Mumbai Man With Rs 35K Job Rants About ‘6-Hour Daily Travel 
ದೇಶ

35 ಸಾವಿರ ಸಂಬಳಕ್ಕಾಗಿ ನಿತ್ಯ 6 ಗಂಟೆ ಪ್ರಯಾಣ; ಮಲಗಲು ಮಾತ್ರ ಮನೆಗೆ ಹೋಗ್ತೇನೆ ಎಂದು ಮುಂಬೈ​ ಜೀವನದ ವ್ಯಥೆ ಬಿಚ್ಚಿಟ್ಟ ಉದ್ಯೋಗಿ..Mumbai

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಜೀವನ..ಪ್ರಯಾಣದ ಜಂಜಾಟದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಉದ್ಯೋಗಿ.
  • ಬದ್ಲಾಪುರದಿಂದ ಗೋರೆಗಾಂವ್‌ಗೆ ನಿತ್ಯ 6 ಗಂಟೆ ಪ್ರಯಾಣಿಸುತ್ತೇನೆ ಎಂದು ಪೋಸ್ಟ್.
  • ಮಲಗಲು ಮಾತ್ರ ಮನೆಗೆ ಬರುತ್ತೇನೆ ನನ್ನೆಲ್ಲ ದಿನವು ಪ್ರಯಾಣದಲ್ಲೇ ಕಳೆಯುತ್ತೇನೆ ಎಂದ ಉದ್ಯೋಗಿ.

Mumbai Man With Rs 35K Job Rants About ‘6-Hour Daily Travel:

ಭಾರತದ ಅತಿದೊಡ್ಡ ವಾಣಿಜ್ಯ ನಗರವಾದ ಮುಂಬೈನಲ್ಲಿನ ನಿವಾಸಿಗಳಿಗೆ ಯಾವುದಕ್ಕೂ ಸಮಯ ಇರೋದಿಲ್ಲ. ನಿತ್ಯ ಟ್ರಾಫಿಕ್​ ಜಂಜಾಟ, ರೈಲಿನಲ್ಲಿನ ಜನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಬೇಗ ಮನೆ ಬಿಡುವ ಪರಿಸ್ಥಿತಿಯು ತಮಗೆ ಸಮಯ ಕೊಟ್ಟುಕೊಳ್ಳಲು ಆಗದಂತೆ ಮಾಡಿಬಿಟ್ಟಿದೆ. ಸದ್ಯ ಈ ವಿಚಾರವನ್ನು ಮತ್ತೆ ಇಂಟರ್ನೆಟ್​ನಲ್ಲಿ ಚರ್ಚಾತ್ಮಕ ವಿಷಯವನ್ನಾಗಿ ಮಾಡಿದ್ದು ಟೆಕ್ಕಿಯೊಬ್ಬರು.

ಹೌದು, ಮುಂಬೈನ ಉದ್ಯೋಗಿಯೊಬ್ಬರು ರೆಡ್ಡಿಟ್​ನಲ್ಲಿ ಇಲ್ಲಿನ ಜೀವನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. underground-chicken ಎಂಬ ಖಾತೆಯಿಂದ ದೈನಂದಿನ ಪ್ರಯಾಣದ ನರಕಯಾತನೆಯ ಬಗ್ಗೆ ಬರೆದುಕೊಂಡಿದ್ದಾರೆ. ವಾರದಲ್ಲಿ 6 ದಿನ ಕೆಲಸ ಮಾಡುವ ಈ ಉದ್ಯೋಗಿಗೆ ಕಚೇರಿಗೆ ಹೋಗಿ ಬರುವುದೇ ದೊಡ್ಡ ಯಾತನೆಯಾಗಿ ಪರಿಣಮಿಸಿದಎ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಈ ಪೋಸ್ಟ್​ಗೆ ಸಾಕಷ್ಟು ಜನರು ಸಾಥ್​ ನೀಡಿದ್ದಾರೆ.

ಮುಂಬೈ ಜೀವನದ ಬಗ್ಗೆ ಬರೆದುಕೊಂಡಿದ್ದೇನು?

