕೆ ಎಸೆದದ್ದು ನಿಜ, ಆದರೆ ಅದು ಯಾರ ಮೇಲೂ ಅಲ್ಲ, ನನ್ನ ಆಕ್ರೋಶ ವ್ಯಕ್ತಪಡಿಸಲು ಮಾತ್ರ. ನನ್ನ ತಾತ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಸಾಮಾನ್ಯ ಜನರ ಮೇಲೆ ದರ್ಪ ತೋರುವ ಅಥವಾ ಜನರನ್ನು ಹೆದರಿಸುವ ಹಕ್ಕು ಯಾರಿಗೂ ಇಲ್ಲ" ಎಂದು ಕಾರಣ ಬಿಚ್ಚಿಟ್ಟರು.
ಅಚ್ಚರಿಯ ವಿಷಯವೆಂದರೆ, ಅಲ್ಲಿದ್ದವರಲ್ಲಿ ಸಚಿವ ಗಿರೀಶ್ ಮಹಾಜನ್ ಅವರು ಮಾತ್ರ ತನ್ನ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿದ್ದರು. ಅವರ ಸೂಚನೆಯ ಮೇರೆಗೆ ಅಲ್ಲಿ ಪಾರ್ಕ್ ಮಾಡಲಾಗಿದ್ದ ಬಸ್‌ಗಳನ್ನು ತೆರವುಗೊಳಿಸಲಾಯಿತು ಮತ್ತು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಟೀನಾ ಅಂದು ನಡೆದ ವಿಚಾರದ ಬಗ್ಗೆ ಮೆಲುಕು ಹಾಕಿದರು.
ರಾಜಕೀಯ ಪಕ್ಷಗಳು ಈ ಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಎಲ್ಲಾ ಪಕ್ಷದವರೂ ಸಾರ್ವಜನಿಕರ ಬಗ್ಗೆ ಅಸಡ್ಡೆ ಮತ್ತು ನಿರ್ಲಕ್ಷ್ಯ ತೋರುವ ವಿಷಯದಲ್ಲಿ ಒಂದೇ ರೀತಿಯಿದ್ದಾರೆ" ಎಂದು ಅವರು ನೇರವಾಗಿ ಹೇಳಿದ್ದಾರೆ, (ಏಜೆನ್ಸೀಸ್).