ಸಾಂದರ್ಭಿಕ ಚಿತ್ರ 
ದೇಶ

ಬ್ಯಾಂಕ್ ಖಾತೆಗೆ ಕನ್ನ ಹಾಕಲಿದೆ ಮಿಸ್ಟರ್ ರೋಬಾಟ್!ಒಟಿಪಿ ಕಳವು, ಬ್ಯಾಂಕ್ ಕರೆಗೂ ಗಾಳ; ವಂಚಕರಿಗೆ ತಂತ್ರಜ್ಞಾನವನ್ನೇ ಬಾಡಿಗೆಗೆ ನೀಡುವ ಜಾಲ ಪತ್ತೆ

ನವದೆಹಲಿ: ನಿಮ್ಮ ಮೊಬೈಲ್​ಗೆ ಬರುವ ಬ್ಯಾಂಕ್ ಒಟಿಪಿ ಬೇರೆಯವರ ಕೈ ಸೇರಿದರೆ? ಬ್ಯಾಂಕ್​ನಿಂದ ಬರುವ ಪರಿಶೀಲನಾ ಕರೆಗಳೂ ನಿಮಗೆ ತಿಳಿಯದಂತೆ ವಂಚಕರ ಸಂಖ್ಯೆಗೆ ವರ್ಗಾವಣೆಯಾದರೆ? ಇಂಥ ವಂಚನೆಗೆ ನೆರವಾಗುವ ಸೈಬರ್ ಅಪರಾಧಿಗಳ ಜಾಲವೊಂದು ಬೆಳಕಿಗೆ ಬಂದಿದೆ. ಮಿಸ್ಟರ್ ರೋಬಾಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಜಾಲವು ಭಾರತೀಯ ಬ್ಯಾಂಕ್ ಗ್ರಾಹಕರ ಮೊಬೈಲ್​ಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಕ್ಲೌಡ್​ಸೆಕ್ ಪತ್ತೆ ಹಚ್ಚಿದೆ.

ಈ ಜಾಲದ ವಿಶೇಷವೆಂದರೆ, ಇದು ತಾನು ವಂಚನೆ ಮಾಡುವುದಷ್ಟೇ ಅಲ್ಲ; ಇತರ ಸೈಬರ್ ವಂಚಕರಿಗೂ ಹಣ ದೋಚಲು ಬೇಕಾದ ತಂತ್ರಾಂಶಗಳನ್ನು ಬಾಡಿಗೆಗೆ ನೀಡುತ್ತದೆ! ಬ್ಯಾಂಕ್​ಗಳ ಹೆಸರಿನಲ್ಲಿ ನಕಲಿ ಆಪ್​ಗಳನ್ನು ಸೃಷ್ಟಿಸಿ, ಗ್ರಾಹಕರ ಮೊಬೈಲ್​ಗೆ ಅವುಗಳನ್ನು ಸೇರಿಸುವುದು ಇದರ ಪ್ರಮುಖ ತಂತ್ರ.

ಗ್ರಾಹಕರ ಮೊಬೈಲ್​ನಲ್ಲಿ ಆಪ್ ಅಳವಡಿಕೆಯಾದ ಬಳಿಕ ಅದರ ಐಕಾನ್ ಮಾಯವಾಗುತ್ತದೆ. ಆದರೆ, ಅದು ತನ್ನ ಕೆಲಸ ನಿಲ್ಲಿಸುವುದಿಲ್ಲ. ಮೊಬೈಲ್​ಗೆ ಬರುವ ಸಂದೇಶಗಳನ್ನು ಓದಿ ಒಟಿಪಿಗಳನ್ನು ವಂಚಕರಿಗೆ ರವಾನಿಸುತ್ತದೆ. ಜತೆಗೆ, *21 ಕೋಡ್ ಬಳಸಿ ಬ್ಯಾಂಕ್​ನಿಂದ ಬರುವ ಕರೆಗಳನ್ನು ಬೇರೆ ಸಂಖ್ಯೆಗೆ ವರ್ಗಾಯಿಸುವ ಮೂಲಕ ಗ್ರಾಹಕರಿಗೆ ಅನುಮಾನ ಬರದಂತೆ ನೋಡಿಕೊಳ್ಳುತ್ತದೆ!

