ಬಾಯಲ್ಲಿ ಹಾವು ಹಿಡಿದ ಒಡಿಶಾ ಭೂಪ
- ಯಾರೇ ಆಗಿರಲಿ ಹಾವನ್ನು ಕೈಯಲ್ಲಿ ಹಿಡಿಯುವುದನ್ನು ನಾವು ನೋಡಿರುತ್ತವೆ
- ಆದರೆ ಇಲ್ಲೊಬ್ಬ ವ್ಯಕ್ತಿ ಕೈಯಲ್ಲ, ಬಾಯಿಯಿಂದ ಹಾವು ಹಿಡಿಯುತ್ತಾನೆ
- ವೈರಲ್ ವಿಡಿಯೋ ನೋಡಿದರೆ ನಿಮ್ಮ ಎದೆ ಒಂದು ಕ್ಷಣ ಝಲ್ ಎಂದರೂ ಅಚ್ಚರಿಪಡಬೇಕಿಲ್ಲ
ನವದೆಹಲಿ: ಸಾಮಾನ್ಯವಾಗಿ ಉರಗ ಪ್ರೇಮಿಗಳು ಅಥವಾ ಉರಗ ರಕ್ಷಕರು ಅಥವಾ ಯಾರೇ ಆಗಿರಲಿ ಹಾವನ್ನು ( Snake Catchers ) ಕೈಯಲ್ಲಿ ಹಿಡಿಯುವುದನ್ನು ನಾವು ನೋಡಿರುತ್ತವೆ. ಆದರೆ, ಬಾಯಲ್ಲಿ ಹಿಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದನ್ನು ಕೇಳಿದ್ರೆ ಸಾಕು ಮೈಯಲ್ಲಿರುವ ರೋಮ ಎದ್ದು ನಿಲ್ಲುತ್ತದೆ. ಹೀಗಿರುವಾಗ, ವಿಡಿಯೋ ನೋಡಿದರೆ ನಿಮ್ಮ ಎದೆ ಒಂದು ಕ್ಷಣ ಝಲ್ ಎಂದರೂ ಅಚ್ಚರಿಪಡಬೇಕಿಲ್ಲ.
ಹೌದು, ಇಲ್ಲೊಬ್ಬ ವ್ಯಕ್ತಿ ಕೈಯಲ್ಲ, ಬಾಯಿಯಿಂದ ಹಾವು ಹಿಡಿಯುತ್ತಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಯಿಂದ ಹಾವು ಹಿಡಿಯುವ ಭೂಪನನ್ನು ಖಾಗ ಭಾಯ್ ಎಂದು ಗುರುತಿಸಲಾಗಿದೆ. ಈತ ಒಡಿಶಾದ ಬಾಲಾಸೋರ್ ಜಿಲ್ಲೆಯ ರೆಮುನಾ ಮೂಲದ ನಿವಾಸಿ.
ವಿಡಿಯೋದಲ್ಲಿ ಏನಿದೆ?
ಖಾಗ ಭಾಯ್, ತನ್ನ ಬಾಯನ್ನು ಹಾವಿನ ಹತ್ತಿರ ತೆಗೆದುಕೊಂಡು ಹೋಗಿ ಕ್ಷಣ ಮಾತ್ರದಲ್ಲೇ ಹಾವಿನ ಬಾಯಿಯನ್ನು ಲಾಕ್ ಮಾಡುತ್ತಾನೆ. ಇದನ್ನು ಎಷ್ಟು ವೇಗದಲ್ಲಿ ಮಾಡುತ್ತಾನೆ ಅಂದರೆ, ಪ್ರತಿಕ್ರಿಯಿಸಲು ಹಾವಿಗೂ ಕೂಡ ಸಮಯ ಇರುವುದಿಲ್ಲ. ಹಾವನ್ನು ಬಾಯಿಂದ ಹಿಡಿದ ಬಳಿಕ, ಆತ ಅದನ್ನು ಬಾಯಿಯಲ್ಲೇ ಹಿಡಿದುಕೊಂಡು ತಿರುಗಾಡುತ್ತಾನೆ. ಇದಾದ ಬಳಿಕ ಅದನ್ನು ನೆಲದ ಮೇಲೆ ಬಿಟ್ಟು ತನ್ನ ಬರಿ ಕೈಗಳಿಂದ ಹಿಡಿದುಕೊಳ್ಳುತ್ತಾನೆ. ಒಂದು ಹಂತದಲ್ಲಿ, ಯಾರೋ ಅವನಿಂದ ಹಾವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ, ಆತ ಆ ವ್ಯಕ್ತಿಯನ್ನು ದೂರ ತಳ್ಳಿ, ಹಿಂದೆ ನಿಲ್ಲುವಂತೆ ಕೇಳುತ್ತಾನೆ. ಜನಸಮೂಹ ಈ ಧೈರ್ಯಶಾಲಿ ಕೃತ್ಯಕ್ಕೆ ಸಾಕ್ಷಿಯಾಗುತ್ತದೆ. ಇದಾದ, ಕೆಲವು ಸೆಕೆಂಡುಗಳ ನಂತರ, ಅವನು ಹಾವನ್ನು ನಿಧಾನವಾಗಿ ನೆಲದ ಮೇಲೆ ಇಟ್ಟು, ಅದರೊಂದಿಗೆ ಆಟವಾಡುತ್ತಾನೆ. ನಂತರ, ಯಾವುದೇ ಉಪಕರಣಗಳಿಲ್ಲದೆ, ಅದನ್ನು ಚೀಲದಲ್ಲಿ ಹಾಕಿಕೊಳ್ಳುತ್ತಾನೆ. ವಿಡಿಯೋ ಕೊನೆಯಲ್ಲಿ ಆತ ಮತ್ತೊಂದು ಹಾವನ್ನು ಎತ್ತಿಕೊಳ್ಳುವುದನ್ನು ಸಹ ಕಾಣಬಹುದು.
ಇದಕ್ಕೂ ಮೊದಲು ನಡೆದ ಇನ್ನೊಂದು ಘಟನೆಯಲ್ಲಿ, ಮದ್ಯದ ಅಮಲಿನಲ್ಲಿ ಮನೆಗೆ ಹೋಗುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನಿಗೆ ವಿಷಪೂರಿತ ಕಪ್ಪು ಕ್ರೈಟ್ ಹಾವು ಕಚ್ಚುತ್ತದೆ. ಈ ವೇಳೆ ಆತ ಸಹಾಯಕ್ಕಾಗಿ ಓಡುವ ಬದಲು, ಹಾವನ್ನು ಹಿಡಿದುಕೊಂಡು ಅದರ ತಲೆಯನ್ನು ಕಚ್ಚಿದ್ದಾನೆ. ಇದಾದ ನಂತರ, ಆತ ಸತ್ತ ಹಾವನ್ನು ಮನೆಗೆ ಹೊತ್ತುಕೊಂಡು ಹೋಗಿ, ತನ್ನ ಪಕ್ಕದಲ್ಲೇ ಇಟ್ಟುಕೊಂಡು, ಮಲಗಿದ್ದಾನೆ. ಮಧ್ಯರಾತ್ರಿಯ ಹೊತ್ತಿಗೆ ವಿಷವು ಆತನ ದೇಹದಾದ್ಯಂತ ಹರಡಿ, ಆತನ ಆರೋಗ್ಯ ಸ್ಥಿತಿ ಹದಗೆಟ್ಟಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ, (ಏಜೆನ್ಸೀಸ್).