Railway Bedroll (ಚಿತ್ರ X) 
ದೇಶ

ಟ್ರೈನ್ ಬೆಡ್‌ಶೀಟ್ ಕಳ್ಳತನದ ಕಥೆಗೆ ಸಿಕ್ತು ಬಿಗ್ ಟ್ವಿಸ್ಟ್!: ವೆಸ್ಟರ್ನ್ ರೈಲ್ವೆ ಸೀಲ್ ಇರೋ ಕುರ್ತಾ ಧರಿಸಿ ಸಿಕ್ಕಿಬಿದ್ದ ವೃದ್ಧ! Railway Bedroll

Railway Bedroll: ಭಾರತೀಯ ರೈಲ್ವೆಯ ಎಸಿ ಬೋಗಿಗಳಿಂದ ಲಕ್ಷಾಂತರ ಬೆಡ್‌ಶೀಟ್‌ಗಳು, ಹೊದಿಕೆಗಳು ಹಾಗೂ ಟವೆಲ್‌ಗಳು ಕಳ್ಳತನವಾಗುತ್ತಿರುವ ಕುರಿತು ಇತ್ತೀಚೆಗಷ್ಟೇ ಹೊರಬಿದ್ದ ಆರ್‌ಟಿಐ (RTI) ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಯಾಣಿಕರು ನೆನಪಿನ ಕಾಣಿಕೆಯಂತೆ ಅಥವಾ ಬೇಕೆಂದೇ ಕೊಂಡೊಯ್ಯುವ ಈ ಲಿನೆನ್ ವಸ್ತುಗಳ ನಷ್ಟದ ಹೊರೆಯನ್ನು ಕೊನೆಗೆ ರೈಲ್ವೆ ಸಿಬ್ಬಂದಿಯ ವೇತನದಲ್ಲೇ ಕಡಿತಗೊಳಿಸಿ ಭರಿಸಲಾಗುತ್ತದೆ. ಈ ಗಂಭೀರ ವಿಷಯದ ನಡುವೆಯೇ, ಮಧ್ಯಪ್ರದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಭಾರಿ ವೈರಲ್ ಆಗಿದೆ.

ಏನಿದು ಘಟನೆ?

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಗೌರಿಹಾರ್ ಮಾರುಕಟ್ಟೆಯಲ್ಲಿ ವೃದ್ಧರೊಬ್ಬರು ಅತ್ಯಂತ ಗತ್ತಿನಿಂದ ಅಡ್ಡಾಡುತ್ತಿದ್ದು, ಅವರು ಧರಿಸಿದ್ದ ಬಿಳಿ ಕುರ್ತಾ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಏಕೆಂದರೆ, ಆ ಕುರ್ತಾವನ್ನು ಭಾರತೀಯ ರೈಲ್ವೆಯ ಬೆಡ್‌ಶೀಟ್‌ನಿಂದ ಹೊಲಿಸಲಾಗಿತ್ತು.
ರಂಜಿತ್ ಸಿಂಗ್ ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇಲ್ಲಿ ನೋಡಿ, ಗೌರಿಹಾರ್ ಮಾರ್ಕೆಟ್‌ನಲ್ಲಿ ಈ ವ್ಯಕ್ತಿ ವೆಸ್ಟರ್ನ್ ರೈಲ್ವೆಯ ಸೀಲ್ ಇರುವ ಬೆಡ್‌ಶೀಟ್‌ನ ಕುರ್ತಾ ಹಾಕಿಕೊಂಡು ಎಷ್ಟು ಗತ್ತಿನಿಂದ ಓಡಾಡುತ್ತಿದ್ದಾರೆ. ಎಂದು ಬರೆದು ಪೋಸ್ಟ್​ ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ವಿಡಿಯೋ ಮಾಡುವುದನ್ನು ನೋಡಿದ ಆ ವ್ಯಕ್ತಿ ಸ್ವಲ್ಪ ಮುಜುಗರಪಟ್ಟುಕೊಂಡು ಮುನ್ನೆಚ್ಚರಿಕೆ ವಹಿಸಿದಂತೆ ಕಂಡರೂ, ನಂತರ ಯಾವುದೇ ಹಿಂಜರಿಕೆಯಿಲ್ಲದೇ ಅದೇ ಕುರ್ತಾದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 
ಇಂಟರ್ನೆಟ್ ಪ್ರತಿಕ್ರಿಯೆ
ಈ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆದಿದ್ದು, ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ ರೈಲ್ವೆ ಸಾರ್ವಜನಿಕರ ಆಸ್ತಿ ಎಂಬ ಮಾತನ್ನು ಈ ವ್ಯಕ್ತಿ ತೀರಾ ಗಂಭೀರವಾಗಿ ಪರಿಗಣಿಸಿದ ಹಾಗಿದೆ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರ ಅವರು ಇದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರಬಹುದು ಎಂದು ತಮಾಷೆಯಾಗಿ ಬರೆದಿದ್ದಾರೆ.
ಮೊದಲನೆಯದಾಗಿ, ಅವರಿಗೆ ಈ ಬೆಡ್‌ಶೀಟ್ ಸಿಕ್ಕಿದ್ದಾದರೂ ಹೇಗೆ? ಇದು ಖಂಡಿತವಾಗಿಯೂ ರೈಲ್ವೆ ಅಧಿಕಾರಿಗಳ ವೈಫಲ್ಯ. ಅವರು ಸೌಕರ್ಯಗಳಿಲ್ಲದ ಸ್ಥಳೀಯ ಪ್ರಯಾಣಿಕರಿಗೂ ಬೇಕಾಬಿಟ್ಟಿ 3-ಎಸಿ ಬೋಗಿಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಇಲ್ಲಿ ಯಾವುದೇ ಕಟ್ಟುನಿಟ್ಟಿನ ನಿಯಮಗಳಾಗಲಿ ಅಥವಾ ಕಾನೂನುಗಳಾಗಲಿ ಜಾರಿಯಲ್ಲಿಲ್ಲ. ಹೀಗೆಯೇ ಬಿಟ್ಟರೆ ಶೀಘ್ರದಲ್ಲೇ ಈ ಜನರು 1-ಎಸಿ ಬೋಗಿಗಳಿಗೂ ನುಗ್ಗುತ್ತಾರೆ, ಆದರೆ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್​).