ಮುಂಬೈ ಉದ್ಯೋಗಿಯೊಬ್ಬ ಬದ್ಲಾಪುರದಿಂದ ಗೋರೆಗಾಂವ್‌ಗೆ ಪ್ರಯಾಣಿಸಲು ಪಡುತ್ತಿರುವ ಪಾಡನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾನು ಪ್ರತಿದಿನ ಬದ್ಲಾಪುರದಿಂದ ಗೋರೆಗಾಂವ್‌ಗೆ 6 ಗಂಟೆಗಳ ಕಾಲ ಪ್ರಯಾಣಿಸುತ್ತೇನೆ. ನನಗೆ ಈ ಪ್ರಯಾಣದಿಂದ ತುಂಬಾ ಆಯಾಸವಾಗಿದೆ. ನಿತ್ಯ ಮಲಗಲು ಮಾತ್ರ ನಾನು ಮನೆಗೆ ತೆರಳುತ್ತೇನೆ. ಆಫೀಸ್​ ಸುತ್ತಮುತ್ತ ಪಿಜಿಗಾಗಿ ಹುಡುಕಾಡಿದೆ. ಆದರೆ ಎಲ್ಲವೂ ದುಬಾರಿ..ಕಡಿಮೆಗೆ ಸಿಗುವ ಪಿಜಿಗಳಲ್ಲಿ ಸ್ವಚ್ಛತೆಯೇ ಇರೋದಿಲ್ಲ. ಬರುವ 35 ಸಾವಿರ ಸಂಬಳಕ್ಕೆ ನಾನು ಹೇಗೆ ತಾನೆ ದುಬಾರಿ ಹಣ ಕೊಟ್ಟು ಪಿಜಿಯಲ್ಲಿ ಉಳಿದುಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಮಲಗಲು ಮಾತ್ರ ಮನೆಗೆ ಹೋಗ್ತೇನೆ

ಮುಂದುವರೆದು, ನಾನು ಬೆಳಿಗ್ಗೆ 5 ಗಂಟೆಗೆ ಎದ್ದು, 6:30ರ ಸುಮಾರಿಗೆ ಮನೆಯಿಂದ ಹೊರಟು, ಬೆಳಿಗ್ಗೆ 7:15ಕ್ಕೆ ಬದ್ಲಾಪುರ ನಿಲ್ದಾಣದಿಂದ ಲೋಕಲ್ ರೈಲು ಹತ್ತುತ್ತೇನೆ. ದಾದರ್ ತಲುಪಿ ಅಲ್ಲಿ ವೆಸ್ಟರ್ನ್ ಲೈನ್‌ ರೈಲಿಗೆ ಹತ್ತಿ, ಗೋರೆಗಾಂವ್ ನಿಲ್ದಾಣ ತಲುಪುತ್ತೇನೆ. ಅಲ್ಲಿಂದ ಪ್ರತಿದಿನ 30 ನಿಮಿಷಗಳ ಕಾಲ ಶೇರ್ ಆಟೋ ಸಾಲಿನಲ್ಲಿ ನಿಂತು ಅಂತಿಮವಾಗಿ ಕಚೇರಿ ತಲುಪುತ್ತೇನೆ.
ನಾನು ಕಚೇರಿಗೆ ಸುಮಾರು 10 ಗಂಟೆಗೆ ತಲುಪುತ್ತೇನೆ. ರಾತ್ರಿ 7 ಗಂಟೆಗೆ ಕಚೇರಿಯಿಂದ ಹೊರಟು ರಾತ್ರಿ 11 ಗಂಟೆಯೊಳಗೆ ಬದ್ಲಾಪುರದಲ್ಲಿರುವ ನನ್ನ ಮನೆ ತಲುಪುತ್ತೇನೆ. ಭಾನುವಾರ ಮಾತ್ರ ನನಗೆ ರಜೆ ಇರುತ್ತದೆ, ಇದು ನನ್ನ ಪ್ರತಿದಿನದ ದಿನಚರಿ ಎಂದು ಅವರು ಹೇಳಿಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು

ಒಬ್ಬ ರೆಡ್ಡಿಟ್​ ಬಳಕೆದಾರ ಮಾಡತನಾಡಿ,ಪ್ರಯಾಣದ ಕಲ್ಪನೆಯೇ ಸುಸ್ತಾಗಿಸುತ್ತದೆ. ದಯವಿಟ್ಟು ಸಾಧ್ಯವಾದರೆ ವರ್ಕ್ ಫ್ರಮ್ ಹೋಮ್ ಅಥವಾ ರಿಮೋಟ್ ಅವಕಾಶಗಳನ್ನು ಹುಡುಕಿ ಎಂದು ಹೇಳಿಕೊಂಡಿದ್ದಾರೆ. ಬ್ರದರ್, ನೀವು ಪ್ರತಿದಿನ 6 ಗಂಟೆ ಅಲ್ಲ, ಬರೋಬ್ಬರಿ 7.5 ಗಂಟೆ ಪ್ರಯಾಣಿಸುತ್ತಿದ್ದೀರಿ ಎಂದು ಎಚ್ಚರಿಸಿದರು. ನೀವು ಕಚೇರಿಯಿಂದ 1 ಸೆಂ.ಮೀ ದೂರದಲ್ಲಿರಬೇಕಾಗಿಲ್ಲ, 40-60 ನಿಮಿಷಗಳ ಪ್ರಯಾಣದ ವ್ಯಾಪ್ತಿಯಲ್ಲಿ ಕೈಗೆಟುಕುವ ಸ್ಥಳವನ್ನು ಹುಡುಕಿಕೊಳ್ಳಿ ಎಂದು ಮತ್ತೊಬ್ಬ ರೆಡ್ಡಿಟ್​ ಬಳಕೆದಾರರು ಸಲಹೆ ಕೊಟ್ಟರು, (ಏಜೆನ್ಸೀಸ್).