ಮುಂಬೈ: ಮದುವೆಯಲ್ಲಿ ವಧುವಿನ ಕೈಯಲ್ಲಿ ರಾರಾಜಿಸುವ ಮೆಹಂದಿ ಕೇವಲ ಸಾಂಪ್ರದಾಯಿಕ ವಿನ್ಯಾಸಕ್ಕೆ ಸೀಮಿತವಾಗಿರದೆ, ಪ್ರೀತಿಯ ಸಂಕೇತವೂ ಹೌದು. ಆದರೆ, ಮುಂಬೈನ ಕಂಟೆಂಟ್ ಸ್ಟ್ರಾಟೆಜಿಸ್ಟ್ ಅನುಷಾ ಜೈನ್ ಎಂಬುವವರು ತಮ್ಮ ಮದುವೆಯ ಮೆಹಂದಿಯನ್ನು ಸಂಪೂರ್ಣ ವಿಭಿನ್ನ ಹಾಗೂ ಅರ್ಥಪೂರ್ಣವಾಗಿಸಲು ಎಐ ತಂತ್ರಜ್ಞಾನವಾದ ಚಾಟ್‌ಜಿಪಿಟಿ (Chat GPT Bride) ಸಹಾಯ ಪಡೆದಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂಪ್ರದಾಯಿಕ ವಿನ್ಯಾಸಕ್ಕೆ ಗುಡ್‌ಬೈ!
2026 ರ ಜನವರಿಯಲ್ಲಿ ಜೈಪುರದಲ್ಲಿ ಮದುವೆಯಾದ ಅನುಷಾ ಜೈನ್, ತಮ್ಮ ಮದುವೆಯ ಮೆಹಂದಿ ಸ್ವಲ್ಪ ವಿಭಿನ್ನವಾಗಿರಬೇಕೆಂದು ಬಯಸಿದ್ದರು. ಹಾಗಾಗಿ ತಮ್ಮ ಹಾಗೂ ಭಾವಿ ಪತಿಯ ಪರಿಚಯ, ನೆನಪುಗಳು, ಇಬ್ಬರ ನಡುವಿನ ತಮಾಷೆಯ ಕ್ಷಣಗಳು, ತವರು ಮನೆ, ನೆಚ್ಚಿನ ನಗರಗಳು ಮತ್ತು ಕೌಟುಂಬಿಕ ವಿಚಾರಗಳನ್ನು ಒಳಗೊಂಡಿರಬೇಕು ಎಂದು ಬಯಸಿದ್ದರು.
ಆದಾಗ್ಯೂ, ವರ್ಷಗಳ ನೆನಪುಗಳನ್ನು ಹಾಗೂ ಹತ್ತಾರು ವಿಚಾರಗಳನ್ನು ಮೆಹಂದಿ ಆರ್ಟಿಸ್ಟ್‌ಗೆ ಒಂದೊಂದಾಗಿ ವಿವರಿಸಿ, ಅದನ್ನು ಒಂದೇ ವಿನ್ಯಾಸದೊಳಗೆ ತರುವುದು ಅವರಿಗೆ ದೊಡ್ಡ ಸವಾಲಾಗಿತ್ತು.
ಸಹೋದರನ ತಮಾಷೆಯ ಸಲಹೆ, ತಂದಿತು ಹೊಸ ರೂಪ!
ಈ ಗೊಂದಲದಲ್ಲಿದ್ದಾಗ ಅನುಷಾ ಅವರ ಸಹೋದರ ತಮಾಷೆಯಾಗಿ ಚಾಟ್‌ಜಿಪಿಟಿ ಬಳಸಿ ನೋಡು! ಎಂದು ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಅನುಷಾ, ತಮಗಿದ್ದ ಎಲ್ಲಾ ಆಲೋಚನೆಗಳು, ಇಬ್ಬರ ಜೀವನದ ವಿಶೇಷ ಘಟನೆಗಳು, ನಗರಗಳ ಹೆಸರು ಹಾಗೂ ಕೌಟುಂಬಿಕ ವಿವರಗಳನ್ನು ಚಾಟ್‌ಜಿಪಿಟಿಗೆ ನೀಡಿದರು.
