ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಂಜಯ್ ರಾವತ್
ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಹೊರತಾಗಿಯೂ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಕುಟುಂಬಗಳಲ್ಲಿ ಒಂದಾದ ಠಾಕ್ರೆ ಕುಟುಂಬದ ಬ್ರದರ್ಸ್ ಮನಸ್ಸು ಮಾಡಿದ್ರೆ 10 ನಿಮಿಷಗಳಲ್ಲೇ ಮುಂಬೈ ಬಂದ್ ಮಾಡಬಹುದು ಎಂಬ ಸಂಜಯ್ ರಾವತ್ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಟಾಂಗ್ ನೀಡಿದ್ದಾರೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಪ್ರಚಾರದ ಭಾಗವಾಗಿ ಎನ್ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಸಂಜಯ್ ರಾವತ್ ಅವರಿಗೆ ಒಂದು ಗಂಟೆ ಬಳಿಕ ಅದೇ ವೇದಿಕೆಯಲ್ಲಿ ಸಿಎಂ ಫಡ್ನವೀಸ್, ಇದು ಪೊಳ್ಳು ಬೆದರಿಕೆ, ಗಂಭೀರವಾಗಿ ಪರಿಗಣಿಸಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ಸಂಜಯ್ ರಾವತ್, ಶಿವಸೇನೆಯಿಂದ ಹೊರ ಬಂದ ಬಳಿಕ ಏಕನಾಥ್ ಶಿಂಧೆ ಅವರನ್ನು ಮುಂಬೈಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಆದರೆ ಶಿಂಧೆ 50 ಶಾಸಕರೊಂದಿಗೆ ಮುಂಬೈ ಬಂದು ರಾಜಭವನಕ್ಕೆ ತೆರಳಿ ಸರ್ಕಾರ ರಚನೆ ಮಾಡಿದ್ದರು. ಬಾಳಾ ಠಾಕ್ರೆ ಜೀವಂತವಿದ್ದಾಗ ಮುಂಬೈ ಬಂದ್ ಆಗಬಹುದಿತ್ತು. ಆದರೆ ಇವರಿಂದ ಅದನ್ನು ಮಾಡಲು ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.
ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದೇನು?
ಎನ್ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಸಂಜಯ್ ರಾವತ್, ಮುಂಬೈನಲ್ಲಿ ಠಾಕ್ರೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ನಾವು ಮನಸ್ಸು ಮಾಡಿದ್ರೆ 10 ನಿಮಿಷದಲ್ಲೇ ಮುಂಬೈ ಅನ್ನು ಬಂದ್ ಮಾಡಬಹುದು ಎಂದು ಠಾಕ್ರೆ ಕುಟುಂಬದ ರಾಜಕೀಯ ಶಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದಿದ್ದರು.
ಉದ್ದವ್ ಮತ್ತು ರಾಜ್ ಠಾಕ್ರೆ ಸಹೋದರರು. ಅವರು ತಾಯಂದಿರು ಸಹೋದರಿಯರು. ನಾನು ಎರಡೂ ಕುಟುಂಬಕ್ಕೂ ಸ್ನೇಹಿತ. ಅವರ ಒಂದೂಗೂಡುವಿಕೆಯಲ್ಲಿ ನನ್ನ ಪಾತ್ರವಿದ್ದರೆ ಅದೇ ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಹಿಂದುತ್ವ-ಜಾತ್ಯಾತೀತ ಕಾರ್ಯಸೂಚಿಯಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಶಿವಸೇನೆ, ಕಾಂಗ್ರೆಸ್ ಜೊತೆಗೂಡಿ ಸರ್ಕಾರ ಮಾಡಿತು. ಠಾಕ್ರೆ ಸಹೋದರರ ಸಿದ್ದಾಂತಗಳು ಭಿನ್ನವಾಗಿರಬಹುದು. ಆದರೆ ಅವರು ಮಹಾರಾಷ್ಟ್ರಕ್ಕೆ ಆದ್ಯತೆ ನೀಡಲು ಒಂದಾಗಿದ್ದಾರೆ. ಅಂತಹ ಮೈತ್ರಿ ಮಾಡಿಕೊಳ್ಳುವುದು ಪ್ರಸ್ತುತ ಕಾಲದಲ್ಲಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದರು.
ಠಾಕ್ರೆ ಸಹೋದರರು ಒಂದು ಬ್ರಾಂಡ್, ಠಾಕ್ರೆಗಳು ಬದುಕುಳಿದರೆ ಮರಾಠಿಗಳು ಬದುಕುಳಿಯುತ್ತಾರೆ. ಮೈತ್ರಿಕೂಟಕ್ಕಾಗಿ ರಾಜ್ ಠಾಕ್ರೆ ಅವರ ಎಂಎನ್ಎಸ್ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ದ್ವೇಷದ ರಾಜಕೀಯವು ದೇಶವನ್ನು ಒಡೆಯುತ್ತದೆ. ಮುಂಬರುವ ಬಿಎಂಸಿ ಚುನಾವಣೆಯಲ್ಲಿ ಠಾಕ್ರೆಯವರ ಪಕ್ಷಗಳಿಂದ ಮೇಯರ್ ಆಗುತ್ತಾರೆ. ಉದ್ದವ್ ಮತ್ತು ರಾಜ್ ಠಾಕ್ರೆ ಬೇರೆ ಅಲ್ಲ. ನಾವೆಲ್ಲ ಒಂದೇ, ಮುಂಬೈ ಮೇಯರ್ ನಮ್ಮವರಾಗಿರುತ್ತಾರೆ ಎಂದು ಹೇಳಿದ್ದರು (ಏಜೆನ್ಸೀಸ್).