ಮುಂಬೈ: ಶುಕ್ರವಾರ (ಜ.3) ಮಧ್ಯಾಹ್ನ ಅಂಧೇರಿ ಪಶ್ಚಿಮದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ಮುಂಬೈ ಅಗ್ನಿಶಾಮಕ ದಳ ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ವರದಿಯಾಗಿದೆ.
ಬಿಎಂಸಿಯ ಅಗ್ನಿಶಾಮಕ ಇಲಾಖೆಗೆ ಬಂದ ಮಾಹಿತಿಯ ಪ್ರಕಾರ, ಜನವರಿ 3 ರಂದು ಮಧ್ಯಾಹ್ನ 2:10 ಕ್ಕೆ ಅಂಧೇರಿ ಸಬ್‌ವೇ ಎದುರು ಎಸ್ ವಿ ರಸ್ತೆಯಲ್ಲಿರುವ ಚಾಂಡಿವಾಲಾ ಪರ್ಲ್ ರೀಜೆನ್ಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ದೊರತಿದೆ. ಮಾಹಿತಿ ದೊರೆತ ನಂತರ, ಮುಂಬೈ ಪೊಲೀಸರ ತಂಡಗಳು, ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿಯ ಸಿಬ್ಬಂದಿ, ಆಂಬ್ಯುಲೆನ್ಸ್ ಸೇವೆ ಮತ್ತು ಬಿಎಂಸಿ ವಾರ್ಡ್ ಸಿಬ್ಬಂದಿಯೊಂದಿಗೆ ಹಲವಾರು ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ರವಾನಿಸಲಾಯಿತು.
18 ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ 10 ನೇ ಮಹಡಿಯವರೆಗೆ ವಿಸ್ತರಿಸಿದೆ. ವಿದ್ಯುತ್ ಫೈಪ್ಗಳ ಮೂಲಕ ಬೆಂಕಿ ಪಸರಿಸಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ, ಹಾಗೆಯೇ ಎಮ್ಎಫ್ಬಿ ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಕಾರ್ಯಾಚರಣೆ ನಡೆಸುತ್ತಿದೆ.
ಶಾರ್ಟ ಸರ್ಕ್ಯೂಟ್ ನಿಂದ ಅವಘಡ
ಅಧಿಕಾರಿಗಳ ಪ್ರಕಾರ, 10 ಮತ್ತು 21 ನೇ ಮಹಡಿಗಳ ನಡುವಿನ ವಿದ್ಯುತ್ ಸಂಪರ್ಕಕೊಂಡಿಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಅಂದಾಜಿಸಿದ್ದಾರೆ. ಈ ಅವಘಡದಲ್ಲಿ ರೂಟರ್‌ಗಳು, ಶೂ ರ್ಯಾಕ್‌ಗಳು, ಮರದ ಪೀಠೋಪಕರಣಗಳು ಮತ್ತು ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದಾರೆ,(ಏಜನ್ಸೀಸ್).