ಮುಂಬೈನಲ್ಲಿ ನಡೆದ ಶಿವಸೇನಾ(ಯುಬಿಟಿ) ಮತ್ತು ಎಂಎನ್​ಎಸ್ ಜಂಟಿ ರ‍್ಯಾಲಿ 
ದೇಶ

ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಯದ್ದು ನಕಲಿ ಹಿಂದುತ್ವ ಎಂದು ಜಂಟಿ ರ‍್ಯಾಲಿಯಲ್ಲಿ ಅಬ್ಬರಿಸಿದ ಠಾಕ್ರೆ ಬ್ರದರ್ಸ್​ | Thackeray brothers

ಮುಂಬೈ: ಜನವರಿ 15ರಂದು ನಡೆಯಲಿರುವ ದೇಶದ ಆರ್ಥಿಕ ರಾಜಧಾನಿ ಮತ್ತು ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಕೊನೆಯದಾಗಿ ಬಿಜೆಪಿಯದ್ದು ನಕಲಿ ಹಿಂದುತ್ವ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಮತ್ತು ಅವರ ಸಹೋದರ ಎಂಎನ್​ಎಸ್​ನ ರಾಜ್​ಠಾಕ್ರೆ  ಜಂಟಿ ರ‍್ಯಾಲಿ ಮೂಲಕ ಅಬ್ಬರಿಸಿದ್ದಾರೆ.
ಭಾನುವಾರ(ಜ. 11) ರಾತ್ರಿ ಮುಂಬೈನಲ್ಲಿ ನಡೆದ ಶಿವಸೇನಾ(ಯುಬಿಟಿ) ಮತ್ತು ಎಂಎನ್​ಎಸ್ ಜಂಟಿ ರ‍್ಯಾಲಿಯಲ್ಲಿ ಮರಾಠಿ ಮಾನೂಸ್​ಗಳನ್ನು ಉದ್ದೇಶಿಸಿ ಇಬ್ಬರು ಮಾತನಾಡಿದ್ದು, ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮರಾಠಿ ಮನೂಸ್, ಹಿಂದೂಗಳು ಮತ್ತು ಮಹಾರಾಷ್ಟ್ರಕ್ಕಾಗಿ ತಾವು ಒಂದೂಗೂಡಿದ್ದಾಗಿ ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜ್​ ಠಾಕ್ರೆ, ಇಂದು ಮುಂಬೈ ನಗರ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದೆ. ಬಿಜೆಪಿ ಮುಂಬೈನಗರವನ್ನು ಲೂಟಿ ಮಾಡುತ್ತಿದೆ. ನಗರವನ್ನು ಗುಜರಾತ್‌ಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಮುಂಬೈ ಮತ್ತು ಮಹಾರಾಷ್ಟ್ರದ ಆಸ್ತಿಗಳನ್ನು ಗೌತಮ್ ಅದಾನಿ ನೇತೃತ್ವದ ಕಂಪನಿಗೆ ಹಸ್ತಾಂತರಿಸುತ್ತಿದೆ. ಈಗಲ್ಲ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇದು ಜರುಗುತ್ತಿದೆ ಎಂದು ಆರೋಪಿಸಿದ್ದಾರೆ. 
ಪ್ರಸ್ತಾವಿತ ವಧವನ್ ಬಂದರು ಅನ್ನು ಆದಾನಿ ಸಮೂಹಕ್ಕೆ ಒಪ್ಪಿಸಿದ್ದನ್ನು ಉದಾಹರಿಸಿದ, ಮುಂಬೈ ಅನ್ನು ಗುಜರಾತ್‌ನೊಂದಿಗೆ ಸಂಪರ್ಕಿಸುವುದು ದೀರ್ಘಾವಧಿಯ ಯೋಜನೆಯಾಗಿದೆ. ಅದಕ್ಕಾಗಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನಂತಹ ಯೋಜನೆಗಳನ್ನು ಮಾಡ್ತಿದ್ದಾರೆ. ಬಿಎಂಸಿ ನಮ್ಮಲ್ಲಿದ್ದರೆ ಅದಾನಿಗೆ ಭೂಮಿ ಮಾರಾಟವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಮರಾಠಿ ಮನೂಗಳಿಗೆ ಇದು ಕೊನೆಯ ಚುನಾವಣೆ. ಅವರು ಈಗ ತಪ್ಪು ಮಾಡಿದರೆ, ಮುಂಬೈಗಾಗಿನ ಯುದ್ಧ ಶಾಶ್ವತವಾಗಿ ಸೋಲುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದು ಸಾರ್ವಜನಿಕ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡಿತ್ತು. ಆದರೆ ಈಗಿನ ಸರ್ಕಾರ ಜನರನ್ನು ಹಗುರವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ಮಹಾರಾಷ್ಟ್ರದ ಸಿಟಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಸಿಟಿ ಎಂಬ ಬಿಜೆಪಿಯ ಅಣ್ಣಾಮಲೈ ಹೇಳಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿರುವ ಉದ್ದವ್ ಠಾಕ್ರೆ, ಬಿಜೆಪಿ ಮುಂಬೈ ಅನ್ನು ಬಾಂಬೆ ಎಂದು ಮರುನಾಮಕರಣ ಮಾಡಲು ಬಯಸುತ್ತದೆಯೇ? ಅಣ್ಣಾಮಲೈ ಅವರ ಹೇಳಿಕೆ ಬಿಜೆಪಿಯ ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ ಎಂದು ಕಿಡಿಕಾರಿದ್ದಾರೆ.
ಮರಾಠಿಯ ಮೇಲಿನ ಪ್ರೀತಿ ರಕ್ತದಲ್ಲೇ ಇರಬೇಕು ಎಂದಿರುವ ಅವರು, ಬಿಜೆಪಿ ಚುನಾವಣೆಗೂ ಮುನ್ನ ವಿಭಜಕ ರಾಜಕೀಯ ಮಾಡ್ತಿದೆ. ಬಿಜೆಪಿಯ ಹಿಂದುತ್ವ ಮತ್ತು ರಾಷ್ಟ್ರೀಯತೆ ನಕಲಿ. ನೀವು ಹಿಂದೂ-ಮುಸ್ಲಿಂ ರಾಜಕೀಯ ಮಾಡದ ಚುನಾವಣೆಯನ್ನು ನಮಗೆ ತೋರಿಸಿ ಎಂದು ಸವಾಲು ಹಾಕಿದ್ದಾರೆ. 
ಸ್ಥಳೀಯ ಸಂಸ್ಥೆಗಳಲ್ಲಿ ಎಐಎಂಐಎಂ ಮತ್ತು ಕಾಂಗ್ರೆಸ್ ಜೊತೆಗಿನ ಬಿಜೆಪಿ ಮೈತ್ರಿ ಪ್ರಸ್ತಾಪಿಸಿರುವ ಉದ್ಧವ್, ಬಿಜೆಪಿ ಮಾಡುತ್ತಿರುವುದು 'ಅಮರ್ ಪ್ರೇಮ್', ಮತ್ತು ನಾವು ಮಾಡುವುದಕ್ಕೆ 'ಲವ್ ಜಿಹಾದ್' ಎಂದು ಹಣೆಪಟ್ಟಿ ಕಟ್ಟಲಾಗಿದೆ ಎಂದು ಕೆಂಡಕಾರಿದ್ದಾರೆ (ಏಜೆನ್ಸೀಸ್).