ಭೂಗತ ಪಾತಕಿ ಅಬು ಸಲೇಂ, ಸುಪ್ರೀಂ ಕೋರ್ಟ್
- 1993 ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಅಬು ಸಲೇಂ
- ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್
- 90 ರ ದಶಕದಲ್ಲಿ ಬಾಂಬೆ ಭೂಗತ ಜಗತ್ತಿನಲ್ಲಿ ಸಕ್ರೀಯನಾಗಿದ್ದ ಅಬು ಸಲೇಂ
ನವದೆಹಲಿ: 1993 ರ ಮುಂಬೈ ಸರಣಿ ಸ್ಫೋಟ (Mumbai Serial Bomb Blast) ದ ಅಪರಾಧಿ ಅಬು ಸಲೇಂ ಶಿಕ್ಷಪೂರ್ವ ಬಿಡುಗಡೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಫೆ.16) ವಜಾಗೊಳಿಸಿದೆ. ಆದರೆ ಈ ಕುರಿತು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಅಬು ಸಲೇಂಗೆ ಭಾರತ-ಪೋರ್ಚುಗಲ್ ಹಸ್ತಾಂತರ ಒಪ್ಪಂದದ ಅಡಿಯಲ್ಲಿ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದ್ದು, ಉತ್ತಮ ನಡುವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ವರ್ಷ ಹದಿನಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಿ ಎನ್ನುವುದು ಸಲೇಂ ಪರ ವಕೀಲರ ವಾದವಾಗಿತ್ತು.
ಪೋರ್ಚುಗಲ್‌ನೊಂದಿಗೆ ಹಸ್ತಾಂತರ ಒಪ್ಪಂದದ ಅಡಿಯಲ್ಲಿ 25 ವರ್ಷಗಳ ಶಿಕ್ಷೆಯ ನಂತರ ಸಲೇಂರನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ, ಅಂತೆಯೇ ಸಲೇಂ ಮುಕ್ಕಾಲು ಭಾಗ ಶಿಕ್ಷೆಯನ್ನು ಅನುಭವಿಸಿದ್ದಾರೆ, ಈಗ ಉಳಿದಿರುವ ಶಿಕ್ಷೆಯನ್ನು ಕಡಿತಗೊಳಿಸಿ ಎನ್ನುವುದು ಅವರ ವಾದವಾಗಿತ್ತು.
ಆದರೆ ಈ ಅರ್ಜಿಯನ್ನು ವಿರೋಧಿಸಿದ ಮಹಾರಾಷ್ಟ್ರ ಸರ್ಕಾರ, ಸಲೇಂ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿಲ್ಲ, ಭಯೋತ್ಪಾದನಾ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಅಪರಾಧಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದರು.
25 ವರ್ಷಗಳ ಅವಧಿಯನ್ನು ಮೀರಿ ಸಲೇಂ ಅವರ ಮುಂದುವರಿದ ಜೈಲುವಾಸವು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅವರ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಸಲೇಂ ಪರ ವಕೀಲ ರಿಷಿ ಮಲ್ಹೋತ್ರಾ ವಾದ ಮಂಡಿಸಿದರು. ಆದರೆ , ಸಲೇಂ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿಲ್ಲ ಎಂದು ಹೇಳಿದ ನ್ಯಾಯಾಲಯ ನೀವು ಮೊದಲು ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಆಮೇಲೆ ಇಲ್ಲಿಗೆ ಬರುವಿರಂತೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ.
257 ಜನರ ಸಾವಿಗೆ ಕಾರಣವಾದ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಸಲೇಂ ಅವರ ಪಾತ್ರಕ್ಕಾಗಿ ವಿಶೇಷ ಟಾಡಾ ನ್ಯಾಯಾಲಯವು ಜೂನ್ 2017 ರಲ್ಲಿ ದೋಷಿ ಎಂದು ಘೋಷಿಸಿತು. ಐಪಿಸಿ, ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅಬು ಸಲೇಂನನ್ನು ತಪ್ಪಿತಸ್ಥನೆಂದು ಘೋಷಿಸಲಾಗಿತ್ತು,(ಏಜನ್ಸೀಸ್).