ಪ್ರತೀಕ್ ಯಾದವ್ ಮತ್ತು ಪತ್ನಿ ಅಪರ್ಣಾ ಯಾದವ್
ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್, ಕೆಲ ದಿನಗಳ ಹಿಂದೆ ತಮ್ಮ ಪತ್ನಿ ಅಪರ್ಣಾ ಯಾದವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆಕೆಗೆ ವಿಚ್ಚೇದನ ನೀಡುವುದಾಗಿ ಸಾರ್ವಜನಿಕವಾಗಿ ಇನ್ಸ್ಟಾಗ್ರಾಂನಲ್ಲಿ ಘೋಷಿಸಿದ್ದರು. ಆದರೆ ಇಂದು(ಜ. 28) ಎಲ್ಲವೂ ಚೆನ್ನಾಗಿದೆ ಎಂದು ಯೂಟರ್ನ್ ಹೊಡೆದಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಹೆಂಡತಿಯನ್ನು ಅಪ್ಪಿಕೊಂಡಿರುವ ಫೋಟೋ ಹಾಕಿ ಪೋಸ್ಟ್ ಹಂಚಿಕೊಂಡಿರುವ ಪ್ರತೀಕ್ ಯಾದವ್, ಎಲ್ಲವೂ ಚೆನ್ನಾಗಿದೆ. ತಮ್ಮ ವೃತ್ತಿಪರ, ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವವರೇ ಚಾಂಪಿಯನ್, ನಮ್ಮದು ಚಾಂಪಿಯನ್ ಕುಟುಂಬ ಎಂದು ಬರೆದುಕೊಂಡಿದ್ದಾರೆ.
ಇದೇ ತಿಂಗಳು ಜ. 19ರಂದು ಪ್ರತೀಕ್ ತಮ್ಮ ಪತ್ನಿ ಅಪರ್ಣಾ ಯಾದವ್ ವಿರುದ್ಧ ಸುದೀರ್ಘವಾದ ಪೋಸ್ಟ್ನಲ್ಲಿ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು. ನಾನು ಆದಷ್ಟು ಬೇಗ ಈ ಸ್ವಾರ್ಥಿ ಮಹಿಳೆಯಿಂದ ವಿಚ್ಛೇದನ ಪಡೆಯಲಿದ್ದೇನೆ. ಆಕೆ ನನ್ನ ಕುಟುಂಬದ ಸಂಬಂಧಗಳನ್ನು ಹಾಳುಮಾಡಿದ್ದಾಳೆ. ಆಕೆಗೆ ಕೇವಲ ಪ್ರಸಿದ್ಧಿ, ಪ್ರಭಾವಶಾಲಿಯಾಗುವುದು ಮಾತ್ರ ಬೇಕಿದೆ.
ಪ್ರಸ್ತುತ, ನಾನು ಮಾನಸಿಕವಾಗಿ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇನೆ. ಆಕೆ ಅದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಆಕೆಗೆ ತನ್ನ ಬಗ್ಗೆ ಮಾತ್ರ ಕಾಳಜಿ ಇರುವುದು. ಇಂತಹ ಕೆಟ್ಟ ಗುಣದ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ, ಅಂತಹವಳನ್ನು ಮದುವೆಯಾಗಿದ್ದು ನನ್ನ ದುರಾದೃಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಈ ಆರೋಪಕ್ಕೆ ಪತ್ನಿ ಅಪರ್ಣಾ ಯಾದವ್ ಮತ್ತು ಅವರ ಕುಟುಂಬ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ, ಅವರ ಸಹೋದರ, ಪ್ರತೀಕ್ ಯಾದವ್ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಪೋಸ್ಟ್ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ ಎಂದಿದ್ದರು.
ಮುಲಾಯಂ ಸಿಂಗ್ ಅವರ ಎರಡನೇ ಪತ್ನಿ ಮಗ
ಪ್ರತೀಕ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಯಾದವ್ ಅವರ ಮಗ. ಉತ್ತರ ಪ್ರದೇಶ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಲಸಹೋದರ. 2012ರಲ್ಲಿ ಅಪರ್ಣಾ ಯಾದವ್ ಅವರನ್ನು ಮದುವೆಯಾಗಿದ್ದರು.
ಅಪರ್ಣಾ ಯಾದವ್ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಖನೌದ ಕ್ಯಾಂಟ್ ಸ್ಥಾನದಿಂದ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು. ಬಳಿಕ 2022ರಲ್ಲಿ ಬಿಜೆಪಿ ಸೇರಿದ್ದ ಅವರು, ಪ್ರಸ್ತುತ ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ (ಏಜೆನ್ಸೀಸ್).