ಮಗನ ಜಗಳ ಬಿಡಿಸಲು ಬಂದ ಮಾಜಿ ಯೋಧನಿಗೆ ಚಾಕು ಇರಿತ WEB
ದೇಶ

ಮಗನ ಜಗಳ ಬಿಡಿಸಲು ಬಂದ ಮಾಜಿ ಯೋಧನಿಗೆ ಚಾಕು ಇರಿತ; ಆರೋಪಿಗಳ ಬಂಧನ! mumbai crime

ಮಗನ ಹಣಕಾಸಿನ ವಿಚಾರದ ಜಗಳ ಬಿಡಿಸಲು ಬಂದ ಮಾಜಿ ಸೈನಿಕನ ಮೇಲೆಯೇ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ಕಾಂದಿವಲಿ ಪಶ್ಚಿಮದಲ್ಲಿ ನಡೆದಿದೆ. ಎದೆ, ಭುಜ ಹಾಗೂ ಮುಖದ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದ ಪರಿಣಾಮ 46 ವರ್ಷದ ಮಾಜಿ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.mumbai crime

ಮುಂಬೈ: ಮಗನ ಹಣಕಾಸಿನ ವಿಚಾರದ ಜಗಳ ಬಿಡಿಸಲು ಬಂದ ಮಾಜಿ ಸೈನಿಕನ ಮೇಲೆಯೇ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ಕಾಂದಿವಲಿ ಪಶ್ಚಿಮದಲ್ಲಿ ನಡೆದಿದೆ. ಎದೆ, ಭುಜ ಹಾಗೂ ಮುಖದ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದ ಪರಿಣಾಮ 46 ವರ್ಷದ ಮಾಜಿ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಾಯಗೊಂಡ ಮಾಜಿ ಯೋಧನನ್ನು ಜೈಕರ್ ಸಿಂಗ್ ಗುರ್ಮೇಜ್ ಸಿಂಗ್ ಗಿಲ್ (46) ಎಂದು ಗುರುತಿಸಲಾಗಿದೆ. ಇವರು ಕಾಂದಿವಲಿ ಪಶ್ಚಿಮದ ಪವಾರ್ ಪಬ್ಲಿಕ್ ಶಾಲೆ ಸಮೀಪದ ಧನಲಕ್ಷ್ಮಿ ಎಸ್‌ಆರ್ ಕಟ್ಟಡದಲ್ಲಿ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಸಾವಿರಾರು ರೂಪಾಯಿ ಸಾಲದ ವಿಚಾರಕ್ಕೆ ಶುರುವಾದ ಜಗಳ

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಗಿಲ್ ಅವರ ಮಗ ವಿಕ್ರಮ್ ಸಿಂಗ್ ಇಬ್ಬರು ಆರೋಪಿಗಳಿಂದ ಕೆಲವು ಸಾವಿರ ರೂಪಾಯಿ ಸಾಲ ಪಡೆದಿದ್ದರು. ಈ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಕ್ರಮ್ ಮತ್ತು ಆರೋಪಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದೇ ವಿಚಾರವಾಗಿ ಆರೋಪಿಗಳು ವಸತಿ ಕಟ್ಟಡದ ಸಮೀಪ ವಿಕ್ರಮ್ ಅವರನ್ನು ತಡೆದು ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದರು.

ಮಗನೊಂದಿಗೆ ನಡೆಯುತ್ತಿದ್ದ ಗಲಾಟೆ ಹಾಗೂ ನಿಂದನೆಯ ಸದ್ದು ಕೇಳಿಸಿಕೊಂಡ ಗಿಲ್ ಮನೆಯ ಕೆಳಗೆ ಬಂದು ಆರೋಪಿಗಳ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡಿದ್ದು, ಆರೋಪಿಗಳು ಮಾಜಿ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲು ಕೈಗಳಿಂದ ಹೊಡೆದು ಹಲ್ಲೆ ಮಾಡಿದ ಆರೋಪಿಗಳು ಬಳಿಕ ಚಾಕು ತೆಗೆದು ಹಲವು ಬಾರಿ ಇರಿದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಉದ್ಯಮಿಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್! 140 ಕೋಟಿ ಭಾರತೀಯರ ಬಗ್ಗೆ ನಮೋ ಹೇಳಿದ್ದೇನು ಗೊತ್ತಾ?PM Modi

ಎದೆ, ಭುಜ, ಮುಖಕ್ಕೆ ಚಾಕು ಇರಿತ

ಆರೋಪಿಗಳು ಗಿಲ್ ಅವರ ಎದೆ, ಭುಜ ಮತ್ತು ಮುಖದ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದು, ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಆರಂಭದಲ್ಲಿ ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗಳ ಗಂಭೀರತೆ ಹಿನ್ನೆಲೆಯಲ್ಲಿ ವೈದ್ಯರು ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮದ್ಯದ ಅಮಲಿನಲ್ಲಿ ಕೃತ್ಯ? ಇಬ್ಬರ ಬಂಧನ

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಬಂಧಿತರನ್ನು ಸುಜಲ್ ಸಚಿನ್ ರಾಥೋಡ್ ಮತ್ತು ಸಾಹಿಲ್ ನಂದು ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ಸಂದರ್ಭದಲ್ಲಿ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1), 351(2), 352 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ. ಹಣಕಾಸಿನ ವಿಚಾರವಾಗಿ ಆರಂಭವಾದ ಜಗಳ ಮಾಜಿ ಯೋಧನ ಮೇಲೆ ಮಾರಣಾಂತಿಕ ಹಲ್ಲೆಗೆ ತಿರುಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.