ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ
- 300 ಕೋಟಿ ರೂ. ಕೊಟ್ಟರೆ ಮಾತ್ರ ಪಕ್ಷದಲ್ಲಿ ಉಳಿಯೋದು
- ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ ಹಾಕಿರುವ ಡಿಮಾಂಡ್ಗೆ ಪಕ್ಷದಲ್ಲಿ ಗದ್ದಲ
- ನಿರ್ಮಲಾ ಮಾಡುತ್ತಿರುವುದು ಓಪನ್ ರಾಜಕೀಯ ಚೌಕಾಶಿ ಎಂದ 'ಕೈ'
Congress MLA: 300 ಕೋಟಿ ರೂ. ಕೊಟ್ಟರೆ ಮಾತ್ರ ಪಕ್ಷದಲ್ಲಿ ಉಳಿಯೋದು ಎಂದು ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ ಹಾಕಿರುವ ಡಿಮಾಂಡ್ಗೆ ಸದ್ಯ ಮಧ್ಯಪ್ರದೇಶ ರಾಜಕೀಯದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿದೆ.
ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದು ಶಾಸಕಿಯಾದ ಸಪ್ರೆ, ಈಗ ತಮ್ಮದೇ ಪಕ್ಷಕ್ಕೆ 'ಬಿಗ್ ಬಜೆಟ್'ನ ಬೇಡಿಕೆಗಳನ್ನು ಮುಂದಿಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಬಿನಾ ಅಭಿವೃದ್ಧಿಗೆ 300 ಕೋಟಿ ರೂ. ರಿಲೀಸ್ ಮಾಡಿದರೆ ಮಾತ್ರ ನಾನು ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿರುವುದು ಸದ್ಯ 'ಕೈ'ನಲ್ಲಿ ದೊಡ್ಡ ಗದ್ದಲ ಉಂಟಾಗಿದೆ.
ಉಮಾಂಗ್ ಸಿಂಘರ್‌ಗೆ ಓಪನ್ ಚಾಲೆಂಜ್
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ಮಲಾ ಸಪ್ರೆ, ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್‌ಗೆ ಬಹಿರಂಗ ಸವಾಲು ಹಾಕಿದರು. ಬಿನಾ ಅಭಿವೃದ್ಧಿಗೆ 300 ಕೋಟಿ ರೂ. ಕೊಡಬೇಕು. ಅದೇ ರೀತಿ, ಬಿನಾವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಬೇಕು. ಈ ಎರಡು ಬೇಡಿಕೆಗಳು ಈಡೇರಿದರೆ ಮಾತ್ರ ನಾನು ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತೇನೆ. ಇದನ್ನು ಯಾರು ಮಾಡುತ್ತಾರೋ, ಅವರ ಜೊತೆಗೆ ನಾನಿರುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನು ಬಿಜೆಪಿಗೆ ಬರಲು ಸಿದ್ಧ ಎಂದಿದ್ದಾರೆ. ಶಾಸಕಿಯ ಮಾತಿಗೆ ಅತೃಪ್ತಿ ವ್ಯಕ್ತಪಡಿಸಿದ ಮಧ್ಯಪ್ರದೇಶ ಕಾಂಗ್ರೆಸ್, ಇದೊಂದು ರಾಜಕೀಯ ಚೌಕಾಶಿ ಎಂದು ಬಣ್ಣಿಸಿದೆ.
ಬಿಜೆಪಿಗೆ ಕ್ಲೋಸ್ 'ಕೈ' ಶಾಸಕಿ?
ನಿರ್ಮಲಾ ಸಪ್ರೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೂ, ಚುನಾವಣೆಯ ಬಳಿಕ ಹೆಚ್ಚಾಗಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿಎಂ ಮೋಹನ್ ಯಾದವ್ ಮತ್ತು ಹಲವಾರು ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಕಾಂಗ್ರೆಸ್‌ನಲ್ಲಿ ದೊಡ್ಡ ಗದ್ದಲಕ್ಕೆ ಸಾಕ್ಷಿಯಾಗಿದೆ. ಇದು ಅವರು ಇಂದಲ್ಲ, ನಾಳೆ ಬಿಜೆಪಿ ಸೇರುವುದು ಖಚಿತ ಎಂಬ ಊಹಾಪೋಹಗಳನ್ನು ಬಲಪಡಿಸಿದೆ. ಆದಾಗ್ಯೂ, ಅವರು ಇಲ್ಲಿಯವರೆಗೆ ಪಕ್ಷ ಬದಲಾಯಿಸುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತುಟಿ ಬಿಚ್ಚದಿರುವುದು ಗಮನಾರ್ಹ.
ಹೈಕೋರ್ಟ್‌ನಲ್ಲಿದೆ ಕೇಸ್!
ಮತ್ತೊಂದೆಡೆ, ನಿರ್ಮಲಾ ಸಪ್ರೆ ವಿರುದ್ಧ ಪಕ್ಷಾಂತರ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಈಗಾಗಲೇ ಜಬಲ್ಪುರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಕಾಂಗ್ರೆಸ್ ಆರೋಪಗಳ ಪ್ರಕಾರ, ಪಕ್ಷದ ಟಿಕೆಟ್‌ನಲ್ಲಿ ಗೆದ್ದ ನಂತರ, ನಿರ್ಮಲಾ ಸಪ್ರೆ ಪಕ್ಷದ ನೀತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಕಮಲ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅರ್ಜಿಯಲ್ಲಿ ಹೇಳಿದೆ. ಪ್ರಕರಣ ಪ್ರಸ್ತುತ ತನಿಖೆಯಲ್ಲಿದೆ.
ಕಾಂಗ್ರೆಸ್ ಕಿಡಿ, ಬಿಜೆಪಿ ಮೌನ
ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಚಿವ ಪಿಸಿ ಶರ್ಮಾ ಈ ವಿಷಯಕ್ಕೆ ತೀವ್ರವಾಗಿ ಕಿಡಿಕಾರಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, "ನಿರ್ಮಲಾ ಸಪ್ರೆ ಅವರ ಹೇಳಿಕೆಗಳು ರಾಜಕೀಯ ಒತ್ತಡ ಮತ್ತು ಚೌಕಾಶಿಯನ್ನು ಸ್ಪಷ್ಟವಾಗಿ ಎತ್ತಿಹಿಡಿದಿವೆ. ಬಿಜೆಪಿ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹಾನಿ ಮಾಡುವ ಮೂಲಕ ವಿರೋಧ ಪಕ್ಷದ ಶಾಸಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಈ ವಿವಾದಕ್ಕೆ ಇಲ್ಲಿಯವರೆಗೆ ಬಿಜೆಪಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ, ನಿರ್ಮಲಾ ಸಪ್ರೆ ಅವರ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜನರ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಗತ್ಯಗಳಿಗಾಗಿ ತಾವು ಈ ಬೇಡಿಕೆಗಳನ್ನು ಮಾಡುತ್ತಿರುವುದಾಗಿ ಒತ್ತಿ ಹೇಳಿರುವ ನಿರ್ಮಲಾ, ನಿಜವಾಗಿಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೇಳಿದ್ದಾರೆಯೇ ಅಥವಾ ಇದು ರಾಜಕೀಯ ಒತ್ತಡದ ಭಾಗವೇ? ಎಂಬ ಪ್ರಶ್ನೆಗಳು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).