ಪ್ರತೀಕ್ ಯಾದವ್ ಮತ್ತು ಅಪರ್ಣ ಯಾದವ್
ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಮತ್ತು ಅಖಿಲೇಶ್ ಯಾದವ್ ಅವರ ಮಲಸಹೋದರ ಪ್ರತೀಕ್ ಯಾದವ್(Prateek Yadav) ಇಂದು(ಮೇ 13) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, 38 ವರ್ಷದ ಪ್ರತೀಕ್ ಯಾದವ್ ಅವರನ್ನು ಬೆಳಗ್ಗೆ 6 ಗಂಟೆ ಸುಮಾರಿಗೆ ಲಖನೌದ ಸಿವಿಲ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರತೀಕ್ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಯುಪಿಯ ಅತ್ಯಂತ ಪ್ರಮುಖ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ, ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಪ್ರತಿಷ್ಠಿತ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿರುವ ಪ್ರತೀಕ್, ಲಖನೌದಲ್ಲಿ ವ್ಯಾಪಾರ ಮತ್ತು ಫಿಟ್ನೆಸ್ ಉದ್ಯಮಗಳನ್ನು ನಡೆಸುತ್ತಿದ್ದರು.
ಆದರೆ ಅವರ ಪತ್ನಿ ಅಪರ್ಣ ಯಾದವ್ ರಾಜಕೀಯದಲ್ಲಿದ್ದಾರೆ. ಮೊದಲು ಅವರು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್‌ನಿಂದ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದರು ಆದರೆ ರೀಟಾ ಬಹುಗುಣ ಜೋಶಿ ವಿರುದ್ಧ ಸೋತರು. ಬಳಿಕ 2022ರಲ್ಲಿ ಬಿಜೆಪಿಗೆ ಸೇರಿದರು. ಈಗ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.
2011ರಲ್ಲಿ ಪ್ರತೀಕ್ ಮತ್ತು ಅಪರ್ಣಾ ಮದುವೆಯಾಗಿದ್ದರು, ಇತ್ತೀಚಿಗೆ ವರ್ಷದ ಆರಂಭದಲ್ಲಿ ಪ್ರತೀಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪರ್ಣಾ ಯಾದವ್ ಅವರೊಂದಿಗಿನ ವೈವಾಹಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ, ಈ ಮಹಿಳೆಗೆ ಡಿವೋರ್ಸ್ ನೀಡಲಿದ್ದೇನೆ ಎಂದು ಪೋಸ್ಟ್ ಹಾಕಿದ್ದರು. ಬಳಿಕ ಕುಟುಂಬಸ್ಥರು ಸಮಸ್ಯೆ ಬಗೆಹರಿಸಿದ ಬಳಿಕ ಇಬ್ಬರು ಸಂತೋಷದಿಂದ ಸಂಸಾರವನ್ನು ಮುಂದುವರೆಸಿದ್ದರು (ಏಜೆನ್ಸೀಸ್).