- ಡೋರ್ ಲಾಕ್ ಮಾಡದೆ ಮನೆಯಿಂದ ಹೊರ ಹೋಗಿದ್ದ ಮಹಿಳೆ
- ಆರ್ಡರ್ ಡೆಲಿವರಿಯಿಂದ ಮನೆಯ ಸುರಕ್ಷತೆ, ಇಂಟರ್ನೆಟ್ನಲ್ಲಿ ಮೆಚ್ಚುಗೆ
- ಬೆಲೆಬಾಳುವ ವಸ್ತುಗಳ ರಕ್ಷಣೆಗಾಗಿ ಅವರು ಅಲ್ಲೇ ಕಾವಲು ಕಾದ ಡೆಲಿವರಿ ಏಜೆಂಟ್
- ಡೆಲಿವರಿ ಬಾಯ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಿಳೆ
Mumbai Delivery Agent: ರೋಬೋಟ್ನಂತೆ ಕೆಲಸ ಮಾಡುತ್ತಿರುವವರ ಮಧ್ಯೆ ಮಾನವೀಯತೆ ಮರೆಯಾಗಿದೆ. ಯಾರಿಗೇನಾದರೂ ಆಗಲಿ ಎಂದು ಕೇರ್ ಮಾಡದೆ ಇರುವವರ ನಡುವೆ ಇಲ್ಲೊಬ್ಬ ಡೆಲಿವರಿ ಏಜೆಂಟ್ ಪ್ರಾಮಾಣಿಕತೆ ಮೆರದು, ಎಲ್ಲರ ಹೃದಯ ಗೆದ್ದಿದ್ದಾರೆ. ಮರೆತು ಡೋರ್ಲಾಕ್ ಮಾಡದೆ ಹೋದ ಮಹಿಳೆಯೊಬ್ಬರ ಮನೆಗೆ, ಆರ್ಡರ್ ನೀಡಲು ಬಂದ ಡೆಲಿವರಿ ಬಾಯ್ ಕಾವಲುಗಾರನಂತೆ ನಿಂತು ರಕ್ಷಣೆ ನೀಡಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ದಿವ್ಯಾ ಉನ್ನಿ ಎಂಬ ಮಹಿಳೆಯು ಕೆಲಸದ ಒತ್ತಡ ಮತ್ತು ಅವಸರದ ಮಧ್ಯೆ ತಮ್ಮ ಮನೆಯ ಡೋರ್ ಲಾಕ್ ಮಾಡದೆ ಹೋಗಿದ್ದಾರೆ. ಬಾಗಿಲು ಸಂಪೂರ್ಣ ತೆರೆದಂತೆ ಇತ್ತು. ಈ ವೇಳೆ ಅಲ್ಲಿಗೆ ಪಾರ್ಸೆಲ್ ತಲುಪಿಸಲು ಬಂದ ಅಮಜದ್ ಎಂಬ ಡೆಲಿವರಿ ಏಜೆಂಟ್, ಬಾಗಿಲು ತೆರೆದಿರುವುದನ್ನು ಕಂಡು ಆತಂಕಕ್ಕೊಳಗಾದರು. ಮನೆಯೊಳಗೆ ಯಾರೂ ಇಲ್ಲದಿರುವುದನ್ನು ಕಂಡು, ಯಾರಾದರೂ ಅಪರಿಚಿತರು ಪ್ರವೇಶಿಸಿಬಹುದು ಎಂದು ಗ್ರಹಿಸಿ, ಪಾರ್ಸೆಲ್ ಅನ್ನು ಮನೆಯೊಳಗಿಟ್ಟು, ಮಹಿಳೆಗೆ ಕಾಲ್ ಮಾಡಿ ವಿಷಯ ತಿಳಿಸಿದರು.
ಮನೆ ಕಾದ ಡೆಲಿವರಿ ಬಾಯ್
ಆದರೆ, ದಿವ್ಯಾ ಮನೆಗೆ ಮರಳಲು ಸುಮಾರು 20 ನಿಮಿಷಗಳಿಗೂ ಹೆಚ್ಚು ಸಮಯ ಬೇಕಿತ್ತು. ಅಷ್ಟು ಹೊತ್ತು ಮನೆಯನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸಿಲ್ಲದ ಅಮಜದ್, ಮಹಿಳೆ ಬರುವವರೆಗೂ ಮನೆಯ ಮುಂದೆಯೇ ಕಾದು ಕೂತಿದ್ದರಂತೆ. ಮನೆಯಲ್ಲಿದ್ದ ಸಾಕು ಬೆಕ್ಕು ಕೂಡಾ ಹೊರಗೆ ಓಡಿ ಹೋಗದಂತೆ ಅವರು ಎಚ್ಚರಿಕೆ ವಹಿಸಿದರು.
ದಿವ್ಯಾ ಅವರು ಮನೆಗೆ ಬಂದಾಗ ಅಮಜದ್ ಅವರು ಅಲ್ಲಿಯೇ ನಿಂತು ಮನೆಯನ್ನು ಕಾಯುತ್ತಿರುವುದನ್ನು ಕಂಡು ದಂಗಾದರು. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಆಧುನಿಕ ಕಾಲಘಟ್ಟದಲ್ಲಿಯೂ ಇಂತಹ ಪ್ರಾಮಾಣಿಕ ಮನುಷ್ಯರನ್ನು ಕಾಣುವುದು ಅಪರೂಪ. ಅಮಜದ್ ಕೇವಲ ಬಾಗಿಲನ್ನು ಕಾಯಲಿಲ್ಲ, ಬದಲಿಗೆ ನನ್ನ ನಂಬಿಕೆಯನ್ನು ಉಳಿಸಿದರು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಅವರಿಗೆ ಡೆಲಿವರಿ ಏಜೆಂಟ್ ಕಡೆಯಿಂದ ಬಹುಮಾನ ನೀಡಲು ಒತ್ತಾಯ ಮಾಡಿದ್ದಾರೆ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡೆಲಿವರಿ ಸಂಸ್ಥೆಯು ಈತನಿಗೆ ಸೂಕ್ತ ಬಹುಮಾನ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್).