ಈ ವಂಚನೆಯ ಜಾಲಕ್ಕೆ ಬಿಲ್ ಪಾವತಿಯೂ ಒಂದು ‘ಅಸ್ತ್ರ’ವಾಗಿದೆ. ಒಂಬತ್ತು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್​ಗಳ ನಕಲಿ ಆಪ್​ಗಳು ಸೇರಿದಂತೆ ಸುಮಾರು 36 ಆಪ್​ಗಳನ್ನು ಈ ಜಾಲ ಹೊಂದಿದೆ. ಅನಿಲ, ನೀರು, ವಿದ್ಯುತ್ ಬಿಲ್ ಪಾವತಿ ಹಾಗೂ ವಾಹನ ಸಂಚಾರ ದಂಡ ಪಾವತಿಯ ಹೆಸರಿನಲ್ಲೂ ನಕಲಿ ಆಪ್​ಗಳು ಮತ್ತು ಪುಟಗಳನ್ನು ಈ ಜಾಲ ರೂಪಿಸಿದೆ. ವಾಹನ ದಂಡ ಪಾವತಿಗೆ 9ರಿಂದ 10 ರೂ. ಶುಲ್ಕ ಕೇಳುವ ನೆಪದಲ್ಲಿ ಪ್ಯಾನ್ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರಗಳನ್ನು ಕದಿಯಲಾಗುತ್ತದೆ. ಆಧಾರ್, ಪ್ಯಾನ್, ಬ್ಯಾಂಕ್ ಕಾರ್ಡ್ ಸಂಖ್ಯೆ, ಸಿವಿವಿ, ಎಟಿಎಂ ಪಿನ್, ಯುಪಿಐ ಪಿನ್ ಮತ್ತು ಇಂಟರ್​ನೆಟ್ ಬ್ಯಾಂಕಿಂಗ್ ವಿವರಗಳನ್ನೂ ನಕಲಿ ಪುಟಗಳ ಮೂಲಕ ಸಂಗ್ರಹಿಸಲಾಗುತ್ತದೆ.

ಈ ತಂತ್ರಾಂಶವು ಕನಿಷ್ಠ 48 ಗಂಟೆಗಳ ಕಾಲ ನಿಷ್ಕ್ರಿಯವಾಗಿದ್ದು, ಬಳಿಕ ಕಾರ್ಯಾರಂಭ ಮಾಡುವಂತೆ ರೂಪಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಕಣ್ಣು ತಪ್ಪಿಸಲು ಹೀಗೆ ಮಾಡಲಾಗುತ್ತಿದೆ. ಎರಡು ವಂಚಕ ಗುಂಪುಗಳ ಮಾಹಿತಿಯಲ್ಲೇ 307 ಮೊಬೈಲ್​ಗಳು ಇದರ ‘ಪ್ರಭಾವ’ಕ್ಕೆ ಒಳಗಾಗಿರುವುದು ಮತ್ತು 8,677 ಸಂದೇಶಗಳನ್ನು ಕದ್ದಿರುವುದು ಪತ್ತೆಯಾಗಿದೆ. ಈ ಪೈಕಿ ಶೇ. 58ರಷ್ಟು ಸಂತ್ರಸ್ತರ ಮೊಬೈಲ್​ಗಳಲ್ಲಿ ಕಾಲ್ ಟ್ರಾನ್ಸ್​ಫರ್ (ಕರೆ ವರ್ಗಾವಣೆ) ಸಕ್ರಿಯವಾಗಿತ್ತು ಎಂದು ಕ್ಲೌಡ್​ಸೆಕ್ ತಿಳಿಸಿದೆ.

ಜನರು ವಹಿಸಬೇಕಾದ ಮುನ್ನೆಚ್ಚರಿಕೆ

ಅಪರಿಚಿತ ಲಿಂಕ್​ಗಳ ಮೂಲಕ ಬ್ಯಾಂಕ್ ಅಥವಾ ಬಿಲ್ ಪಾವತಿ ಆಪ್​ಗಳನ್ನು ಡೌನ್​ಲೋಡ್ ಮಾಡಬೇಡಿ. ಆಪ್​ನ ಅಧಿಕೃತತೆಯನ್ನು ಪರಿಶೀಲಿಸಿ. ಅನುಮಾನಾಸ್ಪದ ಆಪ್​ಗಳಿಗೆ ವೈಯಕ್ತಿಕ ಮಾಹಿತಿ, ಪಿನ್ ಅಥವಾ ಬ್ಯಾಂಕ್ ವಿವರಗಳನ್ನು ನೀಡಬೇಡಿ.