ಮುಂಬೈ: ಭಾರಿ ಕೂತುಹಲ ಮೂಡಿಸಿದ್ದ ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆ(BMC Elections) ಗುರುವಾರ ಮತದಾನ ಮುಗಿದಿದ್ದು, ಇಂದು(ಜ. 16) ಫಲಿತಾಂಶ ಪ್ರಕಟವಾಗಲಿದ್ದು, ಬೆಳಗ್ಗೆ 10 ಗಂಟೆಯಿಂದ ಮತ ಎಣಿಕೆ ಶರುವಾಗಲಿದೆ.
ಆದ್ಯಾಗ್ಯೂ ನಿನ್ನೆ ಸಂಜೆ ಬಂದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಗೆಲುವಿನ ಸುಳಿವು ನೀಡಿವೆ. ಆಕ್ಸಿಸ್ ಮೈ ಇಂಡಿಯಾ ಮತ್ತು ಜೆವಿಸಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಬಿಜೆಪಿ ಮೈತ್ರಿಕೂಟಕ್ಕೆ 138 ಸ್ಥಾನಗಳು, ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ 59 ಸ್ಥಾನಗಳು. ಕಾಂಗ್ರೆಸ್ 23 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಜೆವಿಸಿ ಹೇಳಿದೆ.
ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ಬಿಜೆಪಿ-ಸೇನಾ ಮೈತ್ರಿಕೂಟಕ್ಕೆ 131-151 ಸ್ಥಾನಗಳು, ಠಾಕ್ರೆ ಸಹೋದರರು 58-68 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ. ಸಕಲ್ ಪೋಲ್ ಪ್ರಕಾರ ಬಿಜೆಪಿ-ಸೇನಾ ಮೈತ್ರಿಕೂಟಕ್ಕೆ 119 ಸ್ಥಾನಗಳು, ಸೇನಾ ಯುಬಿಟಿಗೆ 75 ಸ್ಥಾನಗಳು, ಕಾಂಗ್ರೆಸ್ 20 ಸ್ಥಾನಗಳಿಗಿಂತ ಹೆಚ್ಚು ಗೆಲ್ಲುವುದಿಲ್ಲ ಎಂದು ತಿಳಿಸಿದೆ.
ದೇಶದ ಅತಿದೊಡ್ಡ ಶ್ರೀಮಂತ ಪಾಲಿಕೆಯಾಗಿರುವ ಮುಂಬೈ ಮಾಹಾನಗರ ಪಾಲಿಕೆ, 75 ಸಾವಿರ ಕೋಟಿಯಷ್ಟು ಬಜೆಟ್ ಅನ್ನು ಹೊಂದಿದೆ. ಕಳೆದ ಮೂವತ್ತು ವರ್ಷಗಳಿಂದ ಪಾಲಿಕೆಯಲ್ಲಿ ಶಿವಸೇನಾ ಹಿಡಿತ ಹೊಂದಿದೆ. 2017ರಲ್ಲಿ ಕಡೆಯ ಬಾರಿ ಚುನಾವಣೆ ನಡೆದಿದ್ದು, ಬಳಿಕ 2022ರಲ್ಲಿ ನಡೆಯಬೇಕಿದ್ದ ಚುನಾವಣೆ ಕೊರೋನಾ ಮತ್ತಿತರ ಕಾರಣಗಳಿಗೆ 4 ವರ್ಷ ಮುಂದೂಡಿಕೆಯಾಗಿ ನಿನ್ನೆ ಗುರುವಾರ ಚುನಾವಣೆ ನಡೆದಿದೆ.
ಮುಂಬೈ ಮಹಾನಗರ ಪಾಲಿಕೆ ಸೇರಿ 28 ನಗರಸಭೆ, ಪುರಸಭೆಗಳಲ್ಲಿ ಮತದಾನ ನಡೆದಿದ್ದು, ಸುಮಾರು ಶೇ. 50 ರಷ್ಟು ಮತದಾನ ದಾಖಲಾಗಿದೆ. ಈ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಕೆಲವು ಕಡೆ ಜಿದ್ದಾಜಿದ್ದಿ ನಡೆದಿದೆ. (ಏಜೆನ್ಸೀಸ್).