ಗಂಡ ಅಥವಾ ಹೆಂಡತಿ ಬದುಕಿರುವಾಗಲೇ ವಿವಾಹೇತರ ಸಂಬಂಧ ಇಟ್ಟುಕೊಂಡರೆ 5 ವರ್ಷಗಳ ಕಠಿಣ ಶಿಕ್ಷೆ! Extramarital affair 
ದೇಶ

ಗಂಡ ಅಥವಾ ಹೆಂಡತಿ ಬದುಕಿರುವಾಗಲೇ ವಿವಾಹೇತರ ಸಂಬಂಧ ಇಟ್ಟುಕೊಂಡರೆ 5 ವರ್ಷಗಳ ಕಠಿಣ ಶಿಕ್ಷೆ! Extramarital affair

ಪ್ರಮುಖ ಮುಖ್ಯಾಂಶಗಳು

  • ವಿವಾಹಿತರು ಲಿವ್ ಇನ್ ಸಂಬಂಧದಲ್ಲಿ ತೊಡಗಿದರೆ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಮಧ್ಯಪ್ರದೇಶ ಸರ್ಕಾರದ ನಿರ್ಧಾರ
  • ಏಕರೂಪ ನಾಗರಿಕ ಸಂಹಿತೆಯಡಿ ಅನೈತಿಕ ಹಾಗೂ ವಿವಾಹೇತರ ಸಂಬಂಧಗಳಿಗೆ ಬ್ರೇಕ್ ಹಾಕಲು ಕಠಿಣ ಕಾನೂನು ಜಾರಿಗೆ ಮುಂದಾದ ಮಧ್ಯಪ್ರದೇಶ ಸರ್ಕಾರ
  • ಜೀವಂತವಾಗಿರುವ ಸಂಗಾತಿಯ ಹೊರತಾಗಿ ಮತ್ತೊಂದು ಮದುವೆ ಸಂಪೂರ್ಣ ನಿಷೇಧಿಸಿ ಯುಸಿಸಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ
  • ಮಧ್ಯಪ್ರದೇಶದಲ್ಲಿ ಲಿವ್ ಇನ್ ಸಂಬಂಧಕ್ಕೆ ಕಾಲಿಡುವ ಜೋಡಿಗಳಿಗೆ ಒಂದು ತಿಂಗಳೊಳಗೆ ಕಡ್ಡಾಯ ನೋಂದಣಿ ನಿಯಮ
ಭೋಪಾಲ್: ವಿವಾಹಿತ ವ್ಯಕ್ತಿಗಳು ಅನೈತಿಕವಾಗಿ ಲಿವ್-ಇನ್ ರಿಲೇಷನ್​ಶಿಪ್​ ಅಥವಾ ವಿವಾಹೇತರ ಸಂಬಂಧಗಳಲ್ಲಿ ( Extramarital affair ) ತೊಡಗಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಮಧ್ಯಪ್ರದೇಶ ಸರ್ಕಾರ ಅತ್ಯಂತ ಕಠಿಣ ಹಾಗೂ ಐತಿಹಾಸಿಕ ಕಾನೂನು ಕ್ರಮಕ್ಕೆ ಮುಂದಾಗಿದೆ.
ಏಕರೂಪ ನಾಗರಿಕ ಸಂಹಿತೆಯ (UCC) ಅಡಿಯಲ್ಲಿ ಹೊಸ ವಿಧೇಯಕವನ್ನು ತರಲಾಗುತ್ತಿದ್ದು, ಮೊದಲ ಹೆಂಡತಿ ಅಥವಾ ಗಂಡ ಜೀವಂತವಾಗಿದ್ದಾಗ ಮತ್ತೊಬ್ಬರ ಜೊತೆ ಲಿವ್-ಇನ್ ಸಂಬಂಧ ಅಥವಾ ವಿವಾಹೇತರ ಸಂಬಂಧ ಹೊಂದುವ ಪುರುಷರಿಗೆ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಸಾಮಾಜಿಕ ಶಿಸ್ತು ಕಾಪಾಡುವುದು ಮತ್ತು ಕುಟುಂಬ ವ್ಯವಸ್ಥೆಯನ್ನು ಭದ್ರಪಡಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ.
ಈ ನೂತನ ಕಾಯಿದೆಯ ಪ್ರಕಾರ, ಒಬ್ಬ ಸಂಗಾತಿ ಜೀವಂತವಾಗಿರುವಾಗ ಮತ್ತೊಂದು ಮದುವೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ದಂಪತಿ ನಡುವೆ ವಿಚ್ಛೇದನ ಬೇಕಿದ್ದಲ್ಲಿ ಕೇವಲ ಕಾನೂನುಬದ್ಧ ಪ್ರಕ್ರಿಯೆಗಳು ಹಾಗೂ ನ್ಯಾಯಾಲಯದ ಮೂಲಕವೇ ಪಡೆಯುವುದು ಕಡ್ಡಾಯವಾಗಿದೆ. ಅನಧಿಕೃತ ಮದುವೆ ಹಾಗೂ ದಾಂಪತ್ಯ ದ್ರೋಹ ತಡೆಯಲು ವಿಚ್ಛೇದನದ ನಿಯಮಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ.
ಮದುವೆಯ ವಯೋಮಿತಿಯನ್ನು ಪುರುಷರಿಗೆ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷ ಎಂದು ನಿಗದಿಪಡಿಸಲಾಗಿದ್ದು, ಲಿವ್-ಇನ್ ಸಂಬಂಧಕ್ಕೂ ಇದೇ ವಯೋಮಿತಿ ಅನ್ವಯವಾಗಲಿದೆ. ಜೊತೆಗೆ, ಲಿವ್-ಇನ್ ಸಂಬಂಧಕ್ಕೆ ಕಾಲಿಡುವ ಜೋಡಿಗಳು ಸಂಬಂಧ ಪ್ರಾರಂಭವಾದ ಒಂದು ತಿಂಗಳ ಒಳಗಾಗಿ ಸರ್ಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ನಿಯಮ ಮೀರಿದರೆ ಕಾನೂನುಬದ್ಧ ಶಿಕ್ಷೆ ಎದುರಿಸಬೇಕಾಗುತ್ತದೆ.
ಮದುವೆ, ಆಸ್ತಿ ಹಕ್ಕು, ಲಿವ್-ಇನ್ ಸಂಬಂಧ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಆದರೆ, ರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳು (ST) ಮತ್ತು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (PVTG) ಈ ಹೊಸ ಕಾನೂನಿನ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ.
ಜಗದೀಶ್‌ಪುರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಮಸೂದೆಗೆ ಒಮ್ಮತದ ಅನುಮೋದನೆ ದೊರೆತಿದ್ದು, ನಾಳೆಯಿಂದ ಆರಂಭವಾಗಲಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು. ಸಂಪುಟದ ಎಲ್ಲಾ ಸಚಿವರೂ ಈ ಕಾಯಿದೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ, (ಏಜೆನ್ಸೀಸ್​).