ಅಚ್ಚರಿಯೆಂದರೆ, ಚಾಟ್‌ಜಿಪಿಟಿ ಈ ಎಲ್ಲಾ ಹರಟೆ ಹಾಗೂ ನೆನಪುಗಳನ್ನು ಒಟ್ಟುಗೂಡಿಸಿ, ಅತ್ಯದ್ಭುತವಾದ ಮತ್ತು ಸ್ಪಷ್ಟವಾದ 'ಮೆಹಂದಿ ಕಾನ್ಸೆಪ್ಟ್' ಒಂದನ್ನು ಸಿದ್ಧಪಡಿಸಿಕೊಟ್ಟಿತು.
ಕಾನ್ಸೆಪ್ಟ್‌ನಲ್ಲಿ ಏನೇನಿತ್ತು?
ಈ ರಫ್ ಚಿತ್ರದಲ್ಲಿ ಮುಂಬೈ ಮತ್ತು ಜೈಪುರ ನಗರಗಳ ಗುರುತುಗಳು, ಕುಟುಂಬಕ್ಕೆ ಸಂಬಂಧಿಸಿದ ಕ್ರಾಸ್‌ವರ್ಡ್, ಮದುವೆ ಮಂಟಪದ ಮ್ಯಾಪ್, ದೆಹಲಿಯ ಆಟೋ ಹಾಗೂ ಜೈಪುರದ ಆನೆ ಮುಂತಾದ ಸಂಕೇತಗಳಿದ್ದವು. ಇವುಗಳ ಜೊತೆಗೆ ದಂಪತಿಗೆ ಮಾತ್ರ ಅರ್ಥವಾಗುವಂತಹ ಹಲವು ಸಣ್ಣ ಪುಟ್ಟ ಸಿಹಿ ನೆನಪುಗಳ ಚಿತ್ರಣವೂ ಇತ್ತು.
ಈ ಕಾನ್ಸೆಪ್ಟ್ ಚಿತ್ರವನ್ನು ಮೆಹಂದಿ ಕಲಾವಿದೆಗೆ ನೀಡಿದ ಅನುಷಾ, ಇದರಲ್ಲಿರುವಂತೆಯೇ ಚಿತ್ರಿಸಬೇಕೆಂದು ಸೂಚನೆ ನೀಡಿದ್ದರು. ಮೆಹಂದಿ ಆರ್ಟಿಸ್ಟ್ ಕೂಡ ಅತ್ಯಂತ ಜಾಗರೂಕತೆಯಿಂದ ಅದನ್ನು ಅನುಷಾ ಅವರ ಕೈಯಲ್ಲಿ ಅತ್ಯಾಕರ್ಷಕವಾಗಿ ಬಿಡಿಸಿದರು.
ಜಾಲತಾಣಗಳಲ್ಲಿ 'ಎಐ ವಧು' ವೈರಲ್!
ಮದುವೆಯ ಶುಭಸಮಾರಂಭದಲ್ಲಿ ಈ ಮೆಹಂದಿ ವಿನ್ಯಾಸವನ್ನು ನೋಡಿ ಎಲ್ಲರೂ ವಿಸ್ಮಯಗೊಂಡು, ಇದನ್ನು ಡಿಸೈನ್ ಮಾಡಿದ್ದು ಯಾರು? ಎಂದು ವಿಚಾರಿಸತೊಡಗಿದರು. ಅದಕ್ಕೆ ಅನುಷಾ ಮುಗುಳುನಗುತ್ತಾ "ನಾನ್ ಚಾಟ್‌ಜಿಪಿಟಿ ವಧು (I'm a ChatGPT bride)" ಎಂದು ಉತ್ತರಿಸುತ್ತಿದ್ದರು.
ಇವರ ಈ ವಿಶಿಷ್ಟ ಕಲ್ಪನೆಯ ವೀಡಿಯೊ ಹಾಗೂ ಕಥೆಯನ್ನು ಚಾಟ್‌ಜಿಪಿಟಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲೂ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಂತ್ರಜ್ಞಾನವು ಮಾನವನ ಕಲೆ ಮತ್ತು ಭಾವನೆಗಳನ್ನು ಕಸಿದುಕೊಳ್ಳದೆ, ಅದಕ್ಕೆ ಪೂರಕವಾಗಿ ಹೇಗೆ ಕೆಲಸ ಮಾಡಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ (ಏಜೆನ್ಸೀಸ್).