ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ
ಮುಂಬೈ: ಇಡೀ ದೇಶದ ಗಮನಸೆಳೆದಿರುವ ಮುಂಬೈನ ಮೇಯರ್ ಚುನಾವಣೆ ಕೊನೆಯ ಕ್ಷಣದಲ್ಲಿ ಮುಂದೂಡಿಕೆಯಾಗಿದ್ದು, ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ನೋಂದಣಿಗಾಗಿ ಪ್ರಯತ್ನ ಪಡುತ್ತಿರುವುದರಿಂದ ಮಹಾಪೌರರ ಪಟ್ಟಾಧಿಕಾರ ಫೆಬ್ರವರಿಗೆ ವರ್ಗಾವಣೆಯಾಗಿದೆ.
ಮಹಾರಾಷ್ಟ್ರದಲ್ಲಿನ ಈ ಬಿಕ್ಕಟ್ಟು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಾಯಕತ್ವದ ಸ್ಪರ್ಧೆಯನ್ನು ಸ್ಥಗಿತಗೊಳಿಸಿದ್ದು, ಏಷ್ಯಾದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಲ್ಲಿ ಅಧಿಕಾರ ಹಂಚಿಕೆಯ ಕುರಿತಾದ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.
ಮೇಯರ್ ಹುದ್ದೆಗಳಿಗೆ ಮೀಸಲಾತಿ ಘೋಷಣೆಯಾಗಿದ್ದು, ಬಿಎಂಸಿ ಜನವರಿ 31 ರಂದು ಮತದಾನಕ್ಕೆ ಸಜ್ಜಾಗಿತ್ತು. ಬಿಜೆಪಿ ಮತ್ತು ಶಿಂಧೆ ಶಿವಸೇನೆ ಕಾರ್ಪೊರೇಟರ್‌ಗಳು ತಮ್ಮ ಗುಂಪು ನೋಂದಣಿಗಳನ್ನು ಅಂತಿಮಗೊಳಿಸಲು ವಿಫಲರಾಗಿರುವುದರಿಂದ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ.
ಎಲ್ಲಾ ಬಣಗಳು ಪುರಸಭೆ ಕಾರ್ಯದರ್ಶಿ ಕಚೇರಿಗೆ ಪ್ರಮಾಣಪತ್ರಗಳನ್ನು ಸಲ್ಲಿಸುವವರೆಗೆ, ಮೇಯರ್ ಚುನಾವಣೆ ನಡೆಯಲು ಸಾಧ್ಯವಿಲ್ಲ. ಉದ್ಧವ್ ನೇತೃತ್ವದ ಶಿವಸೇನೆ (ಯುಬಿಟಿ) ಎಂಎನ್‌ಎಸ್ ನೋಂದಣಿಯನ್ನು ಈಗಾಗಲೇ ಪೂರ್ಣಗೊಳಿಸಿವೆ ಎಂದು ವರದಿಯಾಗಿದೆ.
ದಾಖಲೆಗಳ ಕೆಲಸಕ್ಕೆ ಸಮಯ ಸಿಗುವುದರಿಂದ ಫೆಬ್ರವರಿ ಮೊದಲ ವಾರದಲ್ಲೇ ಮೇಯರ್ ನಡೆಯುವ ಸಾಧ್ಯತೆ ಇದೆ, ಬಿಜೆಪಿ ಮತ್ತು ಶಿಂಧೆ ಬಣದ ನಡುವೆ ಅನಿಶ್ಚಿತತೆ ಮುಂದುವರೆದಿದ್ದು, ಅವರಿಬ್ಬರು ಜೊತೆಯಾಗಿ ನೋಂದಾಯಿಸುತ್ತಾರೋ ಅಥವಾ ಪ್ರತ್ಯೇಕ ಗುಂಪಾಗಿ ನೋಂದಾಯಿಸುತ್ತಾರೋ? ಎನ್ನುವುದು ಇನ್ನು ಪ್ರಶ್ನೆಯಾಗಿಯೆ ಮುಂದುವರೆದಿದೆ.
ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಂಬೈನ ಮಣ್ಣಿನ ಪುತ್ರರು ಎಂಬ ಸಿದ್ಧಾಂತವನ್ನು ಸಾಕಾರಗೊಳಿಸುವ ತಮ್ಮ ಬಣವನ್ನು ಮುರಿಯಲಾಗದು ಎಂದು ಘೋಷಿಸಿದರು. ಬಾಳಾಸಾಹೇಬ್ ಠಾಕ್ರೆ ಶತಮಾನೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಶಿವಸೇನೆಯನ್ನು ಹತ್ತಿಕ್ಕುವ ಬಿಜೆಪಿಯ ಪ್ರಯತ್ನಗಳು ಈಡೇರಲು ಸಾಧ್ಯವಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಪಕ್ಷಕ್ಕಿಂತ ಸಿದ್ಧಾಂತ ಮುಖ್ಯ ಎಂದ ಉದ್ಧವ್
ಶಿವಸೇನೆ ಎಂದರೆ ಕೇವಲ ಒಂದು ಪಕ್ಷವಲ್ಲ, ಅದು ಒಂದು ಸಿದ್ಧಾಂತ, ನೀವು ಅದನ್ನು ನಾಶಮಾಡಲು ಸಾಧ್ಯವಿಲ್ಲ ಎಂದಿರುವ ಠಾಕ್ರೆ, ಶಿವಸೇನೆ ಮಣ್ಣಿನ ಮಕ್ಕಳ ಬೆಂಕಿ, ದಮನಿತರ ಹೃದಯಗಳಲ್ಲಿ ಉರಿಯುತ್ತಿರುವ ಜ್ಯೋತಿ. ಬಿಜೆಪಿ ಆ ಜ್ಯೋತಿಯನ್ನು ನಂದಿಸಲು ಸಾಧ್ಯವಿಲ್ಲ ಎಂದರು.
ಬಿಎಂಸಿಯಲ್ಲಿ ಬಿಜೆಪಿ ಪಾರುಪತ್ಯ
227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ(ಏಜೆನ್ಸೀಸ್).