ಮುಂಬೈ: ದುಬಾರಿ ವಸ್ತುವೊಂದು ಕೈಗೆ ಸಿಕ್ಕರೆ ಅದನ್ನು ತಕ್ಷಣವೇ ಜೇಬಿಗಿಳಿಸಿಕೊಳ್ಳುವವರ ನಡುವೆ, ಮುಂಬೈನ ಓಲಾ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಪ್ರಯಾಣಿಕರೊಬ್ಬರು ಕ್ಯಾಬ್‌ನಲ್ಲಿ ಬಿಟ್ಟು ಹೋಗಿದ್ದ ಐಫೋನ್ 16 (iPhone16) ಅನ್ನು ಹುಡುಕಿ ತಲುಪಿಸುವ ಮೂಲಕ ಈ ಚಾಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿ ಕೆ ಸಿಯಿಂದ ಮಲಬಾರ್ ಹಿಲ್ಸ್‌ವರೆಗೆ ಪ್ರಾಮಾಣಿಕ ಪಯಣ!
ಕ್ಯಾಬ್ ಚಾಲಕ ಮೀರ್ ಶೇಖ್ ಎಂಬುವವರು ಬಿ ಕೆ ಸಿ ಪ್ರದೇಶದಲ್ಲಿ ರೈಡ್ ಮುಗಿಸಿದ ನಂತರ ತಮ್ಮ ಕಾರಿನಲ್ಲಿ ಐಫೋನ್ 16 ಇರುವುದನ್ನು ಕಂಡುಕೊಂಡರು. ಆದಾಗ್ಯೂ, ಫೋನ್ ಯಾರದ್ದು ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲದಿದ್ದರೂ, ಆ ಪ್ರಯಾಣಿಕ ಹಿರಿಯ ನಾಗರಿಕರೆಂಬುದು ಶೇಖ್ ಅವರಿಗೆ ನೆನಪಿತ್ತು. ಫೋನ್‌ಗೆ ತಕ್ಷಣಕ್ಕೆ ಯಾವುದೇ ಕರೆಗಳು ಬರಲಿಲ್ಲ, ಹಾಗೂ ಆ್ಯಪ್ ಮೂಲಕ ಪ್ರಯಾಣಿಕರನ್ನು ಸಂಪರ್ಕಿಸುವುದು ಸುಲಭವಾಗಿರಲಿಲ್ಲ.
ಫೋನ್ ದುರುಪಯೋಗವಾಗಬಾರದೆಂದು ಅದನ್ನು ಭದ್ರವಾಗಿ ತಮ್ಮ ಬಳಿಯೇ ಇಟ್ಟುಕೊಂಡ ಶೇಖ್ ಯಾವುದಾದರೂ ಕರೆ ಬರುತ್ತದೆಯೇ ಎಂದು ಕಾಯುತ್ತಿದ್ದರು. ಕೊನೆಗೆ ಫೋನ್ ಕರೆ ಬಂದಾಗ, ಪ್ರಯಾಣಿಕ ಮಲಬಾರ್ ಹಿಲ್ಸ್‌ನಲ್ಲಿದ್ದಾರೆ ಎಂದು ತಿಳಿಯಿತು. ತಡಮಾಡದೆ ಶೇಖ್ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿ ಮೊಬೈಲ್ ನೀಡಿದ್ದಾರೆ.
ಚಾಲಕ ಹೇಳಿದ್ದೇನು?
ಫೋನ್‌ಗೆ ಕರೆ ಬಂತು, ಗ್ರಾಹಕರು ಮಲಬಾರ್ ಹಿಲ್ಸ್‌ನಲ್ಲಿರುವುದಾಗಿ ಹೇಳಿದರು. ನಾನು ತಕ್ಷಣವೇ ಅಲ್ಲಿಗೆ ಹೋಗಿ ಅವರ ಫೋನ್ ಅನ್ನು ಸುರಕ್ಷಿತವಾಗಿ ವಾಪಸ್ ತಲುಪಿಸಿದೆ ಎಂದು ಶೇಖ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಪ್ರಾಮಾಣಿಕತೆಗೆ ಸಿಕ್ಕಿತು 2,500 ಬಹುಮಾನ!
ತಮ್ಮ ಪ್ರೀತಿಯ ಹಾಗೂ ದುಬಾರಿ ಫೋನ್ ಸುರಕ್ಷಿತವಾಗಿ ಕೈಸೇರಿದ್ದನ್ನು ಕಂಡ ಹಿರಿಯ ನಾಗರಿಕರು ಚಾಲಕನ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಮನಸಾರೆ ಕೊಂಡಾಡಿದರು. ಅಷ್ಟೇ ಅಲ್ಲದೆ, ಚಾಲಕ ಶೇಖ್ಗೆ 2,500 ನಗದು ಬಹುಮಾನ ನೀಡಿ ಗೌರವಿಸಿದರು.
ಈ ಕುರಿತು ಸಂತಸ ಹಂಚಿಕೊಂಡ ಶೇಖ್, ಯಾರೂ ನೋಡದಿದ್ದರೂ ನಾವು ಸರಿಯಾದ ಹಾದಿಯಲ್ಲೇ ನಡೆಯಬೇಕು ಎಂಬ ನನ್ನ ನಂಬಿಕೆಗೆ ಇವತ್ತು ಸೂಕ್ತ ಪ್ರತಿಫಲ ಸಿಕ್ಕಿದೆ. ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಸಿಗುತ್ತದೆ ಎಂದಿದ್ದಾರೆ.
ನೆಟ್ಟಿಗರಿಂದ ಪ್ರಶಂಸೆಯ ಮಳೆ
ಈ ಇನ್‌ಸ್ಟಾಗ್ರಾಮ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ವ್ಯಕ್ತವಾಯಿತು. "ಮಾನವೀಯತೆ ಇನ್ನೂ ಜೀವಂತವಾಗಿದೆ, ಈ ಪ್ರಾಮಾಣಿಕ ಚಾಲಕನಿಗೆ ಸಲ್ಯೂಟ್ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕೊಂಡಾಡಿದ್ದಾರೆ (ಏಜೆನ್ಸೀಸ್).